ಬೆಂಗಳೂರು: ಸಹೋದರಿಯ ಮನೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಸಹೋದರನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ನಿವಾಸಿ ಅಜಿತ್(26) ಬಂಧಿತ. ಆರೋಪಿಯಿಂದ 31 ಲಕ್ಷ ರೂ.ಮೌಲ್ಯದ 613 ಗ್ರಾಂ ಚಿನ್ನಾಭರಣ ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಆರೋಪಿ ಅಜಿತ್ ತನ್ನ ದೊಡ್ಡಮ್ಮನ ಮಗಳಾದ ಸವಿತಾರ ಮನೆಗೆ ಪದೇ ಪದೇ ಹೋಗುತ್ತಿದ್ದ. ಸಹೋದರ ಎಂಬ ಕಾರಣಕ್ಕೆ ಆಜಿತಗೆ ಮನೆಯಲ್ಲಿ ಮುಕ್ತವಾಗಿ ಓಡಾಡಲು ಅವಕಾಶ ಇತ್ತು. ಈ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ ಆರೋಪಿ, ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಒಂದೊಂದಾಗಿ ಕಳವು ಮಾಡುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಮೇ 3ರಂದು ಅಕ್ಷಯ ತೃತೀಯ ದಿನ ಸವಿತಾ ಚಿನ್ನಾಭರಣಗಳನ್ನು ಪರಿಶೀಲಿಸುವಾಗ ಕೆಲವು ಕಾಣೆಯಾಗಿರುವುದು ಕಂಡು ಬಂದಿದೆ. ಮರುದಿನ ಅಜಿತ್ ಮನೆಗೆ ಬಂದಿದ್ದಾನೆ. ಆತನ ಮೇಲೆ ಸಂಶಯಗೊಂಡ ಸವಿತಾ ಆತನನ್ನು ಹಿಂದಿನಿಂದ ಹಿಂಬಾಲಿಸಿದ್ದಾರೆ. ಆತ ಕೊಠಡಿಯೊಳಗೆ ಹೋಗಿ ಬೀರು ಬಾಗಿಲು ತೆರೆದು ಒಡವೆ ಕಳವು ಮಾಡುತ್ತಿರುವುದು ಗೊತ್ತಾಗಿದೆ. ಕೂಡಲೇ ಪತಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕೇನ್ಸ್ ಚಲನಚಿತ್ರೋತ್ಸವ’ದಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿದ ಬಾಲಿವುಡ್ ನಟ ಆರ್.ಮಾಧವನ್
ಬಳಿಕ ತಪ್ಪೊಪ್ಪಿಕೊಂಡಿರುವ ಆರೋಪಿ ಜೂಜಾಟ ವ್ಯಸನಿಯಾಗಿದ್ದು, ತುಂಬಾ ಸಾಲ ಮಾಡಿಕೊಂಡಿದ್ದೇನೆ. ಅದನ್ನು ತೀರಿಸಲು ಕಳವು ಮಾಡಿದ್ದೇನೆ. ಸ್ವಲ್ಪ ಸಮಯ ಕೊಡಿ ಅಡಮಾನ ಇಟ್ಟಿರುವ ಒಡವೆಗಳನ್ನು ಬಿಡಿಸಿಕೊಡುತ್ತೇನೆ ಎಂದು ಕೇಳಿಕೊಂಡಿದ್ದಾನೆ. ಅದಕ್ಕೆ ಒಪ್ಪಿದ ಸವಿತಾ ಸಮಯ ನೀಡಿದ್ದಾರೆ. ಆದರೂ ವಾಪಸ್ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಹೀಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.