Advertisement

ರವಿ ಬೆಳಗೆರೆಗೆ ಮಧ್ಯಂತರ ಜಾಮೀನು ಮಂಜೂರು

10:25 AM Dec 14, 2017 | |

ಬೆಂಗಳೂರು: ಸಹೋದ್ಯೋಗಿ ಸುನಿಲ್‌ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಆರೋಪ  ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದ “ಹಾಯ್‌ ಬೆಂಗಳೂರು’ ವಾರಪತ್ರಿಕೆ ಸಂಪಾದಕ ರವಿ ಬೆಳಗೆರೆಗೆ 65ನೇ ಸಿಸಿಎಚ್‌ ನ್ಯಾಯಾಲಯ ಡಿ.16ರವರೆಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

Advertisement

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ರವಿ ಬೆಳಗೆರೆ ಪರ ವಕೀಲ ದಿವಾಕರ್‌ ಸಲ್ಲಿಸಿದ್ದ ಆರೋಪಿಯ ಅನಾರೋಗ್ಯ ಕುರಿತ ದಾಖಲೆಗಳನ್ನ ಪರಿಶೀಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಕೋರ್ಟ್‌ ಆದೇಶಿಸಿದೆ.

ಪ್ರಕರಣ ಕುರಿತು ಸಂಬಂಧಪಟ್ಟ ತನಿಖೆಗೆ ಸಹಕರಿಸಬೇಕು, ಒಂದು ಲಕ್ಷ ಭದ್ರತಾ ಠೇವಣಿಯ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು,ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಬಾರದು ಎಂದು ಷರತ್ತುಗಳನ್ನು ವಿಧಿಸಿ ಸಿಟಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಮಧುಸೂದನ್‌ ಆದೇಶಿಸಿದರು.

ವಿಚಾರಣೆ ವೇಳೆ ರವಿ ಬೆಳಗೆರೆ ಪರ ವಕೀಲ ದಿವಾಕರ್‌ ಜಾಮೀನಿಗಾಗಿ ವಾದ ಮಂಡಿಸಿ,ಸಿಸಿಬಿ ವಿಚಾರಣೆ ಅಂತ್ಯವಾಗಿದ್ದು,ಆರೋಪಿ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ನ್ಯಾಯಾಲಯಕ್ಕೆ ತಿಳಿಸಿ ಈ ಕುರಿತು 140 ಪುಟಗಳ ಮಾಹಿತಿ ಸಮೇತ ಅರ್ಜಿ ಸಲ್ಲಿಸಿದ್ದರು.ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ವೇಳೆ ಸಿಕ್ಕ ಆರೋಪಿಯೊಬ್ಬರು ನೀಡಿದ ಹೇಳಿಕೆ ಆಧರಿಸಿ ರವಿಬೆಳಗೆರೆಯನ್ನು ಬಂಧಿಸಿದ್ದಾರೆ. ಪ್ರಸ್ತುತ ನಮ್ಮ ಕಕ್ಷಿದಾರರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ರವಿಬೆಳಗೆರೆ ಪ್ರತಿನಿತ್ಯ ಇನ್ಸುಲಿನ್‌ ಇಂಜೆಕ್ಷನ್‌ ತೆಗೆದುಕೊಳ್ಳಬೇಕು, ಕಾಲಿಗೆ ಗಾಯವಾಗಿದ್ದು, ಹೆಚ್ಚಿನ ಆರೈಕೆಯ ಅಗತ್ಯವಿದೆ. ತನಿಖೆಗೆ ನನ್ನ ಕಕ್ಷಿದಾರರು ಇಲ್ಲಿ ತನಕ ಸಹಕರಿಸಿದ್ದಾರೆ. ಮುಂದೆ ಕೂಡಾ ಸಹಕರಿಸುತ್ತಾರೆ. ಆರೋಪಿಯೊಬ್ಬನ ಹೇಳಿಕೆ ಆಧಾರ ಮೇಲೆ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಸರಿಯಾದ ಸಾಕ್ಷಿಯನ್ನು ಕೂಡ ಇನ್ನೂ ಕಲೆ ಹಾಕಿಲ್ಲ ಎಂದು ವಾದಿಸಿದರು.

