Advertisement

Bengaluru: ರೈಲ್ವೆ ನಿಲ್ದಾಣದಲ್ಲಿ ನಾಯಿ ಮಾಂಸ ಗಲಾಟೆ

02:59 PM Jul 27, 2024 | Team Udayavani |

ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನಲ್ಲಿ ವಾರದ ಮೂರು ದಿನಗಳು ಸರಬರಾಜು ಆಗುತ್ತಿದ್ದ 4,500 ಕೆ.ಜಿ. ಮಟನ್‌ ಮಾಂಸದ ಮೇಲೆ “ನಾಯಿ ಮಾಂಸ’ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಮಾಂಸ ಮಾರಾಟ ವ್ಯಾಪಾರಿಗಳು ಅನುಮಾನ ವ್ಯಕ್ತಪಡಿಸಿ, ಆಕ್ರೋಶ ಹೊರ ಹಾಕಿರುವ ಪ್ರಕರಣ ನಡೆದಿದೆ.

Advertisement

ರಾಜಸ್ಥಾನದಿಂದ ರೈಲಿನಲ್ಲಿ ಬೆಂಗಳೂರಿಗೆ ಶುಕ್ರವಾರ 90 ಮಾಂಸದ ಬಾಕ್ಸ್‌ಗಳು ಬಂದಿದ್ದವು. ಈ ವಿಚಾರ ತಿಳಿದು ಹಿಂದೂ ಕಾರ್ಯಕರ್ತರು ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದ ಬಳಿ ಬಂದು ಇದು ಯಾವುದರ ಮಾಂಸ ಎಂದು ಗಲಾಟೆ ಮಾಡಿದ್ದಾರೆ.

ಆ ವೇಳೆ ಮಾಂಸ ತರಿಸಿಕೊಂಡ ವ್ಯಾಪಾರಿ ಸ್ಥಳಕ್ಕೆ ಧಾವಿಸಿದ್ದು ಅಲ್ಲಿ ನೆರೆದಿದ್ದವರಿಗೆ ಬಾಕ್ಸ್‌ಗಳನ್ನು ತೆರೆಯಲು ಬಿಡಲಿಲ್ಲ. ನಂತರ ಶಿವಾಜಿನಗರ, ಯಶವಂತಪುರ ಸೇರಿ ವಿವಿಧೆಡೆಯಿಂದ ಬಂದ ಮಾಂಸ ಖರೀದಿ ವ್ಯಾಪಾರಿ ಗಳು “ಇದು ನಾಯಿ ಮಾಂಸ ಅಲ್ಲ’ ಎಂದು ಹೇಳಿ ಬಾಕ್ಸ್‌ ತೆರೆದ ಹಿಂದೂ ಕಾರ್ಯಕರ್ತರ ಮೇಲೆ ಆಕ್ರೋಶ ಹೊರ ಹಾಕಿದರು.

ಇದಾದ ನಂತರ ರೈಲಿನಲ್ಲಿ ಬಂದಿದ್ದ ಮಾಂಸವನ್ನು ಎತ್ತಿ ನೋಡಿದ್ದಾರೆ. ಆಗ ಉದ್ದ ಬಾಲವಿರುವ ನಾಯಿಯ ಆಕಾರದಲ್ಲಿ ಹೋಲುತ್ತಿರುವ ಮಾಂಸವನ್ನು ನೋಡಿ ಇದು ನಾಯಿ ಮಾಂಸ ಎಂದು ಆರೋಪಿಸಿದ್ದಾರೆ. ಆಗ ಎಲ್ಲ ಬಾಕ್ಸ್‌ಗಳಲ್ಲಿರುವ ಮಾಂಸ ಪರಿಶೀಲಿಸುವಂತೆ ಅಲ್ಲಿದ್ದ ಹಿಂದೂ ಕಾರ್ಯಕರ್ತರು ಒತ್ತಾಯಿಸಿದರು. ಆದರೆ ವ್ಯಾಪಾರಿ ವ್ಯಾಪಾರ ಮಾಡುವುಕ್ಕೆ ಕಷ್ಟವಾಗುತ್ತದೆ ಎಂದು ಉಳಿದ ಬಾಕ್ಸ್‌ಗಳನ್ನು ತೆರೆಯಲು ಬಿಡಲಿಲ್ಲ. ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿ ಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದರು.

ಸ್ಯಾಂಪಲ್‌ ಪಡೆದುಕೊಂಡ ಆಹಾರ ಸುರಕ್ಷತಾ ಅಧಿಕಾರಿಗಳು:

Advertisement

ಈ ಪ್ರಕರಣದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಿಬಿಎಂಪಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಯಾಗಿ ದೌಡಾಯಿಸಿದ್ದು, ಸ್ಥಳೀಯ ಪೊಲೀಸರೊಂದಿಗೆ ಸೇರಿ ಮಾಂಸದ ಬಾಕ್ಸ್‌ಗಳನ್ನು ಓಪನ್‌ ಮಾಡಿ ಪರಿಶೀಲನೆ ಮಾಡಿದ್ದಾರೆ. ಮಾಂಸದ ಸ್ಯಾಂಪಲ್‌ ಪಡೆದುಕೊಂಡಿದ್ದಾರೆ.

