ಬೇಲೂರು: ತಾಲೂಕಿನ ಭತ್ತ ಬೆಳೆಯುವ ರೈತರು ನೇರ ಕೂರಿಗೆ ಬಿತ್ತನೆ ಪದ್ಧತಿ ಅಳವಡಿಸಿ ಕೊಂಡು ಹೆಚ್ಚು ಇಳುವರಿ ಪಡೆಯುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಕೋನೇರಲು ಗ್ರಾಮದ ರೈತ ಬಸವರಾಜ್ ಅವರ ಜಮೀನಿನಲ್ಲಿ ನೇರ ಕೂರಿಗೆ ಬಿತ್ತನೆ ಪದ್ಧತಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಅರಿವು ಮೂಡಿಸುವ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಡಿಮೆ ನೀರಿನ ಬಳಕೆ: ಭತ್ತ ಬೆಳೆಯುವ ರೈತರು ಆನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅಚ್ಚುಕಟ್ಟು ಪ್ರದೇಶ ದಲ್ಲಿ ಸಮಯಕ್ಕೆ ಸರಿಯಾಗಿ ನೀರು ಸಿಗುವುದು ಕೃಷಿ ಕಾರ್ಮಿಕರ ಕೊರತೆ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗ ಗಳಿಗೆ ನೀರು ಲಭ್ಯತೆ ಮಣ್ಣಿನ ಫಲವತ್ತತೆ ಕುಸಿಯುವ ಮತ್ತು ಆರ್ಥಿಕ ಖಚ್ಚು ಈ ಸಮಸ್ಯೆಗೆ ಸೂಕ್ತ ಪರಿಹಾರವೆಂದರೆ ನೇರ ಕೂರಿಗೆ ಪದ್ಧತಿಯನ್ನು ಅನುಸರಿಸುವುದು ಅಗತ್ಯವಾಗಿದೆ ಎಂದರು.
ಬಿತ್ತನೆಗೆ ಸಿದ್ಧತೆ ಮಾಡಿ: ಮುಂಗಾರು ಮಳೆ ಬರುವ ಮುಂಚೆ ರೈತರು ನೇರ ಕೂರಿಗೆ ಬಿತ್ತನೆಗೆ ಭೂಮಿ ಸಿದ್ಧತೆಯನ್ನು ಮುಂಚಿತವಾಗಿ ಮಾಡಿಕೊಳ್ಳಬೇಕು 1 ರಿಂದ 2 ಬಾರಿ ಬಿತ್ತನೆ ಮುಂಚೆ ತೆಳುವಾಗಿ ನೀರು ಹಾಯಿಸುವುದರಿಂದ ಮತ್ತು ಸರಿಯಾದ ಸಮಯಕ್ಕೆ ಮಳೆಯಾದರೆ ಭೂಮಿಯಲ್ಲಿ ಇರುವ ಕಳೆ ಬೀಜಗಳು ಮೊಳಕೆಯೊಡಿಯುತ್ತವೆ ಈ ಸಂದರ್ಭದಲ್ಲಿ ಕಳೆನಾಶಕ ಸಿಂಪಡಣೆಯಿಂದ ಶೇ.40- 50 ರಷ್ಟು ಕಳೆಯ ಪ್ರಮಾಣವನ್ನು ಬಿತ್ತನೆ ಮಾಡುವ ಮೊದಲೇ ನಿಯಂತ್ರಿಸಬಹುದು ಎಂದು ತಿಳಿಸಿದರು.
ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ: ಬಿತ್ತನೆಯ 15-20 ದಿವಸಗಳ ಮುಂಚೆ ಪ್ರತಿ ಹೆಕ್ಟೇರ್ 5-10 ಮೆಗಾಟನ್‌ಗಳಷ್ಟು ಭೂಮಿಗೆ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಮಿಶ್ರಣಮಾಡಬೇಕು ಮುಂಗಾರು ಹಂಗಾಮಿನ ಮೇ ಕೊನೆಯವಾರದಿಂದ ಜೂನ್ ಮೂರನೇ ವಾರದವರೆಗೂ ಬಿತ್ತನೆ ಮಾಡಬಹುದು. ಬೇಸಿಗೆಯಲ್ಲಿ ನೀರಿನ ಲಭ್ಯತೆಯ ಅನುಸಾರವಾಗಿ ಜನವರಿ ಮೊದಲನೆ ವಾರದಲ್ಲಿ ಬಿತ್ತನೆ ಮಾಡಿದರೆ ಉತ್ತಮವಾದ ಇಳುವರಿ ಪಡೆಯಬಹುದು. ಜೈವಿಕ ಗೊಬ್ಬರಗಳಿಂದ ಬೀಜೋ ಪಚಾರ ಮಾಡಿ ಬಿತ್ತನೆ ಮಾಡು ವುದರಿಂದ ರಾಸಾಯನಿಕ ಗೊಬ್ಬರ ಬಳಕೆಯಲ್ಲಿ ಶೇ.10ರಷ್ಟು ಕಡಿತಗೊಳಿಸಬವುದು ಎಂದು ತಿಳಿಸಿದರು.
ರೈತರು ಭತ್ತ ಬೆಳೆಯಲು 120 ದಿನಗಳ ಕಾಲ ಗದ್ದೆಯಲ್ಲಿ ನೀರಿಲೆಬೇಕು ಎಂದು ಹೇಳುತ್ತಾರೆ ಅದೆ ನೇರ ಭತ್ತ ಬಿತ್ತನೆ ಪದ್ಧತಿಯಲ್ಲಿ ಸಸಿ 15-20 ದಿನಗಳ ಕಾಲ ತೇವಾಂಶದ ಕೊರತೆಯನ್ನು ತಡೆದುಕೊಳ್ಳುತ್ತದೆ ಮುಂಗಾರಿನಲ್ಲಿ ಬಿತ್ತನೆ ಮಾಡುವುದರಿಂದ ಉತ್ತಮ ಮಳೆಯಾದರೆ ನೀರು ಉಣಿಸುವ ಕೆಲಸ ಇರುವುದಿಲ್ಲ ನೀರಿನ ಲಭ್ಯತೆಯ ಅಧಾರವಾಗಿ ಬೆಳೆಗೆ ಸಂಧಿಗ್ದ ಹಂತಗಳಲ್ಲಿ ಬಿತ್ತನೆ ಸಮಯ ತೆಂಡೆಯೊಡೆಯುವಾಗ, ಹೂವಾಡುವಾಗ ಮತ್ತು ಕಾಳು ಕಟ್ಟುವಾಗ ಭೂಮಿಯಲ್ಲಿ ತೇವಾಂಶದ ಕೊರತೆಯಾಗ ದಂತೆ ಎಚ್ಚರವಹಿಸಿದರೆ ಉತ್ತಮ ಇಳುವರಿಯನ್ನು ಪಡೆಯ ಬಹುದಾಗಿದೆ ಎಂದು ತಿಳಿಸಿದರು.
ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ: ರೈತರು ನಾಟಿ ಪದ್ಧತಿಯಲ್ಲಿ ಬಿತ್ತನೆ ಮಾಡಿದರೆ 1 ಕೇಜಿ ಭತ್ತ ಉತ್ಪಾದಿಸಲು 5 ಸಾವಿರ ಲೀ. ನೀರು ಬೇಕಾಗುತ್ತದೆ ಅದರೆ ನೇರ ಕೂರಿಗೆ ಬಿತ್ತನೆ ಪದ್ಧತಿಯಲ್ಲಿ 2 ಸಾವಿರ ಲೀ. ನೀರು ಮಾತ್ರ ಅವಶ್ಯಕವಾಗಿದ್ದು ರೈತರು ಇಂತಹ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಮತ್ತು ಖರ್ಚಿ ಕಡಿಮೆ ಮಾಡಲು ಮುಂದಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ಧೇಶಕಿ ಕಾವ್ಯ, ಕೃಷಿ ಅಧಿಕಾರಿ ಪ್ರಕಾಶ್‌ಕುಮಾರ್, ಸಹಾಯಕ ಕೃಷಿ ಅಧಿಕಾರಿ ನಾಗೇಂದ್ರ, ಕೃಷಿ ವಿಜ್ಞಾನಿ ಡಾ.ಯೋಗೀಶ್ ಇದ್ದರು.