Advertisement

Bengaluru ಕಂಬಳಕ್ಕೆ ಅದ್ದೂರಿ ತೆರೆ: ಲಕ್ಷಾಂತರ ಜನರು ಭಾಗಿ

12:59 AM Nov 27, 2023 | Team Udayavani |

ಬೆಂಗಳೂರು: ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆದ “ಬೆಂಗಳೂರು ಕಂಬಳ ನಮ್ಮ-ಕಂಬಳ’ಕ್ಕೆ ರವಿವಾರ ರಾತ್ರಿ ತೆರೆ ಬಿತ್ತು.

Advertisement

ರಿಷಬ್‌ ಶೆಟ್ಟಿ ಅಭಿನಯದ “ಕಾಂತಾರ’ ಚಿತ್ರದಲ್ಲಿ ಓಡಿದ್ದ ಕೋಣ ಚಿನ್ನದ ಪದಕ ಪಡೆದುಕೊಂಡಿತು. ಬೊಳಂಬಳ್ಳಿ ಪರಮೇಶ್ವರ್‌ ಭಟ್ಟ ಅವರ ಅಪ್ಪು ಕುಟ್ಟಿ 6.5 ಕೋಲು ನೀರು ಚಿಮ್ಮಿಸಿ ಕೆನೆಹಲಗೆ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದೆ.

ಇನ್ಮುಂದೆ ಮುಂಬಯಿಯಲ್ಲೂ ಆಯೋಜಿಸುವ ಚಿಂತನೆ ವ್ಯಕ್ತವಾಗಿದೆ. ಜತೆಗೆ ಪ್ರೀಮಿಯರ್‌ ಲೀಗ್‌ನಂತೆ ಕಂಬಳದ ಲೀಗ್‌ ನಡೆಸುವ ಮುನ್ಸೂಚನೆ ಮೇಲ್ಮೋಟಕ್ಕೆ ಕಂಡ ಬರುತ್ತಿದೆ. ಕಂಬಳ ಆಯೋಜನೆ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟವರು ಪಡೆದುಕೊಂಡಿದ್ದಾರೆ.

ಕಂಬಳವನ್ನು ರಜಾದಿನಗಳಲ್ಲಿ ಹಮ್ಮಿಕೊಂಡ ಕಾರಣ 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಸಂಭ್ರಮಿಸಿದರು. ಕೊನೆಯ ದಿನದ ಕಂಬಳದಲ್ಲಿ ಎಲ್ಲಿ ನೋಡಿದರೂ ಜನರ ದಂಡು, ನೂಕು ನುಗ್ಗಲು, ಜಾತ್ರೆಯ ವಾತಾವರಣ ವಿಶೇಷವಾಗಿತ್ತು.

ವೀಕ್ಷಕರ ವಿವರಣೆಗೆ 30 ಮಂದಿ!
ಕಂಬಳದಲ್ಲಿ ಕೋಣಗಳು ಓಡುವುದು ಎಷ್ಟು ಮುಖ್ಯವೋ ವೀಕ್ಷಕ ವಿವರಣೆ ಕೂಡ ಅಷ್ಟೇ ಮುಖ್ಯ. ಈ ಬಾರಿ ಬೆಂಗಳೂರು ಕಂಬಳಕ್ಕೆ ಕರಾವಳಿಯಿಂದ 30 ಮಂದಿ ವೀಕ್ಷಕ ವಿವರಣೆಗಾರರ ತಂಡ ಕೆಲಸ ಮಾಡಿತ್ತು. ಇವರು ಪ್ರತಿ ನಾಲ್ಕು ಗಂಟೆಯ ಪಾಳಿಯಲ್ಲಿ ದುಡಿದಿದ್ದರು.

