ಬೆಂಗಳೂರು: ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ ಆರೋಪದಡಿ ಯುವಕನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿ, ಬಳಿಕ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಕೌಶಿಕ್ ಕರಣ್ (22) ಎಂಬಾತ ಬಂಧನಕ್ಕೊಳಗಾಗಿ, ಬಿಡುಗಡೆಯಾದವ.
ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆರೋಪಿ, ಏ.28ರಂದು ರಾತ್ರಿ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ತುರ್ತು ಬಾಗಿಲು ತೆರೆಯಲು ಯತ್ನಿಸಿ ಸಹ ಪ್ರಯಾಣಿಕರ ಜೀವಕ್ಕೆ ಕುತ್ತು ತಂದಿದ್ದ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಈತನನ್ನು ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದರು ಎಂದು ಪೊಲೀಸರು ಹೇಳಿದರು.
ಏ.28ರಂದು ಆರೋಪಿ ಕರಣ್, ಕೋಲ್ಕತಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ. ರಾತ್ರಿ 8.15 ಗಂಟೆಗೆ ಕೋಲ್ಕತಾದಿಂದ ಹೊರಟಿದ್ದ ಇಂಡಿಗೊ ವಿಮಾನ, ರಾತ್ರಿ 10.30ಕ್ಕೆ ಬೆಂಗಳೂರು ನಿಲ್ದಾಣ ತಲುಪಬೇಕಿತ್ತು. ಪ್ರಯಾಣದ ಸಂದರ್ಭದಲ್ಲಿ ಆರೋಪಿ, ತುರ್ತು ಬಾಗಿಲು ಬಳಿಯೇ ಆಸನ ನೀಡುವಂತೆ ಸಿಬ್ಬಂದಿ ಕೋರಿದ್ದರಿಂದ ಅವಕಾಶ ನೀಡಲಾಗಿತ್ತು.
ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಆರೋಪಿ ತುರ್ತು ಬಾಗಿಲು ತೆರೆಯಲು ಮುಂದಾಗಿದ್ದ. ಅದನ್ನು ಗಮನಿಸಿದ್ದ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಆತನ ಯತ್ನ ವಿಫಲಗೊಳಿಸಿದ್ದಾ. ಬಳಿಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಆರೋಪಿಯನ್ನು ಒಪ್ಪಿಸಿದ್ದರು. ಅವರು ಠಾಣೆಗೆ ಕರೆ ತಂದಿದ್ದರು ಎಂದು ಪೊಲೀಸರು ಹೇಳಿದರು.