Advertisement

ಬೆಳ್ವೆ: ಪೆಟ್ರೋಲ್‌ ಬಂಕ್‌ನಲ್ಲಿ ಕಳವು

12:00 AM Jul 16, 2023 | Team Udayavani |

ಸಿದ್ದಾಪುರ: ಬೆಳ್ವೆ ಗ್ರಾಮದ ತಾರಿಕಟ್ಟೆ ಕ್ರಾಸ್‌ ಬಳಿ ಇರುವ ಶ್ರೀ ಗಣೇಶ್‌ ಫ್ಯೂಯಲ್‌ ಸರ್ವೀಸ್‌ನ ಕಚೇರಿಯ ರೂಂನ ಶಟರ್‌ ಬೀಗ ಮುರಿದು ಕಳವು ಮಾಡಿದ ಘಟನೆ ಜು. 14ರ ರಾತ್ರಿ ನಡೆದಿದೆ.

Advertisement

ಪೆಟ್ರೋಲ್‌ ಬಂಕ್‌ ಲಾರಿ ಚಾಲಕ ಶನಿವಾರ ಬೆಳಗಿನ ಜಾವ ಮಂಗಳೂರಿಗೆ ಹೋಗಲು ಕಚೇರಿ ಬಳಿ ಬಂದಾಗ, ಕಚೇರಿಯ ಮುಂದಿನ ಶಟರ್‌ ಬಾಗಿಲು ತೆರದುಕೊಂಡಿರುವುದನ್ನು ನೋಡಿ ಬಂಕ್‌ ಮಾಲಕರಿಗೆ ಮಾಹಿತಿ ನೀಡಿದ್ದಾರೆ.

ಚಾಕಚಕ್ಯತೆ ತೋರಿದ ಕಳ್ಳ
ಬಂಕ್‌ನ ರಾತ್ರಿ ಪಾಳಿಯವರು 10 ಗಂಟೆಗೆ ಪೆಟ್ರೋಲ್‌ ಬಂಕ್‌ ಬಂದ್‌ ಮಾಡಿ, ಕಚೇರಿ ಬೀಗ ಹಾಕಿ ಮನೆಗೆ ಹೋದ ಅನಂತರ ಕಳ್ಳತನ ಮಾಡಲಾಗಿದೆ. ಕಚೇರಿಯ ಮುಂಭಾಗದಲ್ಲಿ ಅಳವಡಿಸಿದ ಎರಡು ಸಿಸಿ ಕೆಮರಾಗಳನ್ನು ಮರೆ ಮಚಲು ಮೇಲ್ಭಾಗಕ್ಕೆ ತಿರುಗಿಸಿ, ಪೇಪರ್‌ ಅಂಟಿಸಿದ್ದಾರೆ. ಹಿಂದಿನ ಭಾಗದಲ್ಲಿರುವ ಕೆಮರಾಕ್ಕೂ ಪ್ಲ್ರಾಸ್ಟಿಕ್‌ ಕವರ್‌ ಮುಚ್ಚಿದ್ದಾರೆ. ಕಚೇರಿಯ ಬೀಗ ಒಡೆಯುವ ಸಮಯದಲ್ಲಿ ಎರಡು ಭಾಗಗಳಲ್ಲಿ ಹಳೆಯ ಬೋರ್ಡ್‌ಗಳನ್ನು ಅಡ್ಡವಾಗಿಟ್ಟು ಬೀಗಗಳನ್ನು ಮುರಿದಿದ್ದಾರೆ. ಹಣಕ್ಕಾಗಿ ಕಚೇರಿಯ ಡ್ರಾವರ್‌ಗಳನ್ನು ತೆರೆದು ಜಾಲಾಡಿದ್ದಾರೆ. ಹಣ ಸಿಗದಿದಾಗ ನೇಟ್‌ ವರ್ಕ್‌ ಸಂಪರ್ಕದ ಹೊಸ ಮೋಡೆಮ್‌, ಹಾರ್ಡ್‌ಡಿಸ್ಕ್, ಸಿಸಿ ಕೆಮರಾದ ಡಿ.ವಿ.ಆರ್‌. ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆ ಉಪನೀರಿಕ್ಷಕ ನಾಸೀರ್‌ ಹುಸೇನ್‌ ಹಾಗೂ ಸಿಬಂದಿ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು, ಶ್ವಾನ ದಳದವರು ಶೋಧ ಕಾರ್ಯ ನಡೆಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡನೇ ಬಾರಿಗೆ ಕಳ್ಳತನ
ಕಳೆದ ವರ್ಷ ಜೂನ್‌ ತಿಂಗಳಲ್ಲಿ ಇದೇ ಮಾದರಿಯಲ್ಲಿ ಕಳ್ಳರು ಕಳ್ಳತನ ನಡೆಸಿದ್ದರು. ಆ ಸಂದರ್ಭ ಬಂಕ್‌ನಲ್ಲಿದ್ದ 1,89,000 ರೂ. ನಗದು ಕಳ್ಳತನ ಮಾಡಲಾಗಿತ್ತು. ಆ ಬಳಿಕ ಬಂಕ್‌ ಮಾಲಕರು ಹಣವನ್ನು ಬಂಕ್‌ನಲ್ಲಿ ಇಡದೇ ಮುಂಜಾಗ್ರತೆ ವಹಿಸುತ್ತಿದ್ದರು. ಈ ಬಾರಿ ಕಳ್ಳತನಕ್ಕೆ ಬಂದವರು ಹಣಕ್ಕಾಗಿ ಜಾಲಾಡಿ, ಎಲ್ಲಿಯೂ ಹಣ ಸಿಗದಿದ್ದಾಗ ಕಚೇರಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next