ಬೆಂಗಳೂರು: ಶಿವರಾತ್ರಿ ಸಂಭ್ರಮಾಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಇರಿದು ಹತ್ಯೆಗೈದ ಘಟನೆ ಶುಕ್ರವಾರ ರಾತ್ರಿ ಗಿರಿನಗರದಲ್ಲಿ ನಡೆದಿದೆ.
ದೇವಸ್ಥಾನದ ಕಾರ್ಯಕ್ರಮದ ವೇಳೆ ಘಟನೆ ನಡೆದಿದ್ದು, ಶ್ರೀನಗರ ಯೋಗೇಶ್ (23) ಎಂಬಾತ ಹತ್ಯೆಗೀಡಾದ ಯುವಕ.
ಬೈಕ್ ಸರ್ವೀಸ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಯೋಗೇಶ್ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಇತರರ ಮೈಗೆ ತಾಗಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಕಾರ್ಯಕ್ರಮ ಮುಗಿಸಿ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ನಾಲ್ವರು ಯುವಕರು ಹಿಂಬಾಲಿಸಿ ಕೃತ್ಯ ಎಸಗಿದ್ದಾರೆ ಎಂದು ಪ್ರಕರಣದಲ್ಲಿ ದಾಖಲಾಗಿದೆ.
ಯೋಗೇಶ್ಗೆ ಚೂರಿಯಿಂದ ಚುಚ್ಚಿದ್ದು, ತಪ್ಪಿಸಿಕೊಳ್ಳುವ ಯತ್ನದಲ್ಲಿ ಮನೆಯೊಂದರ ಕಾಂಪೌಂಡ್ ಹಾರಿದ್ದ ವೇಳೆ ಗ್ಲಾಸ್ ಚುಚ್ಚಿ ಸಾವನ್ನಪ್ಪಿರಬಹುದು ಎಂದು ಭಾವಿಸಲಾಗಿತ್ತಾದರೂ ಪೊಲೀಸರ ತನಿಖೆ ವೇಳೆ ಹತ್ಯೆ ಮಾಡಿರುವುದಾಗಿ ಕಂಡು ಬಂದಿದೆ.
ಬ್ಯಾಟರಾಯನಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಹಳೆ ವೈಷಮ್ಯ ಕೃತ್ಯಕ್ಕೆ ಕಾರಣವಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.