Advertisement

Anekal: ನಗರದಲ್ಲಿ ಮತ್ತೆ ಮೂವರು ಪಾಕ್‌ ಪ್ರಜೆಗಳ ಬಂಧನ

12:04 PM Oct 04, 2024 | Team Udayavani |

ಆನೇಕಲ್‌: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆಗಳ ಬಂಧನ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಜಿಗಣಿ ಪೊಲೀಸರು ಗುರುವಾರ ಮತ್ತೆ ಮೂವರು ಪಾಕ್‌ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರೂ ಸಹ ನಕಲಿ ದಾಖಲೆ ಸೃಷ್ಟಿಸಿ ಹಿಂದೂಗಳ ಹೆಸರಿನಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

Advertisement

ಪಾಕ್‌ ಮೂಲದ ತಾರಿಖ್‌ ಸಯೀದ್‌, ಈತನ ಪತ್ನಿ ಅನಿಲ ಸಯೀದ್‌, ಇಶ್ರತ್‌ ಸಯೀದ್‌ (ಅಪ್ರಾಪ್ತ ಬಾಲಕಿ) ಬಂಧಿತ ಕುಟುಂಬ. ಇವರು ಸಹ ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಬೆಂಗಳೂರಿನ ಪೀಣ್ಯದಲ್ಲಿ ವಾಸವಾಗಿದ್ದರು.

ಜಿಗಣಿಯಲ್ಲಿ ವಾಸವಾಗಿದ್ದ ಪಾಕ್‌ ಕುಟುಂಬವನ್ನು 4 ದಿನಗಳ ಹಿಂದೆ ಬಂಧನ ಮಾಡಲಾಗಿತ್ತು. ಈ ಬಂಧಿತರು ನೀಡಿದ ಮಾಹಿತಿ ಮೇರೆಗೆ ಜಿಗಣಿ ಪೊಲೀಸರು ಮೂವರನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ನಂತರ ಜಿಗಣಿ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿ‌ ತನಿಖೆ ನಡೆಸಬೇಕಿದ್ದರಿಂದ ಆನೇಕಲ್‌ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ಪೊಲೀಸ್‌ ಕಸ್ಟಡಿಗೆ ಪಡೆದಿದ್ದಾರೆ.

10 ವರ್ಷಗಳಿಂದ ಪಾಕ್‌ ಪ್ರಜೆಗಳು ಭಾರತದಲ್ಲಿ ನೆಲೆಸಿದ್ದವರನ್ನು ಬಂಧಿಸಿದ ಕೂಡಲೇ ಕೇಂದ್ರೀಯ ಗುಪ್ತಚರ ಸಂಸ್ಥೆ, ಎನ್‌ಐಎ ಆಗಮಿಸಿ ಮಾಹಿತಿ ಕಲೆ ಹಾಕಿದೆ. ಹಾಗೆಯೇ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್‌.ಜಿತೇಂದ್ರ ಭೇಟಿ ನೀಡಿ ತನಿಖೆ ಬಗ್ಗೆ ಚರ್ಚೆ ನಡೆಸಿದ್ದು, ಸಲಹೆ ಸೂಚನೆ ನೀಡಿದ್ದಾರೆ.

15 ಮಂದಿ ಅಕ್ರಮ ಪ್ರವೇಶ: ಪಾಕ್‌ನಿಂದ ಒಟ್ಟು 15 ಮಂದಿ ಭಾರತಕ್ಕೆ ಬಂದಿದ್ದರು. ಅವರಲ್ಲಿ 7 ಮಂದಿ ಕರ್ನಾಟಕಕ್ಕೆ ಬಂದರೆ, ಉಳಿದವರು ಅಸ್ಸಾಂ, ಒಡಿಶಾ ಮತ್ತು ಹೈದರಾಬಾದ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಜಿಗಣಿಯಲ್ಲಿ ಪಾಕ್‌ ಕುಟುಂಬವನ್ನು ಬಂಧಿಸಿದ ಬಳಿಕ ಹಲವು ಸ್ಫೋಟಕ ಮಾಹಿತಿ ಹೊರ ಬಂದಿದೆ.

Advertisement

ಬೆಳಕಿಗೆ ಬಂದಿದ್ದು ಹೇಗೆ? ಬಂಧನದಲ್ಲಿದ್ದ ಪಾಕಿಸ್ತಾನದ ರಶೀದ್‌ ಅಲಿ ಸಿದ್ಧಕಿ ಕುಟುಂಬವನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ತಮ್ಮಂತೆಯೇ ಪೀಣ್ಯದಲ್ಲಿ ನೆಲೆಸಿರುವುದಾಗಿ ಹೇಳಿದ್ದಾರೆ. ಬಳಿಕ ಜಿಗಣಿ ಪೊಲೀಸರು ಬೆಂಗಳೂರಿನ ಪೀಣ್ಯಕ್ಕೆ ತೆರಳಿ ಒಂದೇ ಕುಟುಂಬದ ಮೂವರನ್ನು ಬಂಧಿಸಿದ್ದಾರೆ.

ರಶೀದ್‌ ಸಿದ್ದಕಿ ಕುಟುಂಬದೊಂದಿಗೆ ಈ ಕುಟುಂಬವು ಭಾರತಕ್ಕೆ ಅಕ್ರಮವಾಗಿ ನುಸುಳಿದ್ದರು. ಪಶ್ಚಿಮ ಬೆಂಗಾಲ್‌ ನಿಂದ ದೆಹಲಿಗೆ ಬಂದವರೇ ನಕಲಿ ದಾಖಲೆ ಮಾಡಿಸಿಕೊಂಡಿದ್ದಾರೆ. ತಾರಿಕ್‌ ಸಯೀದ್‌ ಬದಲಾಗಿ ಸನ್ನಿ ಚೌಹಾಣ್‌, ಅನಿಲ್‌ ಸಯೀದ್‌ ಬದಲಾಗಿ ದೂಪಾ ಚೌಹಾಣ್‌ಎಂದು ಹೆಸರು ಬದಲಾಯಿಸಿಕೊಂಡು ನಕಲಿ ದಾಖಲೆ ಮಾಡಿಸಿಕೊಳ್ಳಲಾಗಿತ್ತು. ಸಿದ್ದಕಿ ಕುಟುಂಬ ಜಿಗಣಿಗೆ ಬಂದರೆ ಇವರು ಕೇರಳಕ್ಕೆ ಹೋಗಿದ್ದರು. ಇದೇ ಸಮಯದಲ್ಲಿ ರಶೀದ್‌ ಅಲಿ ಸಿದ್ದಕಿ ಹೆಂಡತಿಯ ತಂಗಿ ಗಂಡನ ಸಹಾಯದಿಂದ ದಾವಣಗೆರೆಯಲ್ಲಿ ಆಶ್ರಯ ಪಡೆದಿದ್ದ. ಅಲ್ಲಿಂದ ಪೀಣ್ಯಕ್ಕೆ ಬಂದು ಕುಟುಂಬದೊಂದಿಗೆ ವಾಸವಾಗಿದ್ದ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next