Advertisement

ಜಿಎಸ್‌ಟಿಯಿಂದ ಕೆಎಸ್‌ಆರ್‌ಟಿಸಿಗೆ ಲಾಭ; ಆದರೆ, ಪ್ರಯಾಣ ದರ ಇಳಿಸಲ್ಲ

03:45 AM Jul 10, 2017 | |

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳಿಗೆ ದರ ಏರಿಕೆ ಸೇರಿದಂತೆ ಯಾವುದೇ ಕಸರತ್ತು ಇಲ್ಲದೆ ಅನಾಯಾಸವಾಗಿ ಈಗ ನಿತ್ಯ ಸರಿಸುಮಾರು 70ರಿಂದ 80 ಲಕ್ಷ ರೂ. ಉಳಿತಾಯ ಆಗುತ್ತಿದೆ!

Advertisement

– ಇದು ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದ ಜಿಎಸ್‌ಟಿಯ ಕೊಡುಗೆ.

ಹೌದು, ಕೆಲವು ಕ್ಷೇತ್ರಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೊರೆಯಾಗಿ ಪರಿಣಮಿಸಿದ್ದರೆ, ಆರ್ಥಿಕ ಸಂಕಷ್ಟದ್ದಲ್ಲಿದ್ದ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ಮಾತ್ರ ಹೊಸ ತೆರಿಗೆ ವ್ಯವಸ್ಥೆ ಅಕ್ಷರಶಃ ವರದಾನವಾಗಿ ಪರಿಣಮಿಸಿದೆ. ಇದರಿಂದ ಈ ಮೊದಲು ಚಿಂತೆಗೀಡಾಗಿದ್ದ ಅಧಿಕಾರಿಗಳು, ಹೊಸ ತೆರಿಗೆ ವ್ಯವಸ್ಥೆಯಿಂದ ನಿರಾತಂಕವಾಗಿದ್ದಾರೆ. ಆದರೆ, ಇದರ ಬೆನ್ನಲ್ಲೇ ನಿಗಮಗಳಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಉಳಿತಾಯ ಆಗುತ್ತಿರುವಾಗ, ಇದರ ಲಾಭವನ್ನು ಪ್ರಯಾಣ ದರ ಇಳಿಕೆ ಮೂಲಕ ಜನರಿಗೂ ವರ್ಗಾವಣೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. 

ಆದರೆ, ಅದು ಸಾಧ್ಯವೇ ಇಲ್ಲ ಎನ್ನುವುದು ಸರ್ಕಾರದ ನಿಲುವು 2017ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆ ವರದಿಯಲ್ಲಿ ನೀಡಿದ ಅಂಕಿ-ಅಂಶಗಳ ಪ್ರಕಾರ 2016ರ ಮೇನಿಂದ ಡಿಸೆಂಬರ್‌ ಅಂತ್ಯದವರೆಗೆ ನಾಲ್ಕೂ ನಿಗಮಗಳು ಒಟ್ಟಾರೆ 271 ಕೋಟಿ ರೂ. ನಷ್ಟದಲ್ಲಿವೆ. ಅಂದರೆ ನಿತ್ಯ ಅಂದಾಜು 1 ಕೋಟಿ ನಷ್ಟದಲ್ಲಿದೆ. ಈಗ ಜಿಎಸ್‌ಟಿಯಿಂದ ದೊರೆತ ತೆರಿಗೆ ವಿನಾಯ್ತಿಯಿಂದ ನಿತ್ಯ 70 ಲಕ್ಷ ಉಳಿತಾಯ ಆಗುತ್ತಿದೆ. ಇದು ನಿಗಮಗಳ ಪಾಲಿಗೆ “ಬಿಗ್‌ ರಿಲೀಫ್’ ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಜ್ಯದ “ಸಂಚಾರ ನಾಡಿ’ ಸಾರಿಗೆ ನಿಗಮದ ಬಸ್‌ಗಳು ಪ್ರತಿದಿನ ಸಾವಿರಾರು ಕಿ.ಮೀ. ದೂರ ಕ್ರಮಿಸುತ್ತವೆ. ಇದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ವಾಯವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ನಿಗಮಗಳು ನಿತ್ಯ ಅಂದಾಜು 17ರಿಂದ 18 ಲಕ್ಷ ಲೀ. ಡೀಸೆಲ್‌ ಖರೀದಿ ಮಾಡಬೇಕಾಗುತ್ತದೆ. ಈ ಡೀಸೆಲ್‌ ಮತ್ತು ಆಯಿಲ್‌ ಮೇಲೆ ಹಿಂದಿದ್ದ ಶೇ. 5ರಷ್ಟು ರಾಜ್ಯ ಪ್ರವೇಶ ಶುಲ್ಕದಿಂದ ಈಗ ಶಾಶ್ವತವಾಗಿ ವಿನಾಯ್ತಿ ಸಿಕ್ಕಿದೆ. ಜತೆಗೆ ಟೈರ್‌, ಟ್ಯೂಬ್‌ಗಳು ಸೇರಿದಂತೆ ಬಸ್‌ನ ಬಿಡಿ ಭಾಗಗಳ ಖರೀದಿ ಮೇಲೆ ಕೂಡ ಶೇ. 10ರಷ್ಟು ತೆರಿಗೆ ಪ್ರಮಾಣ ಕಡಿತಗೊಂಡಿದೆ. ಇದೆಲ್ಲದರ ಪರಿಣಾಮ ನಿಗಮಗಳಿಗೆ ನಿತ್ಯ ಹೆಚ್ಚು-ಕಡಿಮೆ 70ರಿಂದ 80 ಲಕ್ಷ ರೂ. ಉಳಿತಾಯ ಆಗಲಿದೆ ಎಂದು ತಿಳಿದುಬಂದಿದೆ.

