ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣಾ ವ್ಯಾಪ್ತಿಯ ಇಲಿಯಾಸ್ ನಗರದ ಬಳಿ ಮರಕ್ಕೆ ದ್ವಿಚಕ್ರವಾಹನ ಡಿಕ್ಕಿ ಹೊಡೆದು ದಯಾನಂದ್ ಸಾಗರ್ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿಗಳಿಬ್ಬರು ದುರ್ಮರಣ ಹೊಂದಿದ್ದಾರೆ.
ಮನೋಜ್ (17), ರಿತ್ವಿಕ್ (17) ಮೃತಪಟ್ಟವರು.
ಇಬ್ಬರೂ ದಯಾನಂದ್ ಸಾಗರ ಕಾಲೇಜಿನಿಂದ ದ್ವಿಚಕ್ರವಾಹನದಲ್ಲಿ ಶುಕ್ರವಾರ ಮಧ್ಯಾಹ್ನ ಬನ್ನೇರುಘಟ್ಟದ ಮಾಲ್‌ವೊಂದಕ್ಕೆ ತೆರಳುತ್ತಿದ್ದರು. ಮನೋಜ್ ದ್ವಿಚಕ್ರವಾಹನ ಚಲಾಯಿಸುತ್ತಿದ್ದರೆ, ರಿತ್ವಿಕ್ ಹಿಂಬದಿ ಕುಳಿತಿದ್ದ. ಮಾರ್ಗಮಧ್ಯೆ ಇಲಿಯಾಸ್ ನಗರದ ಬಳಿ ದ್ವಿಚಕ್ರವಾಹನವು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಇದಾದ ಕೆಲ ಹೊತ್ತಿನಲ್ಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಕೆ.ಎಸ್.ಲೇಔಟ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅತೀ ವೇಗ ಚಾಲನೆಯೇ ಅಪಘಾತಕ್ಕೆ ಕಾರಣ: ಬೈಕ್ ಚಲಾಯಿಸುತ್ತಿದ್ದ ಮನೋಜ್ ಹೆಲ್ಮೆಟ್ ಧರಿಸಿದ್ದರೆ, ಹಿಂಬದಿ ಸವಾರ ರಿತ್ವಿಕ್ ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ. ಅತೀ ವೇಗವಾಗಿ ದ್ವಿಚಕ್ರವಾಹನ ಚಲಾಯಿಸಿರುವುದೇ ದುರ್ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ವೇಗವಾಗಿ ಬೈಕ್ ಚಲಾಯಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಮನೋಜ್ ತಂದೆ ಬಿಎಂಟಿಸಿ ಕಂಡಕ್ಟರ್ ಆಗಿದ್ದರೆ, ಇನ್ಫರ್ಮೇಶನ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದ ರಿತ್ವಿಕ್ ತಂದೆ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ.