ಕಲಬುರಗಿ: ಲಾಕ್ ಡೌನ್ ಸಡಿಲಿಕೆ ಮಾಡಿ ದೇಶೀಯ ವಿಮಾನ ಯಾನ ಆರಂಭಿಸಿದ ಮೊದಲ ದಿನವೇ ಸೋಮವಾರ ರಾಜಧಾನಿ ಬೆಂಗಳೂರು ಮತ್ತು ಕಲಬುರಗಿ ನಡುವೆ ವಿಮಾನ ಹಾರಾಟ ನಡೆಯಿತು.
ಎರಡು ತಿಂಗಳ ನಂತರ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟ ಸ್ಟಾರ್ ಏರ್ ವಿಮಾನವು 9.45ಕ್ಕೆ ಇಲ್ಲಿನ ಸೇಡಂ ರಸ್ತೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. 50 ಸೀಟುಗಳ ಸಾಮರ್ಥ್ಯದ ವಿಮಾನದಲ್ಲಿ ಉದ್ಯಾನ ನಗರಿಯಿಂದ 25 ಜನ ಪ್ರಯಾಣಿಕರು ಸೂರ್ಯ ನಗರಿಗೆ ಬಂದಿಳಿದರು.
ಇದೇ ವಿಮಾನ ಮರಳಿ ರಾಜಧಾನಿಗೆ ಬೆಳಿಗ್ಗೆ 10:20ಕ್ಕೆ ಹಾರಾಟ ಆರಂಭಿಸಿತ್ತು. ಕಲಬುರಗಿಯಿಂದಲೂ ಪ್ರಯಾಣಿಕರ ಉತ್ತಮ ಸ್ಪಂದನೆ ದೊರೆಯಿತು. ಇಲ್ಲಿಂದ 20 ಜನರು ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಸ್ಟಾರ್ ಏರ್ ವಾರದ ಏಳೂ ದಿನವೂ ವಿಮಾನಯಾನ ಸೇವೆ ನೀಡಲಿದೆ. ಮೇ 28ರಿಂದ ಅಲಯನ್ಸ್ ಏರ್ ಸಂಸ್ಥೆ ಸಹ ಬೆಂಗಳೂರು-ಕಲಬುರಗಿ ನಡುವೆ ವಿಮಾನ ಹಾರಾಟ ಆರಂಭಿಸಲಿದೆ. ಈ ವಿಮಾನವು ವಾರದ ಮೂರು ದಿನಗಳು (ಗುರುವಾರ, ಶನಿವಾರ ಮತ್ತು ರವಿವಾರ) ಹಾರಾಟ ನಡೆಸಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್. ಜ್ಞಾನೇಶ್ವರ ‘ಉದಯವಾಣಿ’ಗೆ ತಿಳಿಸಿದರು.
ಆರೋಗ್ಯ ತಪಾಸಣೆ: ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆರೋಗ್ಯ ಇಲಾಖೆಯ ಎರಡು ವೈದ್ಯಕೀಯ ತಂಡಗಳನ್ನು ಒದಗಿಸಿದ್ದು, ಆಗಮನ ಮತ್ತು ನಿರ್ಗಮನದ ದ್ವಾರದಲ್ಲಿ ತಂಡಗಳು ಕಾರ್ಯ ನಿರ್ವಹಿಸುತ್ತವೆ ಎಂದು ಜ್ಞಾನೇಶ್ವರ ಹೇಳಿದರು.
ಎಲ್ಲ ಪ್ರಯಾಣಿಕರ ಥರ್ಮಲ್ ಸ್ಕ್ಯಾನಿಂಗ್, ಸಾನಿಟೈಜರ್ ಮಾಡಲಾಗುತ್ತಿದೆ. ಹಾಗೆ ಪ್ರತಿ ವಿಮಾನಯಾನಿಯೂ ತಮ್ಮ ಆರೋಗ್ಯ ಘೋಷಣೆ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಪ್ರಯಾಣಿಕರ ಬ್ಯಾಗ್ ಗಳನ್ನೂ ಸಾನಿಟೈಜರ್ ಮಾಡಲು ಕ್ರಮ ವಹಿಸಲಾಗಿದೆ ಎಂದು ಅವರು ವಿವರಿಸಿದರು.