Advertisement

Bengaluru ನಗರದಲ್ಲಿ ಸಂಭ್ರಮದ ನವರಾತ್ರಿ, ವಿಶೇಷ ಪೂಜೆ

01:15 PM Oct 04, 2024 | Team Udayavani |

ಬೆಂಗಳೂರು: ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವದ ಅಂಗವಾಗಿ ನಗರದ ದೇವಿ ದೇವಾಲಯಗಳು ವಿವಿಧ ಹೂವು ಹಾಗೂ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದು, ಗುರುವಾರ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆದವು.

Advertisement

ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ನವ ದುರ್ಗೆಯರ ಆರಾಧನೆ ಮಾಡಲಾಯಿತು. ಮುಂಜಾನೆ 5 ರಿಂದ ದೇಗುಲಗಳಲ್ಲಿ ಧಾರ್ಮಿಕ ಕೈಂಕರ್ಯ ಹಾಗೂ ವಿಶೇಷ ಪೂಜೆ, ಹೋಮಗಳು ನಡೆದವು. ಮನೆಗಳಲ್ಲಿ ಶುಭ ಮುಹೂರ್ತದಲ್ಲಿ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಜತೆಗೆ ಬೊಂಬೆಗಳನ್ನು ಕೂರಿಸಿ ಸಂಭ್ರಮಿಸಿದರು. ಇದೇ ವೇಳೆ ನವ ಭಕ್ಷ್ಯಗಳನ್ನು ತಯಾರಿಸಿ, ದೇವಿ ಮುಂದಿಟ್ಟು ನೈವೇದ್ಯ ಅರ್ಪಿಸಿದರು.

ವಿಶೇಷ ಧಾರ್ಮಿಕ ಪೂಜೆ: ಹಬ್ಬದ ಅಂಗವಾಗಿ ದೇವಿ ದೇಗುಲಗಳಲ್ಲಿ ಕಳಶ ಸ್ಥಾಪನೆ, ಪ್ರಾಣ ಪ್ರತಿಷ್ಠೆ, ಗಣಹೋಮ, ನವಗ್ರಹ, ಮೃತ್ಯುಂಜಯ, ನವ ದುರ್ಗಾ, ಸುದರ್ಶನ, ಮಹಾಲಕ್ಷ್ಮೀ, ಮಹಾಸರಸ್ವತಿ, ಮನ್ಯುಸೂಕ್ತ , ಚಂಡಿಕಾ, ಗಾಯತ್ರಿ ಹೋಮ, ಕುಂಭಾಭಿಷೇಕ, ನವವರ್ಣ ಅಭಿಷೇಕ, ಪಂಚಾಮೃತ ಅಭಿಷೇಕ ನಡೆಯಿತು. ಅ.12ರ ವರೆಗೆ ಪ್ರತಿದಿನ ಅನ್ನದಾನ ಮತ್ತು ಪ್ರಸಾದ ವಿನಿಯೋಗ ಇರಲಿದೆ. ಜತೆಗೆ ಲಲಿತ ಸಹಸ್ರನಾಮ ಹಾಗೂ ಪಾರಾಯಣ, ಪ್ರವಚನ ಮುಂದಿನ 9 ದಿನಗಳ ನಡೆಯಲಿದೆ.

ಎಲ್ಲೆಲ್ಲಿ ವಿಶೇಷ ಪೂಜೆ?: ನವರಾತ್ರಿ ಪ್ರಯುಕ್ತ ನಗರದ ಮತ್ತಿಕೆರೆಯ ಶ್ರೀ ಚೌಡೇಶ್ವರಿ ದೇವಿ, ಮಲ್ಲೇಶ್ವರದ ಸರ್ಕಲ್‌ ಮಾರಮ್ಮ, ಗಂಗಮ್ಮ, ಮೆಜೆಸ್ಟಿಕ್‌ ಅಣ್ಣಮ್ಮ, ಶೇಷಾದ್ರಿಪುರಂನ ಮಹಾಲಕ್ಷ್ಮೀ, ಟಿ.ಆರ್‌. ಮಿಲ್‌ ಬಳಿಯ ಬಂಡೀಕಾಳಮ್ಮ, ಮುತ್ಯಾಲನಗರದ ಮುತ್ಯಾಲಮ್ಮ, ಶಂಕರ ಮಠದ ಶ್ರೀ ಶಾರದಾ, ಮಲ್ಲೇಶ್ವರದ ಕನ್ನಿಕಾ ಪರಮೇಶ್ವರಿ, ವಿವಿಪುರಂನ ವಾಸವಿ ದೇವಿ, ರಾಜರಾಜೇಶ್ವರಿ ನಗರದ ರಾಜ ರಾಜೇಶ್ವರಿ, ಮಹಾ ಪ್ರತ್ಯಂಗಿರಾ, ಆರ್‌ಟಿ ನಗರದ ಗಂಗಮ್ಮ, ಬೆಂಗ ಳೂರಿನ ತ್ಯಾಗರಾಜನಗರದಲ್ಲಿ ಪ್ಲೇಗ್‌, ನಿಮಿಷಾಂಬ ದೇವಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ.

Advertisement

ನವರಾತ್ರಿ ಅಂಗವಾಗಿ ದೇವಿಯನ್ನು ಶೈಲಪುತ್ರಿ, ಬ್ರಹ್ಮ ಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯನಿ, ಕಾಲರಾತ್ರಿ, ಸಿದ್ಧಿದಾತ್ರಿ ಮತ್ತು ಮಹಾಗೌರಿಯ ರೂಪದಲ್ಲಿ ಸಿಂಗಾರ ಮಾಡಿ, ಮುಂದಿನ 9 ದಿನಗಳ ಕಾಲ ಪೂಜೆ ಮಾಡಲಾಗುತ್ತದೆ.

ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ: ಲಾಸ್ಯ ವರ್ಧನ ಟ್ರಸ್ಟ್‌ ನವರಾತ್ರಿ ಮಹೋತ್ಸವ ಅಂಗವಾಗಿ 10 ದಿನಗಳ ಮಲ್ಲೇಶ್ವರದ ಕೇಶವ ಕಲ್ಪದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಅ.4ರಂದು ಸಾಧನ ಸಂಗಮ ಟ್ರಸ್ಟ್‌ನಿಂದ ಸಮೂಹ ನೃತ್ಯ, ಅ.5ರಂದು ಚಂಪಕ ಅಕಾಡೆಮಿ ಭರತನಾಟ್ಯ ಸಮೂಹ ನೃತ್ಯ, ಅ.6ರಂದು ಕಲೈಕೋವಿಲ್‌ ನಾಟ್ಯ ಪಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಸಮೂಹ ನೃತ್ಯ, ಅ.7 ಪೂರ್ಣವಂದಿತ ವೆಂಟಕರಾಮು ಅವರಿಂದ ಭರತನಾಟ್ಯ, ಅ.8ರಂದು ಶ್ರೀ ಕಂಠೇಶ್ವರ ಕಲಾಕೇಂದ್ರ ವಿದ್ಯಾರ್ಥಿಗಳಿಂದ ಭರತ ನಾಟ್ಯ ಸಮೂಹ ನೃತ್ಯ, ಅ. 9ರಂದು ಜತಿನ್‌ ಅಕಾಡೆಮಿ ವಿದ್ಯಾರ್ಥಿಗಳಿಂದ ಕೂಚಿಪುಡಿ, ಅ.10ರಂದು ಶ್ರದ್ಧಾ ಡಾನ್ಸ್‌ ಸೆಂಟರ್‌ನಿಂದ ಭರತನಾಟ್ಯ, ಅ. 11ರಂದು ಲಾಸ್ಯವರ್ಧನ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯತೆ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next