Advertisement

Bengaluru; 65 ಲಕ್ಷ ಸಾಲ ವಾಪಸ್‌ ಕೊಡದ ಸ್ನೇಹಿತನ ಇರಿದು ಹತ್ಯೆ

08:29 AM Jul 10, 2024 | Team Udayavani |

ಬೆಂಗಳೂರು: ಲಕ್ಷಾಂತರ ರೂ. ಸಾಲ ಪಡೆದು ವಾಪಸ್‌ ನೀಡದ ವಿಚಾರಕ್ಕೆ ಫೈನಾನ್ಸಿಯರ್‌ವೊಬ್ಬ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಶ್ರೀರಾಮಪುರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

Advertisement

ಶ್ರೀರಾಮಪುರದ ಸಾಯಿಬಾಬನಗರ ನಿವಾಸಿ ಕುಮಾರ್‌(38) ಕೊಲೆಯಾದವ. ಕೃತ್ಯ ಎಸಗಿದ ಆರೋಪಿ ದಯಾಳ್‌(46) ಎಂಬಾತನನ್ನು ಘಟನೆ ನಡೆದ ನಾಲ್ಕೈದು ಗಂಟೆಯಲ್ಲೇ ಬಂಧಿಸಲಾಗಿದೆ. ಮಂಗಳವಾರ ಮುಂಜಾನೆ 2.30ರ ಸುಮಾರಿಗೆ ಓಕಳೀಪುರದ ನ್ಯೂಕಾಳಪ್ಪ ಬ್ಲಾಕ್‌ನಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.

ಕೊಲೆಯಾದ ಕುಮಾರ್‌ ಮತ್ತು ಆರೋಪಿ ದಯಾಳ್‌ 15-18 ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ದಯಾಳ್‌ ಫೈನಾನ್ಸಿಯರ್‌ ಆಗಿದ್ದರೆ, ಕುಮಾರ್‌ ಮನೆ ಸಮೀಪದಲ್ಲೇ ಹೋಟೆಲ್‌ ಇಟ್ಟುಕೊಂಡಿದ್ದ. ಇಬ್ಬರು ಸಾಯಿಬಾಬನಗರದಲ್ಲೇ ಕುಟುಂಬ ಸಮೇತ ವಾಸವಾಗಿದ್ದರು.

