ಬೆಂಗಳೂರು: ಅರಮನೆ ಮೈದಾನದಲ್ಲಿ ಸಂಭ್ರಮದ ವಾತಾವರಣ. ಒಂದೆಡೆ ಕಣ್ಣಿಗೆ ಮುದ ನೀಡುವ ಇದೇ ಮೊದಲ ಬಾರಿಗೆ ಕರಾವಳಿಯ ಕೋಣಗಳ ಓಟದ ಸ್ಪರ್ಧೆ ರಾಜಧಾನಿಯಲ್ಲಿ ನಡೆಯುತ್ತಿದ್ದರೆ, ಕಿವಿಗೆ ತಂಪು ನೀಡಲು ಸಾಂಸ್ಕೃತಿಕ ವೈಭವದ ಆಯೋಜನೆ ನಡೆದಿದ್ದರೆ, ಮತ್ತೊಂದೆಡೆ ಹೊಟ್ಟೆ ಹಸಿವನ್ನು ತಣಿಸುವ ರುಚಿಕರ ಅಡುಗೆ ಸಿದ್ದವಾಗುತ್ತಿದೆ.
ಬೆಂಗಳೂರು ಕಂಬಳಕ್ಕೆ ಆಗಮಿಸಿರುವ ಅತಿಥಿಗಳಿಗೆ, ಕೋಣಗಳ ಯಜಮಾನರಿಗೆ, ಪರಿಚಾರಕರಿಗೆ, ಸ್ವಯಂ ಸೇವಕರಿಗೆ ಸೇರಿ ಸಾವಿರಾರು ಮಂದಿಗೆ ದಿನಕ್ಕೆ ಮೂರು ಬರಿ ಎಂಬಂತೆ ಮೂರೂ ದಿನವೂ ವಿಶೇಷ ಅಡಿಗೆ ಸಿದ್ಧವಾಗುತ್ತಿದೆ. ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ಸಿದ್ಧವಾಗುತ್ತಿದೆ. ಕುಚ್ಚಿಗೆ ಅಕ್ಕಿ ಅನ್ನ, ಮೂಡೆ, ಬಿಸ್ಕುಟ್ ಅಂಬಡೆ ಸೇರಿದಂತೆ ಅಪ್ಪಟ ಕರಾವಳಿ ಶೈಲಿಯ ಭೋಜನ ಕಂಬಳಕ್ಕೆ ಬಂದವರ ಹೊಟ್ಟೆ ತಣಿಸಲಿದೆ.
ದೀಪಿಕಾ ಮದುವೆಗೆ ಊಟ ತಯಾರು ಮಾಡಿದ್ದವರಿಂದ ಅಡುಗೆ
ಬೆಂಗಳೂರು ಕಂಬಳದ ವಿಶೇಷ ಏನೆಂದರೆ ಪ್ರಸಿದ್ಧ ಬಾಲಿವುಡ್ ಸೆಲೆಬ್ರೆಟಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಇಟಲಿಯಲ್ಲಿ ನಡೆದ ಮದುವೆಯಲ್ಲಿ ವಿಶೇಷ ಅಡುಗೆ ತಯಾರು ಮಾಡಿದ್ದ ಬಾಣಸಿಗ ಈ ಬಾರಿ ಬೆಂಗಳೂರು ಕಂಬಳದಲ್ಲಿ ಅಡುಗೆ ತಯಾರು ಮಾಡುತ್ತಿದ್ದಾರೆ. ಬೆಂಗಳೂರಿನ ಸೋನಾ ಕೇಟರಿಂಗ್ ನ ಮಾಲೀಕ ಸೋನಾ ಗಣೇಶ್ ನಾಯಕ್ ಅವರ 150 ಸಿಬ್ಬಂದಿಗಳ ತಂಡವು ಭೋಜನ ತಯಾರು ಮಾಡುತ್ತಿದೆ.
ಬೆಳಗಿನ ಉಪಹಾರಕ್ಕೆ ಮೂಡೆ ಸಾಂಬಾರ್, ಬನ್ಸ್, ದೋಸೆ, ಬಿಸ್ಕುಟ್ ಅಂಬಡೆ, ಪಲಾವ್ ಸೇರಿ ಹಲವು ಬಗೆಗಳ ತಿಂಡಿ ಮಾಡಲಾಗಿದೆ. ಊಟಕ್ಕೆ ಕೂಡ ಅಪ್ಪಟ ಕರಾವಳಿ ಶೈಲಿಯ ಭೋಜನ ತಯಾರಾಗುತ್ತಿದೆ. ಕುಚ್ಚಲಕ್ಕಿ ಅನ್ನ, ಗಂಜಿ, ಚಿಕನ್ ಪುಳಿಮುಂಚಿ, ಕಬಾಬ್, ಮೀನು ಊಟ ಭೋಜನ ಪ್ರಿಯರ ಹೊಟ್ಟೆ ತಣಿಸಲಿದೆ.
ಐದು ಸಾವಿರ ಮೂಡೆ, ಹತ್ತು ಸಾವಿರ ಬಿಸ್ಕುಟ್ ಅಂಬಡೆ, 500 ಕೆಜಿ ಪಲಾವ್ ಮಾಡಲಾಗಿದ್ದರೆ, 1000 ಕೆಜಿ ಚಿಕನ್, 5000 ಬಂಗುಡೆ ಮೀನು, ಒಂದು ಟನ್ ಕುಚ್ಚಲಕ್ಕಿ ಒಂದು ಹೊತ್ತಿನ ಊಟಕ್ಕೆ ಬಳಸಲಾಗುತ್ತಿದೆ.
ಒಂದು ಸಮಯಕ್ಕೆ 15 ರಿಂದ 20 ಸಾವಿರ ಜನರಿಗೆ ಆಗುವಷ್ಟು ಅಡುಗೆ ಮಾಡುತ್ತಿದ್ದೇವೆ. ಕರಾವಳಿ ಶೈಲಿಯ ಅಡುಗೆಯನ್ನು ಬೆಂಗಳೂರಿನ ಜನರಿಗೆ ಪರಿಚಯ ಮಾಡಲು ಇದು ಉತ್ತಮ ಅವಕಾಶ. ಎಲ್ಲ ತುಳುವರು ಸೇರಿ ಒಂದೇ ಕುಟುಂಬದವರಂತೆ ಒಟ್ಟಾಗಿ ಕಂಬಳ ಕೂಟ ಆಯೋಜನೆ ಮಾಡುತ್ತಿದ್ದಾರೆ ಎನ್ನುತ್ತಾರೆ ಸೋನಾ ಗಣೇಶ್ ನಾಯಕ್ ಅವರು.
ಫೋಟೋ- ವರದಿ: ಕೀರ್ತನ್ ಶೆಟ್ಟಿ ಬೋಳ