Advertisement

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

01:19 PM Oct 05, 2024 | Team Udayavani |

ಬೆಂಗಳೂರು: ಡೆತ್‌ನೋಟ್‌ ಬರೆದಿಟ್ಟು ಪೇಯಿಂಗ್‌ ಗೆಸ್ಟ್‌ (ಪಿಜಿ)ನ ಕಟ್ಟಡದ 5ನೇ ಮಹಡಿಯಿಂದ ಜಿಗಿದು ಸಾಫ್ಟ್ವೇರ್‌ ಎಂಜಿನಿಯರ್‌ವೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಆಂಧ್ರಪ್ರದೇಶದ ಕಡಪ ಮೂಲದ ಗೌತಮಿ(25) ಆತ್ಮಹತ್ಯೆ ಮಾಡಿಕೊಂಡ ಟೆಕಿ.

ಗುರುವಾರ ಸಂಜೆ ಸುಮಾರು 6.30ಕ್ಕೆ ವೈಟ್‌ಫೀಲ್ಡ್‌ ವ್ಯಾಪ್ತಿಯ ಪ್ರಶಾಂತ್‌ ಲೇಔಟ್‌ನಲ್ಲಿ ಘಟನೆ ನಡೆದಿದೆ. ಗೌತಮಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಉಲ್ಲೇಖೀಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು.

ಆಂಧ್ರಪ್ರದೇಶ ಮೂಲದ ಗೌತಮಿ, ಬಿಇ ಪದವೀಧರೆಯಾಗಿದ್ದು, ವೈಟ್‌ಫೀಲ್ಡ್‌ನಲ್ಲಿರುವ ಸಾಫ್ಟ್ ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಶಾಂತ್‌ ಲೇಔಟ್‌ನ ಪಿ.ಜಿಯಲ್ಲಿ ವಾಸವಾಗಿದ್ದಳು. ಗುರುವಾರ ಸಂಜೆ ಪಿಜಿ ಕಟ್ಟಡದ 5ನೇ ಮಹಡಿಗೆ ತೆರಳಿ ಏಕಾಏಕಿ ಕೆಳಗೆ ಜಿಗಿದಿದ್ದಾಳೆ. ಈ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ವೈಟ್ ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಮರಣೋತ್ತರ ಪರೀಕ್ಷೆ ಮಾಡಿಸಬೇಡಿ: ಡೆತ್‌ನೋಟ್‌

Advertisement

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ವೈಟ್‌ಫೀಲ್ಡ್‌ ಠಾಣೆ ಪೊಲೀಸರು, ಸ್ಥಳ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಆಕೆಯ ಕೋಣೆ ತಪಾಸಣೆ ನಡೆಸಿದಾಗ ಡೆತ್‌ ನೋಟ್‌ ಪತ್ತೆಯಾಗಿದ್ದು, ನನ್ನ ಸಾವಿಗೆ ನಾನೇ ಕಾರಣ, ನನ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಬೇಡಿ ಎಂದಷ್ಟೇ ಬರೆದಿರುವುದು ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next