Advertisement

ಲೆಕ್ಕಾಚಾರ ಹೀಗಿದೆ
ರಾಜ್ಯ ಸಾರಿಗೆ ನಿಗಮಗಳಲ್ಲಿ ಒಟ್ಟಾರೆ ವೆಚ್ಚದಲ್ಲಿ ಡೀಸೆಲ್‌ ಮತ್ತು ಆಯಿಲ್‌ನ ಪಾಲು ಶೇ. 37ರಷ್ಟು ಇದೆ. ಶೇ. 42ರಷ್ಟು ವೆಚ್ಚ ನೌಕರರ ವೇತನ ಪಾವತಿಗೆ ಆಗುತ್ತದೆ. ಉಳಿದ ಶೇ. 21ರಷ್ಟು ಬಿಡಿಭಾಗಗಳ ಖರೀದಿಗಾಗಿ ವೆಚ್ಚ ಮಾಡಲಾಗುತ್ತದೆ. ಅಂದರೆ ಸಾರಿಗೆ ನಿಗಮಗಳ ಶೇ. 58ರಷ್ಟು ಪ್ರಮಾಣದ ವೆಚ್ಚಕ್ಕೆ ಕನಿಷ್ಠೆ ಶೇ. 5ರಿಂದ ಗರಿಷ್ಠ ಶೇ. 10ರಷ್ಟು ತೆರಿಗೆ ಹೊರೆ ಕಡಿಮೆ ಆಗಿದೆ. ಇದರ ಮೊತ್ತ 70ರಿಂದ 80 ಲಕ್ಷ ರೂ. ಆಗುತ್ತದೆ. ಇದರಲ್ಲಿ ಬಿಎಂಟಿಸಿಗೆ ನಿತ್ಯ 20ರಿಂದ 25 ಲಕ್ಷ ಉಳಿತಾಯವಾದರೆ, ಕೆಎಸ್‌ಆರ್‌ಟಿಸಿಗೆ 18ರಿಂದ 20 ಲಕ್ಷ ರೂ. ಹಾಗೂ ಉಳಿದೆರಡು ನಿಗಮಗಳಿಗೆ ನಿತ್ಯ 15ರಿಂದ 18 ಲಕ್ಷ ರೂ. ಉಳಿಕೆ ಆಗಲಿದೆ ಎಂದು ಕೆಎಸ್‌ಆರ್‌ಟಿಸಿ ಹೆಸರು ಹೇಳಲಿಚ್ಛಿಸದ ಅಂಕಿ-ಸಂಖ್ಯೆ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದರ ಇಳಿಕೆಗೆ ಆಗ್ರಹ
ಈಗಾಗಲೇ ಜಿಎಸ್‌ಟಿಯಿಂದ ಹವಾನಿಯಂತ್ರಿತ ಬಸ್‌ಗಳಲ್ಲಿ ಶೇ. 1ರಷ್ಟು ಸೇವಾ ತೆರಿಗೆ ಕಡಿತಗೊಂಡಿದ್ದು, ಇದರ ಲಾಭ ಪ್ರಯಾಣಿಕರಿಗೆ ಆಗಿದೆ. ಇದೇ ರೀತಿ, ಈಗ ಡೀಸೆಲ್‌ ಮತ್ತು ಬಿಡಿ ಭಾಗಗಳ ಖರೀದಿ ಮೇಲಿನ ತೆರಿಗೆ ಹೊರೆ ಕಡಿಮೆಯಾಗಿದೆ. ಈ ಮಧ್ಯೆ ಸರ್ಕಾರವು ಬಿಎಂಟಿಸಿಗೆ ಪ್ರಸಕ್ತ ಸಾಲಿನ ಮೋಟಾರು ವಾಹನ ತೆರಿಗೆಯಿಂದ ವಿನಾಯ್ತಿ ನೀಡಿದ್ದು, ವರ್ಷಕ್ಕೆ 120 ಕೋಟಿ ರೂ. ಉಳಿತಾಯ ಆಗಿದೆ. ಇದೆಲ್ಲದರ ಲಾಭ ಪ್ರಯಾಣಿಕರಿಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ಏನು ಉಪಯೋಗ ಎಂದು ಬಸ್‌ ಪ್ರಯಾಣಿಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ಪ್ರಯಾಣಿಕರು ಆಗ್ರಹಿಸುತ್ತಾರೆ.

