Advertisement

ಸಿಲಿಕಾನ್‌ ಸಿಟಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ

12:49 PM Dec 26, 2022 | Team Udayavani |

ಅನಗತ್ಯ ವಿಷಯಗಳಿಗೆ ಕಿರಿಕಿರಿ ಅನುಭವಿಸಿದರೆ, ಪೋಷಕರು ಬೈದರೆ, ಸ್ನೇಹಿತರು ಗೇಲಿ ಮಾಡಿ ಹಿಯಾಳಿಸಿದರೆ, ಪರೀಕ್ಷೆಯಲ್ಲಿ ಫೇಲಾದರೆ, ಪ್ರೀತಿ ವಿಫ‌ಲವಾದರೆ, ಕೆಲಸದಲ್ಲಿ ಒತ್ತಡ ಹೆಚ್ಚಾದರೆ, ಸಾಮಾನ್ಯ ಅನಾರೋಗ್ಯಕ್ಕೆ ತುತ್ತಾದರೆ ಹೀಗೆ ಅನೇಕ ಕ್ಷುಲ್ಲಕ ಕಾರಣಗಳಿಗಾಗಿ ರಾಜ್ಯರಾಜಧಾನಿಯಲ್ಲಿ ಅನೇಕ ಮಂದಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ವಿದ್ಯಾವಂತರಲ್ಲಿಯೇ ಇಂತಹ ಪ್ರಕರಣಗಳು ಹೆಚ್ಚಿವೆ. ವರ್ಷದಿಂದ ವರ್ಷಕ್ಕೆ ಈ ರೀತಿಯ ಪ್ರಕರಣಗಳು ಮತ್ತಷ್ಟು ಹೆಚ್ಚುತ್ತಿವೆ. ಇದರ ಪರಿಹಾರೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದು ರೌಂಡಪ್‌ ಈ ವಾರದ ಸುದ್ದಿಸುತ್ತಾಟದಲ್ಲಿ.

Advertisement

ಬೆಂಗಳೂರು: ಹೆತ್ತವರು ಬೈದರೆ, ಮನೆಯಲ್ಲಿ ಶಾಪಿಂಗ್‌ ಕರೆದುಕೊಂಡು ಹೋಗಿಲ್ಲವೆಂದು, ಪರೀಕ್ಷೆಯಲ್ಲಿ ಕಾಪಿ ಹೊಡೆದು ಸಿಕ್ಕಿಬೀಳುವುದು, ಆರೋಗ್ಯ ಸಮಸ್ಯೆ, ಸ್ನೇಹಿತರೊಂದಿಗಿನ ವೈಮನಸ್ಸು, ಪ್ರೀತಿಯ ವೈಫ‌ಲ್ಯ, ಪರೀಕ್ಷೆ ಫ‌ಲಿತಾಂಶದ ಒತ್ತಡ, ಕೆಲಸದ ಒತ್ತಡ, ಮಾನಸಿಕ ಹಿಂಸೆ ಹಾಗೂ ಮೊಬೈಲ್‌ ಗೀಳು ಸೇರಿದಂತೆ ಅನೇಕ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳೂ ಕೂಡಾ ಇಂತಹುದೇ ಅತಿರೇಕದ ಕ್ರಮಕ್ಕೆ ಮುಂದಾಗುತ್ತಿರುವುದು ಆತಂಕಕಾರಿಯಾಗಿದೆ. ಸಾಫ್ಟ್ವೇರ್‌ ಎಂಜಿನಿಯರ್‌ ಟೆಕ್ಕಿಯೊಬ್ಬ ಹೃದಯ ಸಂಬಂಧಿ ಕಾಯಿಲೆಯಿಂದ ಬೇಸತ್ತು, ಕಾರಿನೊಳಗೆ ನೈಟ್ರೋಜನ್‌ ಅನಿಲವನ್ನು ಲೀಕ್‌ ಮಾಡಿಕೊಂಡು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್‌ನ ಕುರುಬರಹಳ್ಳಿಯಲ್ಲಿ ನಡೆದಿದೆ.

ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ 6,383 ಆಗಿದ್ದು, ಇದರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು. 4,544 ಪುರುಷರು ಆತ್ಮಹತ್ಯೆಗೆ ಶರಣಾಗಿದ್ದರೆ, ಇದೇ ಅವಧಿಯಲ್ಲಿ 1839 ಜನ ಮಹಿಳೆಯರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ ನೇಣಿಗೆ ಶರಣಾಗಿರುವ ಪ್ರಕರಣಗಳೇ ಅಧಿಕ. 2022ರ ಅಕ್ಟೋಬರ್‌ವರೆಗೆ ನೇಣು ಬಿಗಿದುಕೊಂಡು 1,708, ವಿಷ ಸೇವಿಸಿ 145, ಬೆಂಕಿ ಹಚ್ಚಿಕೊಂಡು 25, ನೀರಿನಲ್ಲಿ ಮುಳುಗಿ 22 ಮಂದಿ ಮೃತರಾಗಿದ್ದಾರೆ.

