Advertisement

ಉದ್ಯೋಗ ಕೊಡಿಸುವುದಾಗಿ ವಂಚನೆ : ಇನ್ಫೋಸಿಸ್‌ ನ ಮಾಜಿ ಉದ್ಯೋಗಿ ಸೇರಿ ಮೂವರ ಬಂಧನ

07:44 PM Feb 15, 2022 | Team Udayavani |

ಬೆಂಗಳೂರು : ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಇನ್ಫೋಸಿಸ್‌ನ ಮಾಜಿ ಉದ್ಯೋಗಿ ಸೇರಿ ಒಡಿಶಾ ಮೂಲದ ಮೂವರು ಆರೋಪಿಗಳು ಸಂಪಿಗೆಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಒಡಿಶಾ ಮೂಲದ ಕಾಳಿ ಪ್ರಸಾದ್‌ ಅಲಿಯಾಸ್‌ ಕಾಳಿ(38), ಆತನ ಸಹಚರರಾದ ಅಭಿಜಿತ್‌ ಅರುಣ ನೆಟಕೆ(34), ಅಭಿಷೇಕ್‌ ಮೊಹಂತಿ(21) ಬಂಧಿತರು. ಅವರ ಬಂಧನದಿಂದ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ, ಮಾರತ್‌ಹಳ್ಳಿ ಠಾಣೆ, ಪೂರ್ವ ವಿಭಾಗದ ಸೆನ್‌ ಠಾಣೆ, ವೈಟ್‌ಫೀಲ್ಡ್‌ ವಿಭಾಗದ ಸೆನ್‌, ಜೀವನ್‌ ಭೀಮಾನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಕಾಳಿ ಪ್ರಸಾದ್‌ ಅಲಿಯಾಸ್‌ ಕಾಳಿ ಪ್ರಕರಣದ ಮಾಸ್ಟರ್‌ ಮೈಂಡ್‌ ಆಗಿದ್ದಾನೆ. ಇತ್ತೀಚೆಗೆ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಐಬಿಎಂ, ಕಾಗ್ನಿಜೆಂಟ್‌ ಕಂಪನಿಗಳಲ್ಲಿ ಕೆಲಸ ಕೊಡಿಸವುದಾಗಿ “ಫೇಸ್‌ಬುಕ್‌, ನೌಕರಿ.ಕಾಂ, ಲಿಂಕ್‌ಡಿನ್‌’ ಹಾಗೂ ಇತರೆಡೆ ಜಾಹಿರಾತುಗಳನ್ನು ನೀಡಿದ್ದ. ಅಲ್ಲದೆ, “ಲಿವೋಸೊ ಟೆಕ್ನಾಲಜಿ ಪ್ರೈವೇಟ್‌.ಲಿ., ಇಸ್ಸಿರೆಕ್ಯೂರ್ಟ್‌ ಇಂಡಿಯಾ ಪ್ರೈವೇಟ್‌ ಲಿ.’ ಹಾಗೂ ಇತರೆ ನಕಲಿ ಕಂಪನಿಗಳ ಲೋಗೋಗಳನ್ನು ಸೃಷ್ಟಿಸಿ ಜಾಹಿರಾತು ನೀಡುತ್ತಿದ್ದ. ಅದನ್ನು ನಂಬಿದ ಉದ್ಯೋಗಾಕಾಂಕ್ಷಿಗಳು ಆರೋಪಿಯನ್ನು ಸಂಪರ್ಕಿಸುತ್ತಿದ್ದರು.

ನಂತರ ಆನ್‌ಲೈನ್‌ ಮೂಲಕ ಅಭ್ಯರ್ಥಿಗಳ ಸಂದರ್ಶನ ನಡೆಸಿ, ಉತ್ತೀರ್ಣರಾದವರಿಂದ ಒಂದು ಲಕ್ಷ ರೂ.ನಿಂದ 4 ನಾಲ್ಕು ಲಕ್ಷ ರೂ.ವರೆಗೆ ಪಡೆದುಕೊಂಡಿದ್ದಾನೆ. ಇತ್ತೀಚೆಗೆ ನಗರದ ಮೂವರು ಯುವತಿಯರು ಹಾಗೂ ಇಬ್ಬರು ಯುವಕರಿಗೆ ಐಬಿಎಂ ಕಂಪನಿಯಲ್ಲಿ ಉದ್ಯೋಗ ಸಿಕ್ಕಿದೆ ಎಂದು ನಕಲಿ “ಜಾಬ್‌ ಆಫ‌ರ್‌ ಲೆಟರ್‌’ ನೀಡಿ, ಐಬಿಎಂ ಕಂಪನಿಯಲ್ಲಿ ಎಚ್‌.ಆರ್‌.ಮ್ಯಾನೆಜರ್‌ ಪ್ರದೀಪ್‌ ಅವರನ್ನು ಭೇಟಿಯಾಗುವಂತೆ ಸೂಚಿಸಿದ್ದ. ಐವರು ಕಂಪನಿಗೆ ಭೇಟಿ ನೀಡಿದಾಗ ಪ್ರದೀಪ್‌ ಎಂಬ ವ್ಯಕ್ತಿ ಕಂಪನಿಯಲ್ಲಿ ಇಲ್ಲ ಎಂಬುದು ಗೊತ್ತಾಗಿದೆ. ಈ ಸಂಬಂಧ ಐಬಿಎಂ ಕಂಪನಿಯ ಅಭಿಜಿತ್‌ ರಾಯ್‌ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಪಿಗೆಹಳ್ಳಿ ಪೊಲೀಸ್‌ ಠಾಣೆ ಠಾಣಾಧಿಕಾರಿ ಕೆ.ಟಿ.ನಾಗರಾಜ್‌ ಮತ್ತು ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಒಡಿಶಾದಲ್ಲಿ ಬಂಧಿಸಿದೆ.

