ನವದೆಹಲಿ: ತಾಯಿಯೊಬ್ಬಳು ತಾನು ಜನ್ಮನೀಡಿದ ಮಗನ ತಲೆಯನ್ನು, ಬೀಸುವ ಕಲ್ಲಿನಿಂದ ಜಜ್ಜಿ ಅದಕ್ಕೆ ಮಸಾಲೆ ಹಾಗೂ ಕರ್ಪೂರ ಬೆರೆಸಿ ಬೇಯಿಸಿದ ಕ್ರೂರ ಘಟನೆ ಪಶ್ಚಿಮ ಬಂಗಾಳ ನಡೆದಿದೆ ಎಂದು ವರದಿಯಾಗಿದೆ.
ಆರೋಪಿಯನ್ನು ಗೀತಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಹಿರಿಯ ಮಗ ಅರ್ಜುನ್ (25) ನನ್ನು ಭೀಕರವಾಗಿ ಹತ್ಯೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಇದನ್ನೂ ಓದಿ:ಸಾರಸ್ವತ ಲೋಕದ ಅಗಾಧ ಪ್ರತಿಭೆ ಡಾ. ಬನ್ನಂಜೆ ಗೋವಿಂದಾಚಾರ್ಯ: ಸುರೇಶ್ ಕುಮಾರ್ ಸಂತಾಪ
ಆರೋಪಿಗೆ ಎರಡು ಜನ ಗಂಡು ಮಕ್ಕಳಿದ್ದು, ಹಿರಿಯ ಮಗ ಅರ್ಜುನ್ ಎಂಬಾತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. 2019ರಲ್ಲಿ ಗೀತಾ ಮತ್ತು ಪತಿ ಅನಿಲ್ ನಡುವೆ ಸಾಂಸಾರಿಕ ಕಲಹ ಏರ್ಪಟ್ಟು, ಅನಿಲ್ ಆಕೆಯನ್ನು ಬಿಟ್ಟು ತೆರಳಿದ್ದ. ಆದರೆ ಕೆಲವು ದಿನಗಳಿಂದ ತನ್ನ ಮಗನನ್ನು ಕಾಣದೆ ಹೋದಾಗ ಪತ್ನಿಯ ಮೇಲೆ ಅನುಮಾನಗೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಈತನ ದೂರಿನನ್ವಯ ಪೊಲೀಸರು ಗೀತಾಳ ಮನೆಗೆ ಬಂದು ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣವೇ ಗೀತಾ ಮತ್ತು ಆಕೆಯ ಕಿರಿಯ ಮಗ ವಿಧುರನನ್ನು ಬಂಧಿಸಿದ್ದಾರೆ.
ವಿಚಾರಣೆಯ ವೇಳೆ, ತಾನು ತಂತ್ರ -ಮಂತ್ರಗಳಲ್ಲಿ ನಂಬಿಕೆ ಉಳ್ಳವಳಾಗಿದ್ದು, ಅದರ ಪೂಜೆಗಾಗಿ ಮಗನನ್ನು ಬಲಿಕೊಟ್ಟಿದ್ದೇನೆ. ಆದರೆ ಮೃತದೇಹದ ದುರ್ವಾಸನೆ ಬರಬಾರದು ಎಂದು ಆತನ ತಲೆಯನ್ನು ಜಜ್ಜಿ, ಮಸಾಲೆ ಹಾಕಿ ಬೇಯಿಸಿದೆ ಎಂದು ಒಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ಮೇಲೆ ಐಪಿಸಿ ಸೆಕ್ಷನ್ 302, 364, 120B, ಹಾಗೂ 34 ಅನ್ವಯ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.