Advertisement

ಪಾಟ್ನಾಗೆ ಬೆಂಗಾಲ್‌ ಸವಾಲು

10:02 AM Oct 26, 2017 | Team Udayavani |

ಚೆನ್ನೈ: ಪ್ರೊ ಕಬಡ್ಡಿ ಲೀಗ್‌ ಐದರ ಋತು ಮುಗಿಯಲು ಇನ್ನು ಕೇವಲ ಎರಡು ಪಂದ್ಯಗಳು ಬಾಕಿ ಉಳಿದಿವೆ. ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ಈಗಾಗಲೇ ಶನಿವಾರ ನಡೆಯುವ ಫೈನಲ್‌ ಹೋರಾಟಕ್ಕೆ ತೇರ್ಗಡೆಯಾಗಿದೆ. ಪ್ರಶಸ್ತಿ ಸೆಣಸಾಟಕ್ಕೆ ತೇರ್ಗಡೆಯಾಗುವ ಇನ್ನೊಂದು ತಂಡ ಯಾವುದೆಂದು ಗುರುವಾರ ನಿರ್ಧಾರವಾಗಲಿದೆ. 

Advertisement

ಗುರುವಾರ ನಡೆಯುವ ಮಹತ್ವದ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ತಂಡವು ಬೆಂಗಾಲ್‌ ವಾರಿಯರ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ವಿಜೇತ ತಂಡ ಫೈನಲಿಗೇರಲಿದೆ. ಈ ಎರಡೂ ತಂಡಗಳ ಬಲಾಬಲವನ್ನು ಗಮನಿಸಿದರೆ ಹಾಲಿ ಚಾಂಪಿಯನ್‌ ಆಗಿರುವ ಪಾಟ್ನಾ ಪೈರೇಟ್ಸ್‌ ಗೆಲ್ಲುವ ಫೇವರಿಟ್‌ ತಂಡವಾಗಿದೆ. 

ಪ್ರದೀಪ್‌ ನರ್ವಾಲ್‌ ಸಾಹಸ
ಸೂಪರ್‌ ಪ್ಲೇ ಆಫ್ನ ಎರಡನೇ ಮತ್ತು ಮೂರನೇ ಎಲಿಮಿನೇಟರ್‌ ಪಂದ್ಯದಲ್ಲಿ ಆಡಿದ ಪಾಟ್ನಾ ಪೈರೇಟ್ಸ್‌ ಅಮೋಘ ಆಟದ ಪ್ರದರ್ಶನ ನೀಡಿ ಪಂದ್ಯದಲ್ಲಿ ಪ್ರಾಬಲ್ಯ ಸ್ಥಾಪಿಸಿತ್ತು. ಪ್ರದೀಪ್‌ ನರ್ವಾಲ್‌ ಅವರ ಸೂಪರ್‌ ರೈಡಿಂಗ್‌ನಿಂದಾಗಿ ಪಾಟ್ನಾ ಜಯಭೇರಿ ಬಾರಿಸಿತ್ತು. ಹರಿಯಾಣ ಸ್ಟೀಲರ್ ವಿರುದ್ಧ ಪ್ರದೀಪ್‌ ಪ್ರೊ ಕಬಡ್ಡಿ ಲೀಗ್‌ನಲ್ಲಿಯೇ ದಾಖಲೆಯ ರೈಡಿಂಗ್‌ ಅಂಕ ಕಲೆ ಹಾಕಿದ್ದರಿಂದ ಪಾಟ್ನಾ 69-30 ಅಂಕಗಳಿಂದ ಜಯ ಸಾಧಿಸಿತ್ತು. ಮಂಗಳವಾರ ನಡೆದ ಮೂರನೇ ಎಲಿಮಿನೇಟರ್‌ ಪಂದ್ಯದಲ್ಲಿ ಮತ್ತೆ 19 ಅಂಕ ಪಡೆದ ಪ್ರದೀಪ್‌ ಅವರನ್ನೊಳಗೊಂಡ ಪಾಟ್ನಾ ತಂಡ ಪುನೇರಿ ಪಲ್ಟಾನ್ಸ್‌ ತಂಡವನ್ನು 42-32 ಅಂಕಗಳಿಂದ ಉರುಳಿಸಿ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಪಡೆಯಿತು. ಪ್ರದೀಪ್‌ ಒಟ್ಟಾರೆ ಪ್ರೊ ಕಬಡ್ಡಿಯಲ್ಲಿ ದಾಖಲೆ 327 ರೈಡಿಂಗ್‌ ಅಂಕ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

“ಬಿ’ ವಲಯದಲ್ಲಿ ಅಗ್ರಸ್ಥಾನ ಪಡೆದಿದ್ದ ಬೆಂಗಾಲ್‌ ವಾರಿಯರ್ ತಂಡ ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ನೀರಸವಾಗಿ ಆಡಿ 42-17 ಅಂಕಗಳಿಂದ ಶರಣಾಗಿತ್ತು. ರೈಡಿಂಗ್‌ ಮತ್ತು ರಕ್ಷಣೆಯಲ್ಲಿ ಅಮೋಘವಾಗಿ ಆಡಿದ ಗುಜರಾತ್‌ ತಂಡ ಎದುರಾಳಿ ಬೆಂಗಾಲ್‌ಗೆ ಯಾವುದೇ ಹಂತದಲ್ಲೂ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಈ ಪಂದ್ಯದಲ್ಲಿ ಬೆಂಗಾಲ್‌ ತಂಡದ ನಿರ್ವಹಣೆಯನ್ನು ಗಮನಿಸಿದರೆ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಪಾಟ್ನಾ ವಿರುದ್ಧ ಬೆಂಗಾಲ್‌ ಗೆಲ್ಲುವುದು ಅನುಮಾನವೆಂದು ಹೇಳಬಹುದು. 

ಹಾಲಿ ಚಾಂಪಿಯನ್‌ ಪಾಟ್ನಾ ತಂಡವು ಬೆಂಗಾಲ್‌ ವಿರುದ್ಧವೂ ಜಯಭೇರಿ ಬಾರಿಸಿದರೆ ಶನಿವಾರ ನಡೆಯುವ ಪ್ರಶಸ್ತಿ ಸುತ್ತಿನಲ್ಲಿ ಗುಜರಾತ್‌ ತಂಡವನ್ನು ಎದುರಿಸಲಿದೆ. ಒಂದು ವೇಳೆ ಎರಡನೇ ಕ್ವಾಲಿಫೈಯರ್‌ನಲ್ಲಿ ಬೆಂಗಾಲ್‌ ಗೆದ್ದರೆ ಪ್ರಶಸ್ತಿ ಸುತ್ತಿನಲ್ಲಿ ಗುಜರಾತ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಬೆಂಗಾಲ್‌ಗೆ ಸಿಗಲಿದೆ.

Advertisement

ಟ್ರೋಫಿ ಗೆಲ್ಲುವತ್ತ ಗಮನ
ನಾವು ಬಹಳ ಎಚ್ಚರಿಕೆಯಿಂದ ಆಡಿದ್ದೇವೆ ಮತ್ತು ಇನ್ನು ಟ್ರೋಫಿ ಗೆಲ್ಲುವತ್ತ ನಮ್ಮ ಗಮನ ಎಂದು ತಿಳಿಸಿದ ಗುಜರಾತ್‌ ಕೋಚ್‌ ಮನ್‌ಪ್ರೀತ್‌ ಸಿಂಗ್‌ ಅವರು ನಮ್ಮ ತಂಡ ಆಡುತ್ತಿರುವ ರೀತಿ ಅಮೋಘವಾಗಿದೆ. ಒಂದು ವೇಳೆ ಇದರ ಅರ್ಧದಷ್ಟು ಆಡಿದರೂ ತಂಡ ಯಾವುದೇ ಪಂದ್ಯವನ್ನೂ ಗೆಲ್ಲಬಹುದು ಎಂದರು. 

ಗೆಲುವು ದಾಖಲಿಸಲು ಭದ್ರವಾದ ತಂಡ ಪ್ರಯತ್ನ ಅಗತ್ಯವಾಗಿದೆ. ಒಂದು ವೇಳೆ ನಾವು ಸಂಘಟಿತ ತಂಡವಾಗಿ ಆಡಿದರೆ ಎಲ್ಲ ಪಂದ್ಯಗಳು ಸುಲಭವಾಗಿರುತ್ತದೆ. ನಮ್ಮ ತಂಡದ ಮೇಲೆ ನಮಗೆ ನಂಬಿಕೆಯಿರಬೇಕು ಮತ್ತು ನಾವು ಮಾಡಿದ ಯೋಜನೆಯಂತೆ ಸಾಗಬೇಕು. ತಂಡವಾಗಿ ಆಡಿದರೆ ಎದುರಾಳಿ ಯಾವುದೇ ಇರಬಹುದು ನಾವು ಗೆಲ್ಲಬಹುದು ಎಂದು ನಾಯಕ ಫ‌ಜೆಲ್‌ ಅತ್ರಾಚಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next