ಪ್ರಕರಣ- 1: ಪೋಷಕರು ಬೈದಿದ್ದಕ್ಕೆ ನೇಣಿಗೆ ಶರಣು:

ಹೆಬ್ಬಾಳದಲ್ಲಿ ವಾಸಿಸುವ ಕುಟುಂಬವೊಂದರಲ್ಲಿ ಹೆತ್ತವರು ಬೈದರೆಂಬ ಕಾರಣಕ್ಕೆ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಏಳನೇ ತರಗತಿ ಓದುತ್ತಿದ್ದ ಇವನು, ಮನೆಯಲ್ಲಿ ಹೋಮ್‌ವರ್ಕ್‌ ಒಳಗೊಂಡಂತೆ, ಮನೆಯಲ್ಲಿ ಹೇಳಿದ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ. ಆದ್ದರಿಂದ ತಂದೆ-ತಾಯಿ, ಹೀಗೆ ಮಾಡಬಾರದು. ಓದುವುದರ ಜತೆಗೆ ಮನೆಯಲ್ಲಿ ಹೇಳಿದ ಕೆಲಸವನ್ನು ಮಾಡಬೇಕು ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಕ್ಕೆ ಕೋಪಿಸಿಕೊಂಡ ಬಾಲಕ, ಮನೆಯ ಟೆರಸ್‌ಗೆ ಹೋಗಿ, ಕೊರಳಿಗೆ ಹಗ್ಗವನ್ನು ಬಿಗಿದುಕೊಂಡು, ನೇಣಿಗೆ ಶರಣಾಗಿದ್ದಾನೆ .

Advertisement

ಪ್ರಕರಣ-2:  ಕಬಾಬ್‌ ಚೆನ್ನಾಗಿಲ್ಲವೆಂದು ಆತ್ಮಹತ್ಯೆ: ಪತ್ನಿ ಮಾಡಿದ ಕಬಾಬ್‌ ಟೇಸ್ಟ್‌ ಇಲ್ಲವೆಂದು ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬನ್ನೇರಘಟ್ಟದಲ್ಲಿ ನಡೆದಿದೆ. 42 ವರ್ಷದ ವ್ಯಕ್ತಿಯೊಬ್ಬ ಗಾರ್ಮೆಂಟ್‌ ಕೆಲಸ ಮುಗಿಸಿಕೊಂಡು ಮನೆಗೆ ಬಂದು, ತನ್ನ ಹೆಂಡತಿಗೆ ಕಬಾಬ್‌ ತಿನ್ನುವ ಆಸೆಯಾಗಿದೆ ಮಾಡಿಕೊಡು ಎಂದು ಹೇಳಿದಕ್ಕೆ, ಅವಳು ತನಗೆ ಬಂದ ರೀತಿಯಲ್ಲಿ ಕಬಾಬ್‌ ಮಾಡಿಕೊಟ್ಟಿದ್ದಾಳೆ. ಅದನ್ನು ತಿಂದ ಪತಿರಾಯ ಕಬಾಬ್‌ ಟೇಸ್ಟೇ ಇಲ್ಲ ಅಂತಾ ಹೆಂಡತಿಗೆ ರೋಲ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ಅಸ್ವಸ್ಥಗೊಂಡ ಹೆಂಡತಿ ಆಸ್ಪತ್ರೆಯಲ್ಲಿ ದಾಖಲಾಗಿ, ತದನಂತರ ಗಂಡನ ಹಲ್ಲೆ ಪ್ರಕರಣ ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಅವನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಅವನು ಮರಕ್ಕೆ ನೇಣು ಬಿಗಿದುಕೊಂಡು ತನ್ನ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಕರಣ-3: ಮಹಡಿಯಿಂದ ಜಿಗಿದ ವಿದ್ಯಾರ್ಥಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ನಕಲು ಮಾಡುತ್ತಿದ್ದುದ್ದನ್ನು ಶಿಕ್ಷಕರೊಬ್ಬರು ಗಮನಿಸಿ, ಕೊಠಡಿಯಿಂದ ಆಚೆ ನಿಲ್ಲಿಸಿದ ಕಾರಣ, ವಿದ್ಯಾರ್ಥಿ ಯಾರ ಗಮನಕ್ಕೂ ತರದೆ ಮನೆಗೆ ತೆರಳಿದ. ತದನಂತರ ನಗರದ ನೂರ್‌ ನಗರ ಲೇಔಟ್‌ ನಲ್ಲಿ ವಾಸವಾಗಿದ್ದ ಆ ವಿದ್ಯಾರ್ಥಿ ಎಲ್ಲರ ಮುಂದೆ ಅವಮಾನವಾಯಿತೆಂದು ಮನನೊಂದು, ಸಮೀಪದಲ್ಲಿದ್ದ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಿಂದ ಕೆಳಗೆ ಜಿಗಿದು ಸಾವನ್ನಪ್ಪಿದ್ದಾನೆ.

