Advertisement
ಶನಿವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 32-21 ಅಂಕಗಳ ಅಂತರದಿಂದ ತಲೈವಾಸ್ ತಂಡವನ್ನು ಪರಾಭವಗೊಳಿಸಿತು. ತೀವ್ರ ಪೈಪೋಟಿಯಿಂದ ಕೂಡಿದ ಬೆಂಗಾಲ್ ವಾರಿಯರ್-ದಬಾಂಗ್ ಡೆಲ್ಲಿ ನಡುವಿನ ದ್ವಿತೀಯ ಮುಖಾಮುಖೀ 30-30ರಿಂದ ಟೈ ಆಯಿತು.
ಪವನ್ ಸೆಹ್ರಾವತ್ (11 ಅಂಕ) ಎಂದಿನಂತೆ ಭರ್ಜರಿ ರೈಡಿಂಗ್ ಪ್ರದರ್ಶಿಸಿ ಬೆಂಗಳೂರನ್ನು ಗೆಲ್ಲಿಸಿದರು. ಅವರು 20 ಸಲ ತಲೈವಾಸ್ ಕೋಟೆಗೆ ಲಗ್ಗೆ ಇಟ್ಟರು. 11 ಸಲ ಯಶಸ್ವಿಯಾಗಿ ಅಂಕಗಳೊಂದಿಗೆ ಮರಳಿದರೆ, 3 ಸಲ ಎದುರಾಳಿ ಕೈಗೆ ಸಿಕ್ಕಿ ಔಟಾದರು. 2 ಬೋನಸ್ ಅಂಕವನ್ನು ಪಡೆದದ್ದು ಪವನ್ ಸೆಹ್ರಾವತ್ ಮಿಂಚಿನ ಆಟಕ್ಕೆ ಸಾಕ್ಷಿಯಾಗಿತ್ತು. ಸೌರಭ್ ನಡಾಲ್ (5 ಅಂಕ) ಅತ್ಯುತ್ತಮ ಟ್ಯಾಕಲ್ ನಡೆಸಿದರು. ಆದರೆ ತಂಡದ ನಾಯಕ ರೋಹಿತ್ ಕುಮಾರ್ ರೈಡಿಂಗ್‌ನಲ್ಲಿ ವಿಫಲರಾದರು. 13 ರೈಡಿಂಗ್‌ನಿಂದ 2 ಅಂಕ ಮಾತ್ರ ತರಲು ಅವರಿಗೆ ಸಾಧ್ಯವಾಯಿತು. ಬೆಂಗಳೂರು ತನ್ನ ಹಿಂದಿನ ಪಂದ್ಯದಲ್ಲಿ 35-33ರಿಂದ ಯುಪಿ ಯೋಧಾ ವಿರುದ್ಧ ಸೋಲುಂಡಿತ್ತು. ಈಗ ಮತ್ತೆ ಗೆಲುವಿನ ಟ್ರ್ಯಾಕ್ ಏರಿದೆ.
Related Articles
ತಾರಾ ಆಟಗಾರರ ವೈಫಲ್ಯ ತಮಿಳ್ ತಲೈವಾಸ್‌ಗೆ ಮುಳುವಾಯಿತು. ರೈಡರ್ ಅಜಯ್ ಕುಮಾರ್ (4 ಅಂಕ), ರಾಹುಲ್ ಚೌಧರಿ (2 ಅಂಕ) ರೈಡಿಂಗ್‌ನಲ್ಲಿ ಜಾದೂ ಮಾಡಲಿಲ್ಲ. ಆಲ್‌ರೌಂಡರ್ ಮಂಜಿತ್ ಚಿಲ್ಲಾರ್ (1 ಅಂಕ) ಪವಾಡ ಸೃಷ್ಟಿಸಲಿಲ್ಲ. ರೈಡರ್ ಶಬ್ಬೀರ್ ಬಾಪು ಕೇವಲ 3 ಅಂಕಕ್ಕೆ ಸೀಮಿತರಾದರು. ಇದರಿಂದ ತಂಡ ತವರಲ್ಲೇ ಮುಖಭಂಗ ಅನುಭವಿಸಿತು.
Advertisement
ಚೆನ್ನೈ ಚರಣದ ದಿನದ ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ -ದಬಾಂಗ್ ಡೆಲ್ಲಿ ನಡುವಿನ ಪಂದ್ಯ 30-30 ಅಂಕಗಳ ರೋಚಕ ಟೈನಲ್ಲಿ ಅಂತ್ಯಗೊಂಡಿತು. ಬೆಂಗಾಲ್ ಪರ ರೈಡರ್ ಕೆ.ಪ್ರಪಂಜನ್ (10 ಅಂಕ) ಹಾಗೂ ಜೀವಾ ಕುಮಾರ್ (4 ಅಂಕ) ಅದ್ಭುತ ಟ್ಯಾಕಲ್ ನಡೆಸಿದರು. ದಬಾಂಗ್ ಡೆಲ್ಲಿ ಪರ ನವೀನ್ ಕುಮಾರ್ (11 ಅಂಕ), ಚಂದ್ರನ್ ರಂಜಿತ್ (6 ಅಂಕ), ಜೋಗೀಂದರ್ ನರ್ವಲ್ (4 ಅಂಕ)ಗಳಿಸಿದರು.