ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಕರೆ ನೀಡಿರುವ ಮಂಗಳವಾರ ಬೆಂಗಳೂರು ಬಂದ್ ಗೆ ಸಕಲ ಸಿದ್ದತೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 6 ರಿಂದ ಸಂಜೆ 6 ವರೆಗೂ ಬಂದ್ ಕರೆ ಕೊಟ್ಟಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ರ್ಯಾಲಿ ಮಾಡಲು ಅರ್ಜಿ ನೀಡಿದ್ದಾರೆ. ಆದರೆ ನಗರದಲ್ಲಿ ಬಂದ್ ಅಥವಾ ರ್ಯಾಲಿಗೆ ಅವಕಾಶ ಇಲ್ಲ. ನ್ಯಾಯಾಲಯದ ಅದೇಶವೂ ಇದೆ ಎಂದರು.
ಪ್ರತಿಭಟನೆ, ಮೆರವಣಿಗೆಗೆ ನಿರ್ಬಂಧವಿದೆ. ಸುಪ್ರಿಂ ಕೋರ್ಟ್ ಆದೇಶದಂತೆ ಯಾವುದೇ ಬಂದ್ ಗೆ ಅವಕಾಶವಿಲ್ಲ. ಬಂದ್ ನಲ್ಲಿ ಆಸ್ತಿ ಪಾಸ್ತಿ ನಷ್ಟವಾದರೆ ಆಯೋಜಕರೆ ಹೊಣೆ ಎಂಬ ಸೂಚನೆಯಿದೆ. ನಾಳೆ ಬಂದ್ ಗೆ ಅವಕಾಶವಿಲ್ಲ, ಅನುಮತಿ ಕೊಡುವುದಿಲ್ಲ. ನಾಳೆ ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ ಎಂದು ದಯಾನಂದ ಹೇಳಿದರು.
ಬಲವಂತವಾಗಿ ಮುಚ್ಚಿಸುವಂತಿಲ್ಲ: ನಾಳೆಯ ಬಂದ್ ಗೆ ಪೊಲೀಸ್ ಇಲಾಖೆಯಿಂದ ಬಂದ್ ಗೆ ಅನುಮತಿಯಿಲ್ಲ. ನಾಳೆ ಇಡೀ ಬೆಂಗಳೂರು ಪೊಲೀಸ್ ಬಂದೋಬಸ್ತ್ ಇರುತ್ತದೆ. ಹೊಯ್ಸಳ ಸಿಬ್ಬಂದಿ ಸುತ್ತುತ್ತಿರುತ್ತಾರೆ. ಸಿಐಡಿ ಹಾಗೂ ಐಎಸ್ ಡಿ ಅಧಿಕಾರಿಗಳೂ ಸಹ ಭದ್ರತೆಗೆ ನಿಯೋಜಿಸಲಾಗುತ್ತದೆ. ಒತ್ತಾಯ ಪೂರ್ವಕವಾಗಿ ಯಾರೂ ವಾಹನಗಳನ್ನು ನಿಲ್ಲಿಸುವಂತಿಲ್ಲ. ವಾಹನಗಳು ತಡೆಯುವುದು, ಅಂಗಡಿ ಮುಚ್ಚಿಸುವುದು ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ಎಚ್ಚರಿಸಿದರು.
ಇದನ್ನೂ ಓದಿ:Viral Video: ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕಿಡ್ನಾಪ್? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!
ನಿಷೇಧಾಜ್ಞೆ ಜಾರಿ: ಬಂದ್ ಹಿನ್ನೆಲೆಯಲ್ಲಿ ಸೋಮವಾರ ಮಧ್ಯರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. 60 ಕೆಎಸ್ ಆರ್ ಪಿ ಮತ್ತು 40 ಸಿಎಆರ್ ತುಕಡಿಗಳ ನಿಯೋಜನೆಯಾಗಲಿದೆ. 2016 ರಲ್ಲಿ ನಡೆದ ಘಟನೆ ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಬಸ್ ಗಳಿಗೆ ಎಸ್ಕಾರ್ಟ್ ನೀಡುವ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ. ಸುಮಾರು 20 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.