ಪ್ರಕರಣ-4: ಶಾಪಿಂಗ್‌ ಕರೆದುಕೊಂಡು ಹೋಗಲಿಲ್ಲವೆಂದು 5ಬಾಲಕಿ ಆತ್ಮಹತ್ಯೆ : ನಗರದ ಚಾಮರಾಜಪೇಟೆಯಲ್ಲಿ ವಾಸವಾಗಿರುವ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಒಡಹುಟ್ಟಿ ನವರು ಶಾಪಿಂಗ್‌ ಕರೆದುಕೊಂಡು ಹೋಗಲಿಲ್ಲವೆಂದು,ಹೆತ್ತವರೊಂದಿಗೆ ಅಸಮಾಧಾನ ವ್ಯಕ್ತಪಡಿಸಿ, ಮನೆಯಲ್ಲಿನ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.

ಪ್ರಕರಣ-5:  ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಇರಿದುಕೊಂಡ: ದಿನದ ಮೂರೊತ್ತು ಟಿವಿ ನೋಡುವುದರಲ್ಲೇ ನಿರತನಾಗಿದ್ದ ಮಗನಿಗೆ ತನ್ನ ತಂದೆ ಬುದ್ಧಿ ಹೇಳಿದ್ದಕ್ಕೆ 23 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜೆ.ಜೆ. ನಗರದಲ್ಲಿ ನಡೆದಿದೆ. ದುಡಿಯುವ ವಯಸ್ಸಿನಲ್ಲಿ ಯಾವಾಗಲೂ ಮನೆಯಲ್ಲಿಯೇ ಕುಳಿತು ಟಿವಿ ನೋಡಿದರೆ ಜೀವನ ನಡೆಸುವುದು ಹೇಗೆ? ದುಡಿಯಲು ಹೋಗು ಎಂದು ಪೋಷಕರು ಬುದ್ಧಿವಾದ ಹೇಳಿದ್ದಾರೆ. ಕೈಯಲ್ಲಿದ್ದ ರಿಮೋಟ್‌ ಬಿಸಾಡಿ, ತಂದೆಯೊಂದಿಗೆ ಜಗಳವಾಡುತ್ತಾ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ತನಗೆತಾನೇ ಇರುದುಕೊಂಡನು. ಪೋಷಕರು ಮಗನನ್ನು ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ರಕ್ತಸ್ರಾವದಿಂದ ಯುವಕ ಕೊನೆಯುಸಿರೆಳೆದಿದ್ದಾನೆ.

ಪ್ರಕರಣ-6 ಹೀಯಾಳಿಸಿದ ಶಿಕ್ಷಕಿ: ವಿದ್ಯಾರ್ಥಿನಿ ಆತ್ಮಹತ್ಯೆ: ಪರೀಕ್ಷೆ ಬರೆಯುವಾಗ ಚೀಟಿ ಕಾಪಿ ಸಮೇತ ವಿದ್ಯಾರ್ಥಿನಿಯೊಬ್ಬಳು ಸಿಕ್ಕಿಬಿದ್ದಳು. ಈ ಘಟನೆ ನಡೆದು ನಾಲ್ಕೈದು ದಿನಗಳು ಕಳೆದರೂ ತರಗತಿಯಲ್ಲಿ ವಿದ್ಯಾರ್ಥಿನಿಯನ್ನು ಶಾಲಾ ಶಿಕ್ಷಕಿ ಪದೇ ಪದೆ ನಿಂದಿಸುತ್ತಿದ್ದ ಕಾರಣ ಮನನೊಂದ ಆ ವಿದ್ಯಾರ್ಥಿನಿ ಡೆತ್‌ನೋಟ್‌ ಅನ್ನು ಬರೆದಿಟ್ಟು, ನಗರದ ಬಾಣಸವಾಡಿಯ ಪಿಳ್ಳಾರೆಡ್ಡಿ ನಗರದಲ್ಲಿರುವ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ.

