ಬೆಂಗಳೂರು: ಅಮ್ಮ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬಿಎಸ್‌ಸಿ ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರಿನ ಥಣಿಸಂದ್ರದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಥಣಿಸಂದ್ರದ ಅಯ್ಯಪ್ಪ (20) ಆತ್ಮಹತ್ಯೆಗೆ ಶರಣಾದವ.
ತಮಿಳುನಾಡು ಮೂಲದ ಅಯ್ಯಪ್ಪ ತನ್ನ ತಾಯಿ ಜತೆಗೆ ಬೆಂಗಳೂರಲ್ಲೆ ಬಂದು ನೆಲೆಸಿದ್ದ. ಥಣಿಸಂದ್ರದಲ್ಲಿ ಸಣ್ಣದೊಂದು ಮನೆ ಮಾಡಿಕೊಂಡು ವಾಸವಿದ್ದರು. ಕಳೆದ 6 ವರ್ಷಗಳ ಹಿಂದಷ್ಟೇ ಅಯ್ಯಪ್ಪ ತಂದೆ ಮೃತಪಟ್ಟಿದ್ದರು.
ತಾಯಿ ಮನೆ ಕೆಲಸ ಮಾಡಿಕೊಂಡು ಮಗನನ್ನು ಓದಿಸುತ್ತಿದ್ದರು. ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ಅಯ್ಯಪ್ಪನಿಗೆ ಬೈಕ್ ನಲ್ಲಿ ಓಡಾಡುವ ಹುಚ್ಚು ಹೆಚ್ಚಾಗಿತ್ತು. ಬೈಕ್ ಕೊಡಿಸುವಂತೆ ಅಮ್ಮನನ್ನು ಪೀಡಿಸುತ್ತಿದ್ದ. ಆರ್ಥಿಕವಾಗಿ ಹಿಂದುಳಿದಿದ್ದ ಹಿನ್ನೆಲೆಯಲ್ಲಿ ಪುತ್ರನಿಗೆ ತಾಯಿ ಬೈಕ್ ಕೊಡಿಸಿರಲಿಲ್ಲ. ಸ್ವಲ್ಪ ದಿನ ಕಾಯು ಮುಂದೆ ಬೈಕ್ ಕೊಡಿಸೋಣ ಎಂದು ತಾಯಿ ಮಗನಿಗೆ ಸಮಾಧಾನ ಮಾಡಿದ್ದರು. ಅಲ್ಲದೇ, ಶೀಘ್ರದಲ್ಲೇ ಬೈಕ್ ಕೊಡಿಸಲು ತಾಯಿ ನಿರ್ಧರಿಸಿ 50 ಸಾವಿರ ರೂ. ಸಾಲ ಮಾಡಲು ಮುಂದಾಗಿದ್ದರು.
ಸೆ.11ರಂದು ಅಯ್ಯಪ್ಪ ತಾಯಿ ಬೆಳಗ್ಗೆ 6 ಗಂಟೆಗೆ ಎಂದಿನಂತೆ ಕೆಲಸಕ್ಕೆಂದು ಹೋಗಿದ್ದರು. ಸಂಜೆ 4.30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ ಗಾಬರಿಗೊಂಡ ತಾಯಿ ಸಂಬಂಧಿಕರು ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಸಂಬಂಧಿಕರು ನೀಡಿದ ಮಾಹಿತಿ ಆಧರಿಸಿ ಹೆಣ್ಣೂರು ಪೊಲೀರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿ ಬೈಕ್ ಕೊಡಿಸಲು ಮುಂದಾಗಿರುವ ಸಂಗತಿ ಅಯ್ಯಪ್ಪನ ಗಮನಕ್ಕೆ ಬಂದಿರಲಿಲ್ಲ. ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಡಿಕೊಂಡಿದ್ದಾನೆ ಎನ್ನಲಾಗಿದೆ.