Advertisement

ಈ ಕುರಿತು ನ್ಯಾ.ಮಧುಸೂದನ್‌, ಸದ್ಯ ಅರ್ಜಿದಾರರು ಎಲ್ಲಿದ್ದಾರೆ ಎಂದು ವಕೀಲ ದಿವಾಕರ್‌ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಕೀಲರು ರವಿ ಬೆಳಗೆರೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ನಂತರ ನ್ಯಾಯಾಧೀಶರು ಮಧ್ಯಂತರ ಜಾಮೀನು ಮಂಜೂರು ಮಾಡಿದರು. ಪತ್ರಕರ್ತ ಸುನೀಲ್‌ ಹೆಗ್ಗರವಳ್ಳಿ ಹತ್ಯೆ ಸುಪಾರಿ ನೀಡಿದ ಆರೋಪ ಪ್ರಕರಣ ಸಂಬಂಧ ಕಳೆದ ಶುಕ್ರವಾರ ಸಿಸಿಬಿ ಪೊಲೀಸರು ರವಿ ಬೆಳಗೆರೆ ಬಂಧಿಸಿ ನಾಲ್ಕು ದಿನಗಳ ವಿಚಾರಣೆ ನಡೆಸಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಚಂದನ ಟಿವಿ ಮಾತ್ರ ನೋಡ್ತಿನಿ
ಇನ್ನು ರವಿಬೆಳಗೆರೆ ಬಂಧನ ಕುರಿತು ಖಾಸಗಿ ಮಾಧ್ಯಮಗಳು ನಿರಂತರವಾಗಿ ಸುದ್ದಿ ಪ್ರಸಾರ ಮಾಡುತ್ತಿವೆ ಎಂದು ವಕೀಲ ದಿವಾಕರ್‌ ಹೇಳಿದರು. ಈ ವೇಳೆ ನ್ಯಾ. ಮಧುಸೂದನ್‌, ನಾನು ಚಂದನ ಟಿವಿ ಹೊರತು ಪಡಿಸಿ ಬೇರೆ ಯಾವುದೇ ಟಿವಿಯನ್ನು ನೋಡುವುದಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ಕೋರ್ಟ್‌ ಹಾಲ್‌ನಲ್ಲಿದ್ದ ವಕೀಲರು ನಗೆ ಬೀರಿದರು.

ಬುಧವಾರವೂ ಜೈಲಿನ ಸುಪರ್ದಿಯಲ್ಲಿ
ಇದೇ ಸೋಮವಾರ ಜೈಲು ಸೇರಿದ್ದ ರವಿಬೆಳಗೆರೆಗೆ ನಿತ್ಯವೂ ಒಂದಲ್ಲ ಒಂದು ಕಾರಣಕ್ಕೆ ಹೊರಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದೆ. ಸೋಮವಾರ ಸಂಜೆ ಜೈಲಿಗೆ ಕಳುಹಿಸುವ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಮಂಗಳವಾರ ಶುಗರ್‌ ಮತ್ತು ಬಿಪಿ ಹೆಚ್ಚಾಗಿದ್ದರಿಂದ ಮತ್ತೂಮ್ಮೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಜೈಲಿಗೆ ಕರೆದೊಯ್ದಿದ್ದರು. ಬುಧವಾರ ತೀವ್ರವಾಗಿ ಅಸ್ವಸ್ಥಗೊಂಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ, ನ್ಯಾಯಾಲಯ ಆದೇಶಿಸಿದಂತೆ ಮಧ್ಯಂತರ ಜಾಮೀನು ಆದೇಶದ ಪ್ರತಿ ಜೈಲಿನ ಮುಖ್ಯಅಧೀಕ್ಷಕರಿಗೆ ತಲುಪಿಲ್ಲ. ಹೀಗಾಗಿ ಬುಧವಾರವೂ ರವಿಬೆಳಗೆರೆ ಜೈಲಿನ ಅಧಿಕಾರಿಗಳ ಸುಪರ್ದಿಯಲ್ಲೇ ಇದ್ದರು.

ನ್ಯಾಯಾಲಯದ ಆದೇಶದಂತೆ ಗುರುವಾರ ಎಲ್ಲ ನಿಯಮಗಳನ್ನು ಮುಕ್ತಾಯಗೊಳಸಿದರೆ, ಆರೋಪಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವುದರಿಂದ ಆಸ್ಪತ್ರೆಯಲ್ಲಿಯೇ ಜಾಮೀನು ಪ್ರಕ್ರಿಯೆ ಮುಕ್ತಾಯಗೊಳಿಸಿ ಬಿಡುಗಡೆ ಮಾಡುತ್ತೇವೆ ಎಂದು ಜೈಲಿನ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ರವಿ ಬೆಳಗೆರೆಗೆ ಜಾಮೀನು ಕೋರಿ ಬುಧವಾರ ಬೆಂಗಳೂರು ನ್ಯಾಯಾಲಯಕ್ಕೆ ಸುಮಾರು 140 ಪುಟಗಳ ಸುದೀರ್ಘ‌ ಅರ್ಜಿ ಸಲ್ಲಿಸಲಾಗಿತ್ತು. ಅನಾರೋಗ್ಯದ ಕಾರಣ ಹಾಗೂ ಪೊಲೀಸರ ವಿಚಾರಣೆ ಈಗಾಗಲೇ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದೇವು. ಮನವಿ ಪುರಸ್ಕರಿಸಿದ ನ್ಯಾಯಾಲಯದ ನ್ಯಾ.ಮಧುಸೂದನ್‌ ಜಾಮೀನು ಮಂಜೂರು ಮಾಡಿದ್ದಾರೆ.
ದಿವಾಕರ್‌, ರವಿಬೆಳಗೆರೆ ಪರ ವಕೀಲ.

Advertisement

Udayavani is now on Telegram. Click here to join our channel and stay updated with the latest news.

Next