ಬೆಂಗಳೂರು: ಕೊರೋನಾ ಲಾಕ್‌ಡೌನ್ ಬಳಿಕ ರಾಜ್ಯದ ಪ್ರವಾಸೋದ್ಯಮ ಉತ್ತಮ ಚೇತರಿಕೆ ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರವಾಸೋದ್ಯಮ ಸಚಿವರೂ ಆದ ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ‘ಸ್ಪಿಯರ್ ಟ್ರಾವೆಲ್ ಮೀಡಿಯಾ ಮತ್ತು ಎಕ್ಸಿಬಿಷನ್’ ಎಂಬ ಖಾಸಗಿ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಎರಡು ದಿನದ “ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿರುವುದರಿಂದ ಆರ್ಥಿಕ ಪ್ರಗತಿಗೆ ಕಾರಣವಾಗಲಿದೆ. ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಇನ್ನಷ್ಟು ಯೋಜನೆ ರೂಪಿಸಲಾಗುತ್ತಿದೆ. ಪ್ರವಾಸಿಗರ ಹೆಚ್ಚಳದ ನಡುವೆಯೂ ಪ್ರವಾಸಿ ತಾಣಗಳಲ್ಲಿ ಕೊರೋನಾ ನಿಯಮ ಪಾಲನೆ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ:ಜನತಾ ಬಜಾರ್ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೃಷಿ ವಿಭಾಗದ ಕಟ್ಟಡ ನಿರ್ಮಾಣ
ದೇಶದ 15 ರಾಜ್ಯಗಳ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ‘ಇಂಡಿಯಾ ನ್ಯಾಷನಲ್ ಟ್ರಾವೆಲ್ ಮಾರ್ಟ್’ ಯಾತ್ರೆ, ಸಾಹಸ, ಸಂಸ್ಕೃತಿ, ಪರಂಪರೆ, ಬೀಚ್, ಗಿರಿಧಾಮಗಳು ಸೇರಿದಂತೆ ಹತ್ತಾರು ವಿಭಿನ್ನ ತಾಣಗಳನ್ನು ಪರಿಚಯಿಸಲಿದೆ. ಪ್ರದರ್ಶನದಲ್ಲಿ ದೇಶದ ಹಲವು ಭಾಗದಿಂದ ಪ್ರವಾಸೋದ್ಯಮ ಮತ್ತು ಆತಿಥ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಇದು ಪ್ರವಾಸೋದ್ಯಮ ವಹಿವಾಟಿಗೆ ಸಂಬಂಧಿಸಿದ ಅತಿದೊಡ್ಡ ಸಭೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್‌ಪಾಂಡೆ, ಇಲಾಖೆ ನಿರ್ದೇಶಕಿ ಸಿಂಧು ಬಿ.ರೂಪೇಶ್ ಹಾಗೂ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹಾಗೂ ಇನ್ನಿತರರಿದ್ದರು.