ಒಟ್ಟು 4 ಬಾಕ್ಸ್‌ಗಳಿಂದ ಸ್ಯಾಂಪಲ್‌ ಸಂಗ್ರಹಿಸಲಾಗಿದೆ. ವಿವಿಧ ಭಾಗಗಳಿಂದ ಮಾಂಸವನ್ನು ಸ್ಯಾಂಪಲ್‌ ಆಗಿ ಪಡೆದಿದ್ದೇವೆ. ಇದನ್ನು ಲ್ಯಾಬ್‌ಗ ರವಾನಿಸಿ ಪರೀಕ್ಷಿಸಲಾಗುತ್ತದೆ. ಇದರ ವರದಿ ಬರುವುದಕ್ಕೆ 14 ದಿನಗಳ ಕಾಲವಕಾಶ ಬೇಕಾಗುತ್ತದೆ. ಮೇಲ್ನೋಟಕ್ಕೆ ನೋಡಿ ಇದು ಯಾವ ಮಾಂಸ ಎಂದು ಹೇಳಲಾಗುವುದಿಲ್ಲ. ಈ ಮಾಂಸದ ಗುಣಮಟ್ಟ ಹಾಗೂ ಯಾವುದರ ಮಾಂಸ ಎಂಬ ದೃಢೀಕರಣ ಟೆಸ್ಟಿಂಗ್‌ನಲ್ಲಿ ಗೊತ್ತಾಗಲಿದೆ ಎಂದು ಬಿಬಿಎಂಪಿ ಆಹಾರ ಸುರಕ್ಷತೆ ಅಧಿಕಾರಿಯೊಬ್ಬರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಏನಿದು ಗಲಾಟೆ?

 12 ವರ್ಷದಿಂದ ಕಡಿಮೆ ರೇಟ್‌ಗೆ ಮಾಂಸ ತರಿಸಿಕೊಳ್ಳುತ್ತಿರುವ ವ್ಯಾಪಾರಿ

 ಬೆಂಗಳೂರಿನ ಹೋಟೆಲ್‌, ಅಂಗಡಿಗಳಿಗೆ ಕೆಜಿಗೆ 700-800 ರೂ.ಗೆ ಮಾರಾಟ

 ಕಡಿಮೆ ದರಕ್ಕೆ ಮಾರುವುದರಿಂದ ಬೆಂಗಳೂರಿನ ಸ್ಥಳೀಯ ವ್ಯಾಪಾರಿಗಳಿಗೆ ನಷ್ಟ

 ಹೀಗೆ ಶುಕ್ರವಾರ ಬಂದ ಮಾಂಸಕ್ಕೆ ಪುನೀತ್‌ ಕೆರೆಹಳ್ಳಿ ತಂಡ ತಡೆ, ನಾಯಿ ಮಾಂಸವೆಂದು ಶಂಕೆ ‌

12 ವರ್ಷಗಳಿಂದ ಮಾಂಸ ವ್ಯಾಪಾರ

ಕಳೆದ 12 ವರ್ಷಗಳಿಂದ ಅಬ್ದುಲ್‌ ರಜಾಕ್‌ ಎನ್ನುವ ವ್ಯಾಪಾರಿ ರಾಜಸ್ಥಾನದಿಂದ ಕಡಿಮೆ ಬೆಲೆಗೆ ಕುರಿ ಮಾಂಸವನ್ನು ಬೆಂಗಳೂರಿಗೆ ತರಿಸಿ ಕೊಂಡು ಅದನ್ನು ಹೋಟೆಲ್, ರೆಸ್ಟೋರೆಂಟ್‌ ಸೇರಿ ಇತರೆ ಅಂಗಡಿಗಳಿಗೆ ಕಡಿಮೆ ದರಕ್ಕೆ ಸರಬರಾಜು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 700 ರೂ.ಗಳಿಂದ 800 ರೂ.ಗಳಿಗೆ ಮಾಂಸ ಮಾರಾಟ ಮಾಡಲಾಗುತ್ತಿದ್ದು. ರಾಜಸ್ಥಾನದಿಂದ ತರಿಸಿಕೊಂಡು ಬೆಂಗಳೂರಿನಲ್ಲಿ ಅಂಗಡಿ ಮುಂಗಟ್ಟುಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಇಲ್ಲಿನ ಮಟನ್‌ ಮಾರಾಟ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.

ಮಾಲೀಕ ರಜಾಕ್‌, ಪುನೀತ್‌ ಮಧ್ಯೆ ಗಲಾಟೆ

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಪುನೀತ್‌ ಕೆರೆಹಳ್ಳಿ ಸಂಗಡಿಗರು ಮಾಂಸದ ಬಾಕ್ಸ್‌ಗಳನ್ನು ತಡೆದಿದ್ದು ನಾಯಿ ಮಾಂಸ ಇದೆ ಎಂಬ ವಿಚಾರಕ್ಕೆ ಅಬ್ದುಲ್‌ ರಜಾಕ್‌ ಮತ್ತು ಪುನೀತ್‌ ಮಧ್ಯೆ ಗಲಾಟೆ ನಡೆದಿತ್ತು. ಈ ಬಗ್ಗೆ ಅಬ್ದುಲ್‌ ರಜಾಕ್‌ ಮಾಧ್ಯಮದವರ ಜತೆಗೆ ಮಾತ ನಾಡಿದ್ದು ಇದು ಅಕ್ರಮ ಬ್ಯುಸಿನೆಸ್‌ ಅಲ್ಲ. ನಮ್ಮ ಬಳಿ ಎಲ್ಲ ಸರ್ಟಿಫಿಕೇಟ್‌ ಇದೆ. ಎಲ್ಲ ಬಾಕ್ಸ್ ಗಳಲ್ಲಿ ಕುರಿ ಮಾಂಸ ಮಾತ್ರವಿದೆ. 12 ವರ್ಷದಿಂದ ಈ ಬ್ಯುಸಿನೆಸ್‌ ಮಾಡುತ್ತಿದ್ದೇವೆ. ಅವರೇ ಬಾಕ್ಸ್‌ ಓಪನ್‌ ಮಾಡಿಸಿದ್ದಾರೆ. ಕುರಿಯ ಮಾಂಸ ಇರುವುದನ್ನು ನೋಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next