ಬೆಂಗಳೂರು: ಕಾಲೇಜಿನ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಕಳುಹಿಸಿದ್ದ ಆರೋಪಿಯನ್ನು ವಿ.ವಿ.ಪುರ ಠಾಣಾ ಪೊಲೀಸರು ಪಶ್ಚಿಮ ಬಂಗಾಳದದಲ್ಲಿ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಿವಾಸಿ ದೀಪಾಂಜನ್ ಮಿತ್ರಾ (48) ಬಂಧಿತ. ಆರೋಪಿ. ಈತನಿಂದ 1 ಲ್ಯಾಪ್‌ಟಾಪ್, 1 ಮೊಬೈಲ್ ಜಪ್ತಿ ಮಾಡಲಾಗಿದೆ.
ಆರೋಪಿ ಮಿತ್ರಾ ಕಾಲೇಜಿನ ಆವರಣದಲ್ಲಿ ಹೈಡ್ರೋ ಜನ್ ಆಧಾರಿತ ಸುಧಾರಿತ ಐಇಡಿ ಇಟ್ಟಿರುವುದಾಗಿ ಅ.4ರಂದು ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಹಾಗೂ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿರುವ ಬಿಎಂಎಸ್ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳಿಸಿದ್ದ. ಆಯಾ ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ಹನುಮಂತನಗರ ಹಾಗೂ ವಿ.ವಿ.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಾಂತ್ರಿಕ ಕಾರ್ಯಾಚರಣೆ ಮೂಲಕ ಇ-ಮೇಲ್ ಸಂದೇಶ ಕಳುಹಿಸಿದ ಸ್ಥಳ ಹಾಗೂ ವ್ಯಕ್ತಿಗಳ ವಿವರ ಕಲೆ ಹಾಕಿ ದ್ದರು. ಆ ವೇಳೆ ಆರೋಪಿಯು ಪಶ್ಚಿಮ ಬಂಗಾಳದಲ್ಲಿರುವುದು ಪತ್ತೆಯಾಗಿತ್ತು. ಅ.17ರಂದು ಡಾರ್ಜಿಲಿಂಗ್ ಜಿಲ್ಲೆಯ ಸಾಲ್ಬರಿ ಟೌನ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಗೆ ಜಾಮೀನು ನೀಡಿದ ಕೋರ್ಟ್: ಇನ್ನು ಆರೋಪಿಯನ್ನು ಪಶ್ಚಿಮ ಬಂಗಾಳದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾನ್ಸಿಟ್ ವಾರೆಂಟ್ ಗೆ ಕೋರಿದ್ದು, ನ್ಯಾಯಾಲಯವು ಆರೋಪಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಹೀಗಾಗಿ ಬಂಧಿತನನ್ನು ಬೆಂಗಳೂರಿಗೆ ಕರೆತರಲು ಅಲ್ಲಿನ ಸ್ಥಳೀಯ ನ್ಯಾಯಾಲಯದಿಂದ ಟ್ರಾನ್ಸಿಟ್ ವಾರೆಂಟ್ ಸಿಗದ ಕಾರಣ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಆರೋಪಿ ವಿರುದ್ದ 10 ಬಾಂಬ್ ಬೆದರಿಕೆ ಕೇಸ್ ಪೊಲೀಸರು ಪ್ರಾಥಮಿಕ ವಿಚಾರಣೆಗೊಳಪಡಿಸಿ ದಾಗ ಆರೋಪಿ ದೀಪಾಂಜನ್ ಮಿತ್ರಾ ಇದೇ ಮಾದರಿಯ 10 ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬೆಂಗಳೂರು ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಬಾಂಬ್ ಗಳನ್ನು ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಕಳುಹಿಸಿರುವ ಸಂಬಂಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿಯೂ ಈ ಆರೋಪಿಯ ಪಾತ್ರದ ಬಗ್ಗೆ ತನಿಖೆಯನ್ನು ಕೈಗೊಳ್ಳಬೇಕಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿ.ಕಾಂ. ವ್ಯಾಸಂಗ ಮಾಡಿರುವ ಈತನ ವಿರುದ್ಧ ಪ.ಬಂಗಾಳದ ವಿವಿಧೆಡೆ ಇದೇ ರೀತಿಯ 10 ಪ್ರಕರಣಗಳು ದಾಖಲಾಗಿವೆ