ಬೇಲೂರು: ಕೇಂದ್ರ ಸರ್ಕಾರ ಪ್ರಕೃತಿ ವಿಕೋಪದಡಿ ಕೊಡಗು ಜಿಲ್ಲೆಗೆ 157 ಕೋಟಿ ಅನುದಾನ ಬಿಡುಗಡೆ ಗೊಳಿಸಿದ್ದು, ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಫಿ ಬೆಳಗಾರರಿಗೆ ಪರಿಹಾರ ನೀಡದೇ ತಾರತಮ್ಯ ಎಸಗಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಬೇಲೂರು ಪಟ್ಟಣದ ಸಮೀಪದ ಪ್ಲಾಂಟರ್ ಕ್ಲಬ್‌ನಲ್ಲಿ ಕರ್ನಾಟಕರರ ಒಕ್ಕೂಟದ ವತಿಯಿಂದ ನಡೆದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಮಾತ ನಾಡಿದ ಅವರು, ಕಾಫಿ ನಾಡು ಎಂದೇ ಖ್ಯಾತಿ ಪಡೆದ ಕೊಡಗು ಅತಿವೃಷ್ಟಿಯಿಂದ ನಲುಗಿದೆ. ಆದರೆ ರಾಜ್ಯ ಸರ್ಕಾರ ಕೇಂದ್ರದಿಂದ ಬಂದ 157 ಕೋಟಿ ಅನು ದಾನದಲ್ಲಿ 100 ಕೋಟಿ ರೂ. ವೆಚ್ಚ ಮಾಡಿ ಇನ್ನು 57 ಕೋಟಿ ಬಾಕಿ ಉಳಿಸಿದ್ದು ಕೂಡಲೇ ಉಳಿದಿರುವ ಅನುದಾನವನ್ನು ಕಾಫಿ ಬೆಳೆಗಾರರಿಗೆ ನೀಡುವಂತೆ ಒತ್ತಾಯಿಸಿದರು.
ಕಾಫಿ ಬೆಳೆಗಾರರ ಸಮಸ್ಯೆಗೆ ಪರಿಹಾರ: 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದೇಶದಲ್ಲಿ ಸಾಲವೇ ಇತ್ತು, ದೇಶದ ಅಭಿವೃದ್ಧಿ ದೃಷ್ಟಿಯಿದ ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿ ಮಾಡಿ, ತೆರಿಗೆ ವಂಚಿತರಿಗೆ ಬಿಸಿ ಮುಟ್ಟಿಸಿದೆ. ಇನ್ನು ಐದು ವರ್ಷಗಳ ಮೋದಿ ಸರ್ಕಾರದಲ್ಲಿ ಕಾಫಿ ಬೆಳೆಗಾರರ ಸಂಪೂರ್ಣ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಈಗಾಗಲೇ ಮೋದಿ ಸರ್ಕಾರ ಕಿಸಾನ್ ಸನ್ಮಾನ್ ಯೋಜನೆ ಸುಮಾರು 15 ಕೋಟಿ ರೈತರಿಗೆ ವಿಸ್ತರಿಸಿದೆ ಕರ್ನಾಟಕ ಬೆಳೆಗಾರರ ಒಕ್ಕೂಟ ಹತ್ತಾರು ಬೇಡಿಕೆ ಗಳನ್ನು ಮುಂದಿಟ್ಟಿದೆ. ಅದರಲ್ಲಿ ಪ್ರಮುಖ ಸಮಸ್ಯೆ ಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಿದ್ದೇವೆ ಎಂದು ಹೇಳಿದರು.
ಕಾಫಿ ಬೆಳೆ ನಾಶದಿಂದ ಸಂಕಷ್ಟ: ಕಾಫಿ ಬೆಳೆಗಾರರ ಸಂಕಷ್ಟ ಅರ್ಥಿಕ ಸ್ಥಿತಿ ಬಗ್ಗೆ ಮಾತ್ರ ಚಿಂತನೆ ಮಾಡಬೇಕೆ ಹೊರತು ರಾಜಕೀಯ ಲೆಕ್ಕಚಾರ ಹಾಕಬಾರದು. ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಬೇಲೂರು ತಾಲೂಕುಗಳ ಕೆಲ ಭಾಗಗಳಲ್ಲಿ ಕಾಫಿ ಬೆಳೆಯುತ್ತಿದ್ದು, ಕಳೆದ ಸಾಲಿನಲ್ಲಿ ನಡೆದ ಅತಿವೃಷ್ಟಿ ಯಲ್ಲಿ ಬೇಲೂರು ತಾಲೂಕಿನಲ್ಲಿ ಸುಮಾರು 86 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ನಾಶವಾಗಿದ್ದು ಬೆಳೆಗಾರರು ಸಂಕಷ್ಟ ಅನುಭವಿಸಿದ್ದಾರೆ ಎಂದು ಹೇಳಿದರು.
ಸಾಲ ಮನ್ನಾ ಮಾಡಿ: ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತೀರ್ಥಮಲ್ಲೇಶ್ ಮಾತನಾಡಿ ಕಾಫಿ ಬೆಳೆಗಾರರು ಇತ್ತೀಚಿನ ದಿನದಲ್ಲಿ ನೂರಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು ಆನೆ ಹಾವಳಿ, ಎತ್ತಿನಹೊಳೆ ಯೋಜನೆಯಿಂದ ಸುಮಾರು 2 ಲಕ್ಷ ಮರಗಳ ಮರಣ ಹೋಮ, ಚಿಕ್ಕಮಗಳೂರು ಸಕಲೇಶಪುರ ರೈಲ್ವೆ ಯೋಜನೆ, ಕಾಫಿ ಮೆಣಸು ಅಮದು ಇನ್ನು ಮುಂತಾದ ಸಮಸ್ಯೆಗಳಲ್ಲಿರುವ ಕಾಫಿ ಬೆಳೆಗಾರರ ಸಂಪೂರ್ಣ ಸಾಲಮನ್ನಾ ಮಾಡ ಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದ ಅವರು ಈ ನಿಟ್ಟಿನಲ್ಲಿ ನೂತನ ಸಂಸದರು ಬೆಳೆ ಗಾರರ ಹಿತ ಕಾಪಾಡಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಬೇಲೂರು ಶಾಸಕ ಕೆ.ಎಸ್.ಲಿಂಗೇಶ್, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಕಾಫಿ ಬೋರ್ಡ್ ಅಧ್ಯಕ್ಷ ಭೋಜೇಗೌಡ, ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಮಾಜಿ ಅಧ್ಯಕ್ಷ ಜಗನಾಥ್ ಮೊದಲಾದವರಿದ್ದರು.