ಆದರೆ, ಡೀಸೆಲ್‌ ದರ ಇಳಿಕೆ ತಾತ್ಕಾಲಿಕ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ ಆಗುತ್ತಲೇ ಇರುತ್ತದೆ. ಉದಾಹರಣೆಗೆ 2016ರ ಏಪ್ರಿಲ್‌ನಲ್ಲಿ ಡೀಸೆಲ್‌ ಬೆಲೆ ಲೀಟರ್‌ಗೆ 43.60 ರೂ. ಇತ್ತು. 2016ರ ಫೆಬ್ರವರಿಯಲ್ಲಿ ಇದು 60 ರೂ. ಆಗಿತ್ತು. ಈಗ 54.42 ರೂ. (ರಾಜ್ಯ ಪ್ರವೇಶ ಶುಲ್ಕರಹಿತ) ಆಗಿದೆ. ಹಾಗಾಗಿ, ಡೀಸೆಲ್‌ ಬೆಲೆ ಕಡಿಮೆ ಆಗಿದ್ದರಿಂದ ಪ್ರಯಾಣ ದರ ಇಳಿಕೆ ಮಾಡುವುದು ಕಷ್ಟ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಆದರೆ, ಡೀಸೆಲ್‌ ದರ ಏರಿಳಿತವಾದರೂ ಜಿಎಸ್‌ಟಿಯಿಂದ ಶೇ. 5ರಷ್ಟು ರಾಜ್ಯ ಪ್ರವೇಶ ಶುಲ್ಕದಿಂದ ಶಾಶ್ವತ ವಿನಾಯ್ತಿ ಸಿಕ್ಕಿದೆ.

ನಿಗಮಗಳು    ಡೀಸೆಲ್‌ ಖರೀದಿ (ನಿತ್ಯ)    ಉಳಿತಾಯ
ಕೆಎಸ್‌ಆರ್‌ಟಿಸಿ    6 ಲಕ್ಷ ಲೀ.    18-20 ಲಕ್ಷ ರೂ.
ಬಿಎಂಟಿಸಿ    3-4 ಲಕ್ಷ ಲೀ.    20-25 ಲಕ್ಷ ರೂ.
ಎನ್‌ಡಬುಕೆಆರ್‌ಟಿಸಿ    3.5 ಲಕ್ಷ ಲೀ.    15-18 ಲಕ್ಷ ರೂ.
ಎನ್‌ಇಕೆಆರ್‌ಟಿಸಿ    3.5 ಲಕ್ಷ ಲೀ.    15-18 ಲಕ್ಷ ರೂ.

ದರ ಇಳಿಕೆ ಪ್ರಸ್ತಾವ ಇಲ್ಲ; ಸಚಿವ
ಜಿಎಸ್‌ಟಿಯಿಂದ ಸಾರಿಗೆ ನಿಗಮಗಳ ಮೇಲಿನ ತೆರಿಗೆ ಹೊರೆ ಕಡಿಮೆ ಆಗಬಹುದು. ಆದರೆ, ನಿಗಮಗಳು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಪ್ರಯಾಣ ದರ ಇಳಿಕೆಯ ಯಾವುದೇ ಯೋಚನೆ ಇಲ್ಲ. ಯಾಕೆಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಡೀಸೆಲ್‌ ದರ ಈಗ ಸಾಕಷ್ಟು ಏರಿಕೆಯಾಗಿದೆ. ಈ ಮಧ್ಯೆ ನೌಕರರ ವೇತನ ಹೆಚ್ಚಿಸಿದ್ದು, ಇದರಿಂದ ನಾಲ್ಕು ವರ್ಷಗಳಿಗೆ 1,700 ಕೋಟಿ ರೂ. ಹೊರೆ ಆಗಿದೆ.

– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವರು

ಉಳಿತಾಯದ ನಿಖರ ಲೆಕ್ಕ ಸಿಗಲಿ
ಜಿಎಸ್‌ಟಿಯಿಂದ ಹವಾನಿಯಂತ್ರಿತ ಬಸ್‌ಗಳಲ್ಲಿನ ಸೇವಾ ತೆರಿಗೆ ಶೇ. 1ರಷ್ಟು ಕಡಿಮೆ ಆಗಿತ್ತು. ಅದನ್ನು ಪ್ರಯಾಣಿಕರಿಗೆ ಜುಲೈ 1ರಿಂದಲೇ ವರ್ಗಾಯಿಸಲಾಗಿದೆ. ಉಳಿದಂತೆ ಡೀಸೆಲ್‌ ಮತ್ತು ಬಿಡಿಭಾಗಗಳ ಮೇಲಿನ ತೆರಿಗೆ ಹೊರೆ ಎಷ್ಟು ಕಡಿಮೆ ಆಗುತ್ತದೆ ಎಂಬುದರ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಇದರ ಸ್ಪಷ್ಟ ಚಿತ್ರಣ ಗೊತ್ತಾದ ನಂತರ ಈ ಬಗ್ಗೆ ಪ್ರತಿಕ್ರಿಯಿಸಬಹುದು.

– ಎಂ. ನಾಗರಾಜ (ಯಾದವ), ಅಧ್ಯಕ್ಷರು, ಬಿಎಂಟಿಸಿ

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next