Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕ ಹಾಲಪ್ಪ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ನನಗೆ ಸಂತೋಷವೇ ಆಗುತ್ತದೆ. ಅದನ್ನು ತಪ್ಪಿಸುವಂತಹ ನೀಚತನಕ್ಕೆ ನಾನು ಹೋಗುವುದಿಲ್ಲ. ಹಿಂದೆ ನನಗೆ ಸಚಿವ ಸ್ಥಾನ ಸಿಗಬಹುದಾದ ಸಂದರ್ಭದಲ್ಲಿ ಹಾಲಪ್ಪ ಅಡ್ಡಗಾಲು ಹಾಕಿ ಅದನ್ನು ಕೋಟಾ ಶ್ರೀನಿವಾಸ ಪೂಜಾರಿಗೆ ಕೊಡಿಸಿದ್ದರು. ಈಗ ಇದೇ ಕೋಟಾ ಕಾರಣದಿಂದ ಈಡಿಗ ಕೋಟಾದಡಿ ಸಿಗಬೇಕಾಗಿದ್ದ ಸಚಿವ ಸ್ಥಾನ ಕೋಟಾ ಖಾಲಿಯಾಗಿರುವುದರಿಂದ ಹಾಲಪ್ಪ ಅವರಿಗೆ ಸಿಗುವುದಿಲ್ಲ ಎಂದು ವ್ಯಂಗ್ಯವಾಗಿ ಭವಿಷ್ಯ ನುಡಿದರು.
Related Articles
Advertisement
ತಾಲೂಕಿನಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದರೂ ಶಾಸಕರು ಸಂಕಷ್ಟದಲ್ಲಿದ್ದವರ ನೆರವಿಗೆ ಬಂದಿಲ್ಲ. ಅವರು ಅಭಿವೃದ್ಧಿ ಎಂದರೆ ಗಣಪತಿ ಕೆರೆ ಒಂದೇ ಎಂದು ಭಾವಿಸಿಕೊಂಡಂತೆ ಕಾಣುತ್ತಿದೆ. ಗಣಪತಿ ಕೆರೆ ಕೆಳಭಾಗದಲ್ಲಿ ಶಾಸಕರ ನಿವೇಶನ ಇರುವುದರಿಂದ ಈ ಪ್ರದೇಶ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆಯೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿದೆ ಎಂದು ಕಿಡಿಕಾರಿದರು.
ಅಕಾಲಿಕ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಮನೆ ಕುಸಿತ, ಕೊಟ್ಟಿಗೆ ಹಾನಿ, ಫಸಲು ನಷ್ಟದ ಜೊತೆಗೆ ಜಾನುವಾರುಗಳು ಸಿಡಿಲಿನಿಂದ ಮೃತಪಟ್ಟಿದೆ. ಈತನಕ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ರಾಜ್ಯ ಸರ್ಕಾರಕ್ಕೆ ಮತ್ತು ಶಾಸಕರಿಗೆ ಕಣ್ಣುಕಿವಿ ಇಲ್ಲ. ಕಳೆದ ಸಾಲಿನಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಸಾಕಷ್ಟು ಮನೆಗಳು ನೆಲಸಮವಾಗಿತ್ತು. ಸರ್ಕಾರ 5 ಲಕ್ಷ ರೂ. ಪರಿಹಾರ ಕೊಡುವ ಭರವಸೆ ನೀಡಿತ್ತು. ಈತನಕ ಕೇವಲ 94 ಸಾವಿರ ರೂಪಾಯಿ ಬಿಡುಗಡೆಯಾಗಿದ್ದು ಬಿಟ್ಟರೆ ಉಳಿದ ಹಣ ಬಂದಿಲ್ಲ. ಶಾಸಕರು ಬಡವರ ಪರ ಅಲ್ಲ, ರಿಯಲ್ ಎಸ್ಟೇಟ್ ಪರ ಇದ್ದಾರೆ ಎನ್ನುವುದು ಜಗಜ್ಜಾಹಿರವಾಗುತ್ತಿದೆ ಎಂದರು.
ಇದನ್ನೂ ಓದಿ : ರಮ್ಜಾನ್ ಹಬ್ಬ: ಭಟ್ಕಳದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಶಾಂತಿ ಸಭೆ
ನಮ್ಮ ಅವಧಿಯಲ್ಲಿ ಪ್ರತಿವರ್ಷ ಗ್ರಾಮ ಪಂಚಾಯ್ತಿಗೆ 60 ಆಶ್ರಯ ಮನೆ ನೀಡಿದ್ದೇವೆ. ಮೊದಲ ಬಾರಿಗೆ ಶಾಸಕರು ಈ ವರ್ಷ ಗ್ರಾಮ ಪಂಚಾಯ್ತಿಗೆ 30 ಮನೆ ನೀಡಿದ್ದಾರೆ. ಆದರೆ ಮನೆ ಕಟ್ಟಿಕೊಳ್ಳಲು ಹಣ ಬಿಡುಗಡೆಯಾಗಿಲ್ಲ. ಫಲಾನುಭವಿಗಳು ಸರ್ಕಾರದಿಂದ ಹಣ ಬರುತ್ತದೆ ಎಂದು ಅರೆಬರೆ ಮನೆಕಟ್ಟಿಕೊಂಡು ಬಿಸಿಲು ಮಳೆಯಲ್ಲಿ ವಾಸ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಇರುವಾಗ ಪ್ರಧಾನಿಯವರು ಅಚ್ಛೆದಿನ್ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ರಾಜ್ಯದಲ್ಲಿ ಕೋಮು ಸೌಹಾರ್ದವನ್ನು ಕದಡುವ ಕೆಲಸ ನಡೆಯುತ್ತಿದೆ. ಎಲ್ಲ ಸಮುದಾಯದವರು ಶಾಂತಿ ಮತ್ತು ಸೌಹಾರ್ದತೆಯಿಂದ ಇರುವ ವಾತಾವರಣ ರಾಜ್ಯ ಸರ್ಕಾರ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಬೇಳೂರು, ನಗರಸಭೆ ವಿಪಕ್ಷ ನಾಯಕ ಮಂಡಗಳಲೆ ಗಣಪತಿ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ, ಪ್ರಮುಖರಾದ ಸಂತೋಷ್ ಸದ್ಗುರು, ಯಶವಂತ ಪಣಿ, ಡಿ.ದಿನೇಶ್, ತಾರಾಮೂರ್ತಿ, ಅನ್ವರ್ ಭಾಷಾ, ಗಣಾಧೀಶ್ ಇನ್ನಿತರರು ಹಾಜರಿದ್ದರು.