Advertisement

ಮನಸೋತ ಪ್ರೇಕ್ಷಕರು
ಕೃಷ್ಣರಾಜ ಒಡೆಯರ್‌ ವೇದಿಕೆಯಲ್ಲಿ ಎರಡು ದಿನಗಳಿಂದ ಯಕ್ಷಗಾನ, ಆಟಿ ಕಳಂಜ, ಹುಲಿ ವೇಷ, ಕಂಗೀಲು ನೃತ್ಯ, ಮಂಕಾಳಿ ನಲಿಕೆ, ಬಾಲಿವುಡ್‌ ಸಮಕಾಲೀನ ನೃತ್ಯ, ಕಂಬಳದ ಪದ ನಲಿಕೆ, ಚೆನ್ನು ನಲಿಕೆ ಮುಂತಾದವು ಮನರಂಜನೆ ನೀಡಿತು. ಆಕ್ಸಿಜನ್‌ ಡ್ಯಾನ್ಸ್‌ ತಂಡ ನಡೆಸಿಕೊಟ್ಟ ನೃತ್ಯಕ್ಕೆ ಪ್ರೇಕ್ಷಕರು ಮಾರು ಹೋದರು. ಪ್ರಶಂಸಾ ಮಂಗಳೂರು ಹಾಗೂ ಕಾಮಿಡಿ ಕಿಲಾಡಿ ತಂಡದವರಿಂದ ಕಾಮಿಡಿ ಶೋ ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಗಾಯಕಿಯರಾದ ಇಂದು ನಾಗರಾಜ್‌, ಶಮಿತಾ ಮಲಾ°ಡ್‌ ಹಾಗೂ ಗುರುಕಿರಣ್‌ ನಡೆಸಿಕೊಟ್ಟ ಸಂಗೀತ ಸಂಜೆ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಮಂದಿ ಮುಗಿಬಿದ್ದರು.

ಕರಾವಳಿ ಖಾದ್ಯ ರುಚಿ!
ಕರಾವಳಿ ಖಾದ್ಯಕ್ಕೆ ಬೆಂಗಳೂರಿಗರು ಮನಸೋತರು. ತಾಜಾ ಬಂಗಡೆ, ಅಂಜಲ್‌, ಸಿಗಡಿ, ಮುರವಾಯಿ, ಬೂತಾಯಿ, ಬೊಂಡಾಸ್‌, ಏಡಿ, ಕಾಣೆ ಮೀನು ತಿಂದು ಕರಾವಳಿ ಖಾದ್ಯಕ್ಕೆ ತಲೆದೂಗಿದರು. ಕರಾವಳಿ ಕಂಬಳದ ವಿಶೇಷವಾಗಿರುವ ಮುಂಡಕ್ಕಿ, ಜಿಲೇಬಿ, ಮಿಠಾಯಿ, ಲಾಡುಗಳನ್ನು ಖರೀದಿಸಿ ಸ್ವಾದವನ್ನು ಆಸ್ವಾದಿಸಿದರು.

ಪ್ರೇಕ್ಷಕರಿಗೆ ಗಿಫ್ಟ್ ಕೂಪನ್‌
ವೀಕ್ಷಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಗೋಲ್ಡ್‌ ಫಿಂಚ್‌ ಸಂಸ್ಥೆಯು ಕಂಬಳಕ್ಕೆ ಬರುವ ಎಲ್ಲರಿಗೂ ಉಚಿತವಾಗಿ ಕೊಟ್ಟಿರುವ ಗಿಫ್ಟ್ ಕೂಪನ್‌ ಪಡೆಯುವಲ್ಲಿ ಭಾರೀ ಜನಸಂದಣಿ ಉಂಟಾಯಿತು. ಕಂಬಳ ನಡೆಯುವ ಜಾಗದಲ್ಲಿ 3 ಕಡೆಗಳಲ್ಲಿ ಇರಿಸಲಾಗಿರುವ ಬಾಕ್ಸ್‌ಗಳಲ್ಲಿ ಕೂಪನ್‌ ಸ್ಲಿಪ್‌ ಹಾಗೂ ಮೊಬೈಲ್‌ ನಂಬರ್‌ ಬರೆದು ಹಾಕಿದರು. ವಿಜೇತರು 1 ಕಾರು, 1 ಬುಲೆಟ್‌ ಬೈಕ್‌, 1 ಎಲೆಕ್ಟ್ರಿಕ್‌ ಬೈಕ್‌ ಅನ್ನು ಬಹುಮಾನ ಪಡೆಯಲಿದ್ದಾರೆ.