ಆರೋಪಿ ಫೈನಾನ್ಸ್‌ ವ್ಯವಹಾರ ನಡೆಸುತ್ತಿದ್ದರಿಂದ, ಕುಮಾರ್‌, ಸ್ನೇಹಿತನಿಂದ ಕಳೆದ 10 ವರ್ಷದಲ್ಲಿ ಮನೆ ನಿರ್ಮಾಣ, ಹೋಟೆಲ್‌ ಅಭಿವೃದ್ಧಿ ಪಡಿಸಬೇಕೆಂದು 65 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾನೆ. ಆದರೆ,ಇದುವರೆಗೂ ವಾಪಸ್‌ ನೀಡಿಲ್ಲ.ಮತ್ತೂಂದೆಡೆ ಬೇರೆ ಬೇರೆ ಕಡೆಯಿಂದ ಲಕ್ಷಾಂತರ ರೂ. ಸಾಲ ಪಡೆದು ಕುಮಾರ್‌ಗೆ ಹಣ ನೀಡಿದ್ದರಿಂದ, ಆರೋಪಿ ಸಾಲದ ಹಣ ವಾಪಸ್‌ ನೀಡುವಂತೆ ಕುಮಾರ್‌ಗೆ ಒತ್ತಾಯಿಸುತ್ತಿದ್ದ. ಇತ್ತಕುಮಾರ್‌, ಸದ್ಯ ಹಣ ವಾಪಸ್‌ ಕೊಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದ ಎಂಬುದು
ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಕೊಲೆಗೆ ಚಾಕು ಖರೀದಿಸಿದ ಫೈನಾನ್ಸಿಯರ್‌!
ಮತ್ತೂಂದೆಡೆ ಆರೋಪಿ ದಯಾಳ್‌ಗೆ ಸಾಲ ಕೊಟ್ಟವರು ಹಣ ವಾಪಸ್‌ಗೆ ಪೀಡಿಸುತ್ತಿದ್ದರು. ಅದರಿಂದ ಕೋಪಗೊಂಡಿದ್ದ ಆರೋಪಿ, ಕುಮಾರ್‌ ಗೆ ಸಾಲಗಾರರ ಒತ್ತಡ ಹೆಚ್ಚಾಗಿದ್ದು, ಹಣ ವಾಪಸ್‌ ಕೊಡಲಿಲ್ಲವೆಂದರೆ, ಇಬ್ಬರಲ್ಲಿ ಒಬ್ಬರು ಸಾಯಬೇಕು, ಇಲ್ಲವೇ ಇಬ್ಬರು ಸಾಯಬೇಕಾದ ಪರಿಸ್ಥಿತಿ ಇದೆ ಎಂದು ವಿವರಿಸಿದ್ದ. ಆಗಲೂ
ಕುಮಾರ್‌, ನಿರ್ಲಕ್ಷ್ಯ ತೋರಿದ್ದ. ಅದರಿಂದ ಇನ್ನಷ್ಟು ಆಕ್ರೋಶಗೊಂಡ ಆರೋಪಿ, ಕುಮಾರ್‌ ಹತ್ಯೆಗೈಯಲು ನಿರ್ಧರಿಸಿ, ಸೋಮವಾರ ಮಧ್ಯಾಹ್ನವೇ ತರಕಾರಿ ಕತ್ತರಿಸುವ ಚಾಕು ಖರೀದಿಸಿದ್ದಾನೆ. ರಾತ್ರಿ 8 ಗಂಟೆ ಸುಮಾರಿಗೆ
ಮನೆಯಲ್ಲಿದ್ದ ಕುಮಾರ್‌ನನ್ನು ಜತೆಗೆ ಕರೆದೊಯ್ದು ರಾಜಾಜಿನಗರದ ರಾಮಮಂದಿರದ ಸಮೀಪದ ಬಾರ್‌ನಲ್ಲಿ ತಡರಾತ್ರಿವರೆಗೂ ಮದ್ಯ ಸೇವಿಸಿದ್ದಾರೆ. ಬಳಿಕ ಮುಂಜಾನೆ 2.30ರ ಸುಮಾರಿಗೆ ಓಕಳೀಪುರದ ನ್ಯೂಕಾಳಪ್ಪ ಬ್ಲಾಕ್‌ನಲ್ಲಿ ಬರುವಾಗ, ಆರೋಪಿ ಮತ್ತು ಕುಮಾರ್‌ ನಡುವೆ ಸಾಲದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ.
ಅದು ವಿಕೋಪಕ್ಕೆ ಹೋದಾಗ, ತನ್ನ ಬಳಿಯಿದ್ದ ಚಾಕುವಿನಿಂದ ಕುಮಾರ್‌ನ ಕುತ್ತಿಗೆ, ಬೆನ್ನು ಹೊಟ್ಟೆ ಸೇರಿ ದೇಹದ ಆರೇಳು ಕಡೆ ಹತ್ತಾರು ಬಾರಿ  ಇರಿದು ಕೊಲೆಗೈದು ಪರಾರಿಯಾಗಿದ್ದ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಹೋಗಿ, ಮೃತದೇಹ ಗುರುತಿಸಿ, ಕ್ಷೀಪ್ರ ಕಾರ್ಯಾಚರಣೆ
ನಡೆಸಿ ಘಟನೆ ನಡೆದ ನಾಲ್ಕೈದು ಗಂಟೆಯಲ್ಲೇ ಆರೋಪಿಯನ್ನು ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಶ್ರೀರಾಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next