ಸಿದ್ದಾಪುರ: ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಹರ್ಷಿತ್ (12) ಎಂಬಾತನನ್ನು ಆಮ್ನಿ ಕಾರಿನಲ್ಲಿ ಬಂದಿದ್ದ ತಂಡವೊಂದು ಅಪಹರಣ ಮಾಡಲು ಯತ್ನಿಸಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ಶಂಕರ ನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ
ಹರ್ಷಿತ್ ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಯಿಂದ ಶಾಲೆಗೆ ಬರುತ್ತಿದ್ದಾಗ ಬೆಳ್ವೆ ಗುಮ್ಮೊಲ ರಸ್ತೆಯ ಬದಿಯಲ್ಲಿ ನೀಲಿ ಬಣ್ಣದ ಆಮ್ನಿ ಕಾರು ನಿಂತಿತ್ತು. ಅದರೊಳಗಿದ್ದ ಓರ್ವನು ಬಾಲಕನಿಗೆ ಕಾರು ಹತ್ತುವಂತೆ ಹೇಳಿದ್ದು, ಹರ್ಷಿತ್ ಒಪ್ಪದಾಗ ಆತನಿಗೆ ಹೊಡೆದು ಯಾವುದೋ ದ್ರಾವಣ ಸಿಂಪಡಿಸಿ ಹೋಗಿದ್ದಾ ರೆಂದು ಆರೋಪಿಸಲಾಗಿದೆ.
ಸ್ವಲ್ಪ ಹೊತ್ತು ಕಳೆದು ಗುಮ್ಮೊಲ್ ಮಾರ್ಗವಾಗಿ ಬೆಳ್ವೆ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದ ಯುವತಿಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಹುಡುಗನನ್ನು ಗಮನಿಸಿ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೆಬ್ರಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾನೆ.
ಬೆಳ್ವೆ ಗ್ರಾಮದ ದೇವಸ್ಥಾನಬೆಟ್ಟು ರಾಜೀವ ಪೂಜಾರಿ ಅವರ ಮೂವರು ಮಕ್ಕಳಲ್ಲಿ ಕೊನೆಯವನಾಗಿರುವ ಹರ್ಷಿತ್ ಪ್ರತಿನಿತ್ಯ ಇದೇ ಮಾರ್ಗವಾಗಿ ಬೆಳ್ವೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾನೆ.
ಶಂಕರನಾರಾಯಣ ಹಾಗೂ ಅಮಾಸೆಬೈಲು ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸರದಲ್ಲಿರುವ ಸಿಸಿಕೆಮರಾಗಳನ್ನು ಪರಿಶೀಲಿಸಿದ್ದಾರೆ. ವಿದ್ಯಾರ್ಥಿಯ ತಾಯಿ ಸುಮತಿ ಪೂಜಾರಿ ನೀಡಿರುವ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಯದ ವಾತಾವರಣ
ತನಗೆ ಕಾರಿನಲ್ಲಿ ಬಂದವರು ಹೊಡೆದು ಮುಖಕ್ಕೆ ದ್ರಾವಣ ಸಿಂಪಡಿಸಿ ಹೋಗಿದ್ದಾರೆ ಎಂದು ಬಾಲಕ ಹೇಳಿರುವುದರಿಂದ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.