ಇದನ್ನೂ ಓದಿ : ಭೂಗತಪಾತಕಿ ದಾವೂದ್ ಸಹೋದರಿ ನಿವಾಸದ ಮೇಲೆ ಇ.ಡಿ ದಾಳಿ

Advertisement

ಬಾಡಿಗೆ ಮನೆ ಮಾಲೀಕರಿಗೂ ವಂಚನೆ

ಕಾಳಿ ಪ್ರಸಾದ್‌, ಮನೆಯಲ್ಲಿರುವ ವಸ್ತುಗಳನ್ನು ಮತ್ತೂಂದು ಕಡೆ ಸ್ಥಳಾಂತರ ಮಾಡುವ “ಇಜಡ್‌ ಟ್ರಕ್‌’ ಎಂಬ ಕಂಪನಿಯನ್ನು ಬೆಂಗಳೂರಿನಲ್ಲಿ ನೊಂದಾಯಿಸಿ, ಒಡಿಶಾದಲ್ಲಿ ಕಂಪನಿ ತೆರೆದು, ದೇಶಾದ್ಯಂತ ವ್ಯವಹಾರ ನಡೆಸುತ್ತಿದ್ದು, ಕಂಪನಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದಾನೆ. ಅಭಿಜಿತ್‌ ಅರುಣ ನೆಟಕೆ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಅಭಿಷೇಕ್‌ ಮೊಹಂತಿ ಇತ್ತೀಚೆಗಷ್ಟೇ ಎಂಬಿಎ ಪೂರ್ಣಗೊಳಿಸಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ.

ನಗರದಲ್ಲಿ ಬಾಡಿಗೆ ಮನೆ ಅಥವಾ ಫ್ಲ್ಯಾಟ್‌ಗಳ ಮಾಲೀಕರನ್ನು ಪರಿಚಯಿಸಿಕೊಳ್ಳುತ್ತಿದ್ದ ಮೂವರು ಬಾಡಿಗೆದಾರರನ್ನು ಕರೆತರುವುದಾಗಿ ಹೇಳಿ ಮಾಲೀಕರಿಂದ ಮೊದಲೇ ಸಾವಿರಾರು ರೂ. ಪಡೆದುಕೊಳ್ಳುತ್ತಿದ್ದರು. ಬಾಡಿಗೆದಾರರನ್ನು ಕರೆತಂದು ತಮ್ಮ ಖಾತೆಗೆ ಮನೆಯ ಮುಂಗಡ ಹಣವನ್ನು ಆನ್‌ಲೈನ್‌ ಮೂಲಕ ವರ್ಗಾಹಿಸಿಕೊಳ್ಳುತ್ತಿದ್ದರು. ನಂತರ ಮನೆ ಮಾಲೀಕರು, ಬಾಡಿಗೆದಾರರಿಗೆ ಮುಂಗಡ ಹಣ ಕೊಡುವಂತೆ ಕೇಳಿದಾಗ ಆರೋಪಿಗಳಿಗೆ ವರ್ಗಾಹಿಸಿರುವುದಾಗಿ ಹೇಳುತ್ತಿದ್ದರು. ಅನಂತರ ಆರೋಪಿಗಳನ್ನು ಸಂಪರ್ಕಿಸಿದಾಗ ಒಂದೆರಡು ದಿನಗಳಲ್ಲಿ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ ವಂಚಿಸುತ್ತಿದ್ದರು. ಈ ರೀತಿಯ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರು,ಮಹಾರಾಷ್ಟ್ರದ ಪುಣೆಯ ಹಡಪ್‌ಸರ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

ಇನ್ಫೋಸಿಸ್‌ ಮಾಜಿ ಉದ್ಯೋಗಿ

ಒಡಿಶಾದಲ್ಲಿ ಎಂಬಿಎ ಪೂರ್ಣಗೊಳಿಸಿರುವ ಕಾಳಿಪ್ರಸಾದ್‌ ಬೆಂಗಳೂರಿನ ಪ್ರತಿಷ್ಠಿತ ಇನ್ಫೋಸಿಸ್‌ ಕಂಪನಿಯಲ್ಲಿ ನಾಲ್ಕೈದುವರ್ಷಗಳ ಕಾಲ ಕೆಲಸ  ಮಾಡಿದ್ದಾನೆ. ಈ ವೇಳೆ ಬೆಂಗಳೂರಿನ ಬಗ್ಗೆ ತಿಳಿದುಕೊಂಡು, ಇಲ್ಲಿಯೇ ಇಜಡ್‌ ಕಂಪನಿ ನೊಂದಾಯಿಸಿ, ಒಡಿಶಾದಲ್ಲಿ ಕಂಪನಿ ತೆರೆದುಕೊಂಡಿದ್ದಾನೆ. ಬೆಂಗಳೂರಿಗೆ ಬಂದಾಗ ಇಲ್ಲಿನ ಉದ್ಯೋಕಾಂಕ್ಷಿಗಳನ್ನು ಆನ್‌ಲೈನ್‌ ಮೂಲಕ ಸಂಪರ್ಕಿಸಿ ವಂಚಿಸುತ್ತಿದ್ದ. ತನ್ನ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಒಡಿಶಾಗೆ ಪರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next