ಕಂಬಿನಿಯ ವಿದಾಯ
ಕಂಬಳ ಮುಗಿಸಿ ಕರಾವಳಿಯತ್ತ ಹೊರಟ ಕೋಣಗಳನ್ನು ಬೆಂಗಳೂರಿಗರು ಭಾರವಾದ ಮನಸ್ಸಿನಿಂದ ಬೀಳ್ಕೊಟ್ಟರು. ಈ ವೇಳೆ ಅನೇಕರು ಕೋಣಗಳಿಗೆ ಮತ್ತೊಮ್ಮೆ ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದರು. ಕೋಣಗಳು ಲಾರಿಗಳನ್ನು ಏರುವಾಗ ಸಮಿತಿಯ ಕಾರ್ಯಕರ್ತರ ಕಣ್ಣಲ್ಲಿ ಹನಿ ನೀರು ಜಾರಿದವು.

ಜಾರಿ ಬಿದ್ದು ಪೆಟ್ಟು ಮಾಡಿಕೊಂಡ ರಾಜ
ಕೊಳಕ್ಕೆ ಇರ್ವತ್ತೂರಿನ ರಾಜ ಎಂಬ ಕೋಣ ಓಡುವ ವೇಳೆ ಜಾರಿ ಬಿದ್ದು ಕಾಲು, ಭುಜಕ್ಕೆ ಪೆಟ್ಟಾಗಿದೆ. ಪರಿಣಾಮ ಕೋಣಕ್ಕೆ ನೋವು ಉಂಟಾಗಿದೆ. ಕೋಣದ ಭುಜದ ಒಳಗೆ ಪೆಟ್ಟಾದರೆ ಗಾಯ ವಾಸಿಯಾಗಲು ಒಂದು ತಿಂಗಳು ಬೇಕಾಗುತ್ತದೆ ಎನ್ನಲಾಗಿದೆ.

ರಜಾ ದಿನ: ಕಂಬಳ ಹೌಸ್‌ಫ‌ುಲ್‌
ರವಿವಾರ ರಜಾ ದಿನವಾಗಿದ್ದರಿಂದ ಬೆಂಗಳೂರು ಸಹಿತ ರಾಜ್ಯದ ವಿವಿಧ ಮೂಲೆಗಳಿಂದ ಕುಟುಂಬ ಸಮೇತರಾಗಿ ಲಕ್ಷಾಂತರ ಜನ ಭೇಟಿ ಕೊಟ್ಟರು. ಕಂಬಳದ ಕರೆಗಳ ಸುತ್ತಲೂ ಸಾವಿರಾರು ಮಂದಿ ನೆರೆದಿದ್ದರಿಂದ ಪ್ರತಿಯೊಬ್ಬರಿಗೂ ಕೋಣಗಳ ಓಟ ನೋಡಲು ಪರದಾಡಬೇಕಾಯಿತು. ಆಯೋಜಕರು ಪ್ರಮುಖ ಕಡೆಗಳಲ್ಲಿ ಅಳವಡಿಸಿದ್ದ ಬೃಹತ್‌ ಗಾತ್ರದ 6ಕ್ಕೂ ಹೆಚ್ಚಿನ ಎಲ್‌ಇಡಿ ಸ್ಕ್ರೀನ್‌ಗಳಲ್ಲೇ ಕಂಬಳ ಕಂಡು ಪುಳಕಿತರಾದರು. ರವಿವಾರ ರಾತ್ರಿ ಕಂಬಳವು ಫೈನಲ್‌ ಸುತ್ತಿಗೆ ಬಂದಾಗ ಇದರ ರೋಚಕತೆ ಇನ್ನಷ್ಟು ಹೆಚ್ಚಿತು. ಗೆಲ್ಲುವ ಕೋಣಗಳ ಮೇಲೆ ಎಲ್ಲರ ಚಿತ್ತ ಬಿದ್ದಿತ್ತು. ಕೊನೆಯ ಕ್ಷಣದಲ್ಲಿ ಆಯೋಜಕರು, ಕಂಬಳ ತಜ್ಞರು, ಕೋಣಗಳ ಮಾಲಕರು, ಪರಿಚಾರಕರಲ್ಲಿ ಭಾರೀ ಕುತೂಹಲ ಕೆರಳಿಸಿತು. ರಾತ್ರಿ ಅರಮನೆ ಮೈದಾನವು ವಿದ್ಯುತ್‌ ದೀಪಗಳಿಂದ ಕಂಗೊಳಿಸಿದರೆ, ವಾದ್ಯಮೇಳದವರು ಇಂಪಾದ ವಾದ್ಯನುಡಿಸಿ ನೆರೆದಿದ್ದವರನ್ನು ಸೆಳೆದರು.