2022ಆತ್ಮಹತ್ಯೆ ಪ್ರಕರಣಗಳು(ಅ.ವರೆಗೆ):

ನೇಣಿಗೆ ಶರಣಾದವರು:  1,708

ವಿಷ ಸೇವನೆ : 145

ಬೆಂಕಿ ಅನಾಹುತ : 25

ನೀರಿನಲ್ಲಿ ಮುಳುಗಿ : 22

ಶಸ್ತ್ರಾಸ್ತ್ರಗಳ ಬಳಕೆ : 2

ಇತರೆ: 57

ನೊಂದವರಿಗೆ ಭರವಸೆ ನೀಡಿ: ಶಾಲೆ ಅಥವಾ ಮನೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮೇಲೆ ಯಾವುದೇ ರೀತಿಯ ಮಾರ್ಕ್ಸ್, ರ್‍ಯಾಂಕಿಂಗ್‌, ಕಾಂಪಿಟೇಷನ್‌ ಎಂದು ಒತ್ತಡವನ್ನು ಹಾಕದೆ, ಓದುವುದರ ಜತೆಗೆ ಮಕ್ಕಳ ಅಭಿರುಚಿಯ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು. ಸಾಮಾನ್ಯವಾಗಿ ಮಕ್ಕಳು ಕೋಪಿಸಿಕೊಳ್ಳುವುದು ಸಹಜ. ಆದ್ದರಿಂದ ಹೊಡೆಯುವುದು, ಬೈಯುವುದಕ್ಕಿಂತ ಅರ್ಥಮಾಡಿ ಕೊಳ್ಳುವಂತೆ ಹೇಳಿ ಸರಿದಾರಿಗೆ ತರಬೇಕು. ಜತೆಗೆ ಸಹಾಯವಾಣಿಗಳನ್ನು ಹೆಚ್ಚಾಗಿ ಬಳಸಬೇಕು. ಹಾಗೆಯೇ, ಸಾಮಾನ್ಯವಾಗಿ ಆತ್ಮಹತ್ಯೆಗೆ ಶರಣಾಗುವವರು ಹತಾಶರಾಗಿ ಅಥವಾ ಅಸಹಾಯಕತನದಿಂದ ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಅಂತಹವರಿಗೆ ಸುತ್ತಮುತ್ತಲಿನವರ ಭರವಸೆ ಅತ್ಯಗತ್ಯ. ಜತೆಗೆ ಮಾನಸಿಕವಾಗಿ ನೋಂದಿರುವವರಿಗೆ ಚುಚ್ಚಿ ಮಾತನಾಡುವುದು, ಕೀಳರಿಮೆಯಿಂದ ಕಾಣುವುದು ಮಾಡಬಾರದು ಎಂದು ನಿಮ್ಹಾನ್ಸ್‌ ಹೆಚ್ಚುವರಿ ಉಪನ್ಯಾಸಕ ಪ್ರೊ.ಡಾ. ರೂಪೇಶ್‌ ತಿಳಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಬಹುತೇಕರು ಮಾನಸಿಕ ಖಿನ್ನತೆ, ವೈಯಕ್ತಿಕ ಸಮಸ್ಯೆ, ಅಡಿಕ್ಷನ್‌ (ಹ್ಯಾಲೋಜಿನೇಷನ್‌) ಹೀಗೆ ನಾನಾ ರೀತಿಯ ಕಾರಣಗಳಿಂದ ಆತ್ಯಹತ್ಯೆಗೆ ಶರಣಾಗುತ್ತಾರೆ. ಆಪ್ತಸಮಾಲೋಚನೆ ವೇಳೆ ಬಹುತೇಕರು 15ರಿಂದ 18 ವಯೋಮಿತಿಯುಳ್ಳವರಾಗಿದ್ದು, ಸಾಮಾಜಿಕ ಜಾಲತಾಣಗಳಿಂದಾಗುವ ವಂಚನೆಯಿಂದಲೂ ಮನನೊಂದು ಆತ್ಮಹತ್ಯೆ ನಿರ್ಧಾರಕ್ಕೆ ಬರುತ್ತಾರೆ. ಹೀಗಾಗಿ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಅಗತ್ಯ ಡಾ.ಶ್ರದ್ಧಾ ಶೇಜೆಕರ್‌, ಮನೋವೈದ್ಯೆ

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next