ಗುಬ್ಬಿ: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು, ಮನನೊಂದು ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನ.2ರ ಶನಿವಾರ ಸಂಭವಿಸಿದೆ.
ಪೌರ ಕಾರ್ಮಿಕ ಅರುಣ್ ಕುಮಾರ್ (34) ಆತ್ಮಹತ್ಯೆ ಮಾಡಿಕೊಂಡಾತ.
ಅರುಣ್ ಕುಮಾರ್ ನ.2ರ ಶನಿವಾರ ಸಂಜೆ ಸುಮಾರು 4.30ರ ಸಮಯಕ್ಕೆ ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷಯ ತಿಳಿದ ನೆರೆಹೊರೆಯವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಅರುಣ್ ಕುಮಾರ್ ಸುಮಾರು 10 ವರ್ಷಗಳಿಂದ ಗುಬ್ಬಿ ಪಟ್ಟಣ ಪಂಚಾಯತ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ 1 ವರ್ಷದ ಹಿಂದೆ ಹೊರಗುತ್ತಿಗೆಯಿಂದ ಕೆಲಸ ಪರ್ಮನೆಂಟ್ ಆಗಿತ್ತು ಎಂಬುದು ತಿಳಿದು ಬಂದಿದೆ.
ಅರುಣ್ ಕುಮಾರ್ ಮೀಟರ್ ಬಡ್ಡಿಕೋರರಿಂದ 1 ಲಕ್ಷ ಹಣ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದರು. ಸಾಲ ಪಡೆದ ಹಣಕ್ಕೆ 5 ಲಕ್ಷ ರೂ. ಗಳನ್ನು ನೀಡುವಂತೆ ಆಗಾಗ ಮೀಟರ್ ಬಡ್ಡಿ ದಂಧೆಕೋರರು ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದೆ.
ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.