ಕರಾವಳಿಯವರು ಎಲ್ಲೆಡೆಗೆ ಹೊಟೇಲ್‌ ಜತೆಗೆ ಸಂಸ್ಕೃತಿಯನ್ನು ಕೊಂಡೊಯ್ಯುತ್ತಿರುವುದು ಹೆಮ್ಮೆಯ ಸಂಗತಿ. ಕರಾವಳಿ ಯವರು ಸನಾತನ ಧರ್ಮದ ಸಂಸ್ಕೃತಿಯನ್ನು ಪಸರುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರತಿ ವರ್ಷವೂ ಕಂಬಳ ನಡೆಯಲಿ.
 -ಅರವಿಂದ ಲಿಂಬಾವಳಿ,
ಮಾಜಿ ಸಚಿವ

ಜಲ್ಲಿಕಟ್ಟು, ಕಂಬಳದಂತಹ ಸಾಂಪ್ರದಾಯಿಕ ಓಟಗಳ ಬಗ್ಗೆ ಕೆಲವು ಶಕ್ತಿಗಳು ಕೋರ್ಟ್‌ಗೆ ಹೋಗಿ ತಡೆಯುವ ಪ್ರಯತ್ನಗಳು ನಡೆದಿವೆ. ರಾಜಕೀಯವನ್ನು ಮೀರಿ ಸಾಂಪ್ರದಾಯಿಕ, ಧರ್ಮ, ಸಂಸ್ಕೃತಿಯ ಆಚರಣೆಗಳನ್ನು ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿರಬೇಕು.
-ತೇಜಸ್ವಿ ಸೂರ್ಯ, ಸಂಸದ

ನಮ್ಮತನ ಎನ್ನುವುದು ನಮ್ಮ ಬೇರು. ಅದು ನಮ್ಮ ಕಲೆ, ಕ್ರೀಡೆ, ಸಂಸ್ಕೃತಿಗಳಲ್ಲಿ ಅಡಗಿದೆ. ಮಂಗಳೂರು-ಉಡುಪಿಯಲ್ಲಿ ಶೂಟಿಂಗ್‌ ಮಾಡಿದ್ದರಿಂದ ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿಯಿತು. ವಿದೇಶಿ ಯರ ಕ್ರಿಕೆಟನ್ನು ಸಂಭ್ರಮಿಸುವಂತೆ ನಮ್ಮ ಕಂಬಳವನ್ನು ನಾವು ಜನಪ್ರಿಯ ಗೊಳಿಸಬೇಕಿದೆ.
-ರಮೇಶ್‌ ಅರವಿಂದ್‌, ನಟ

ಕಂಬಳ ನಮ್ಮ ಹೆಮ್ಮೆ. ಇದು ಕರ್ನಾಟಕ ಮಾತ್ರವಲ್ಲದೆ ಇಡೀ ಜಗತ್ತನ್ನು ಮುಟ್ಟಬೇಕು. ಮುಂದಿನ ವರ್ಷದಿಂದ ಕಂಬಳ ಬೆಂಗಳೂರಿನಲ್ಲಿ ಮತ್ತಷ್ಟು ಅದ್ದೂರಿಯಾಗಿ ನಡೆಯುವಂತಾಗಲಿ.
-ಪೂಜಾ ಹೆಗ್ಡೆ, ಬಹುಭಾಷಾ ನಟಿ

Advertisement

Udayavani is now on Telegram. Click here to join our channel and stay updated with the latest news.

Next