ಬೆಳ್ತಂಗಡಿ : ಪರವೂರಿನಲ್ಲಿ ತುಳುವರನ್ನು ಕಂಡಾಗ ವಿಶೇಷ ಅಭಿಮಾನ ಪಡುವ ತುಳುವರು ಊರಿನಲ್ಲಿಯೂ ಜಾತಿಯ ಚೌಕಟನ್ನು ಮೀರಿ ಒಂದಾಗ ಬೇಕಿದೆ. ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತುಳುವನ್ನೂ ಭಾಷಾ ವಿಚಾರವಾಗಿ ಆಯ್ದುಕೊಳ್ಳುವುದು ಹೆಮ್ಮೆಯ ವಿಚಾರ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೆಂದ್ರಕುಮಾರ್ ಅವರು ಹೇಳಿದರು.
ಅವರು ಶನಿವಾರ ಕೊಯ್ಯೂರು ಗ್ರಾಮದ ಬಜಿಲ ಶಾಲಾ ವಠಾರದಲ್ಲಿ ಹರ್ಷ ಗೆಳೆಯರ ಬಳಗ ಹಾಗೂ ಸ್ನೇಹ ಯುವತಿ ಮಂಡಲ ವತಿಯಿಂದ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗ ದಲ್ಲಿ ಬೆಳ್ತಂಗಡಿ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಬಜಿಲಡ್ ಬೊಳ್ಳಿ ಪರ್ಬೊ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದ ಡಾ| ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ವಿಶ್ವ ತುಳು ಸಮ್ಮೇಳನದ ಬಳಿಕ ಅಕಾಡೆಮಿಯು ಸಾಕಷ್ಟು ಕಡೆ ತುಳು ಸಮ್ಮೇಳನ ಆಯೋಜಿಸಿ ಯಶಸ್ವಿಯಾಗಿದೆ. ತುಳು ಭಾಷೆ ಬೋಧನೆಯಲ್ಲೂ ಸಾಕಷ್ಟು ಕೆಲಸ ಮಾಡಿದ್ದು, ಮುಂದೆ ನಮ್ಮ ವಿದ್ಯಾಸಂಸ್ಥೆಗಳಲ್ಲೂ ತುಳುವಿನ ಬೋಧನೆಗೆ ಪ್ರಯತ್ನ ಮಾಡಲಾಗುವುದು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಮಾತನಾಡಿ, ತುಳು ಕೇವಲ ಭಾಷೆ ಮಾತ್ರ ಎನಿಸಿಕೊಳ್ಳದೆ ಅದನ್ನು ಮೀರಿ ವಿಶ್ವಮಾನ್ಯತೆ ಗಳಿಸಿಕೊಂಡಿದೆ. ಜತೆಗೆ ಸಜ್ಜನ-ಸರ್ವಾಂಗೀಣ ಭಾಷೆ ಎಂಬ ಗೌರವವೂ ತುಳುವಿಗೆ ಇದೆ ಎಂದರು.
ಈ ಸಂದರ್ಭದಲ್ಲಿ ಡಿ. ಹರ್ಷೆಂದ್ರಕುಮಾರ್ ಹಾಗೂ ವಿಜಯರಾಘವ ಪಡ್ವೆಟ್ನಾಯ ಅವರನ್ನು ಗೌರವಿಸಲಾಯಿತು. ಹರ್ಷ ಗೆಳೆಯರ ಬಳಗದ ಅಧ್ಯಕ್ಷರು, ತಾಲೂಕಿನ ವಿವಿಧ ಕ್ಷೇತ್ರಗಳ ಗಣ್ಯರನ್ನು ಸಮ್ಮಾನಿಸಲಾಯಿತು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಆಶಯದ ನುಡಿಗಳನ್ನಾಡಿದರು. ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ವಿ.ಎನ್, ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಸದಸ್ಯ ಪ್ರವೀಣ್ ಗೌಡ, ಗ್ರಾ.ಪಂ. ಪಿಡಿಒ ರಾಜೀವಿ ಶೆಟ್ಟಿ, ರೀಮಾ ಲೊಲೊಟಾ ಬಂಗೇರ, ನ್ಯಾಯವಾದಿ ಸಂತೋಷ್ ಕುಮಾರ್, ಮುಖ್ಯ ಶಿಕ್ಷಕಿ ಜಯಶ್ರೀ ಮೊದಲಾದವರಿದ್ದರು.
ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ ಸ್ವಾಗತಿಸಿ, ಅಕಾಡೆಮಿಯ ರಿಜಿಸ್ಟ್ರಾರ್ ಬಿ. ಚಂದ್ರಹಾಸ ರೈ ವಂದಿಸಿದರು. ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ದಿವಾ ಕೊಕ್ಕಡ ಹಾಗೂ ಧನಂಜಯ ಪಿ. ಪಾಂಬೇಲು ನಿರೂಪಿಸಿದರು. ಉದ್ಘಾಟನ ಸಮಾರಂಭಕ್ಕೆ ಪೂರ್ವಭಾವಿಯಾಗಿ ಆಕರ್ಷಕ ಮೆರವಣಿಗೆ ನಡೆಯಿತು.
ಜತೆಯಾಗಿ ಕೆಲಸ
ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್ ಮಾತನಾಡಿ, ಭಾರತ ಸಹಿತ ಜಗತ್ತಿನ ವಿವಿಧ ಕಡೆಗಳಲ್ಲಿ ತುಳುವರು ತಮ್ಮ ಸಾಧನೆ ಮೆರೆದಿದ್ದು, ನಮ್ಮ ಮಾತೃ ಭಾಷೆಯ ಅಭಿಮಾನದಿಂದ ನಾವೆಲ್ಲರೂ ಜತೆಯಾಗಿ ಕೆಲಸ ಮಾಡಬೇಕಿದೆ. ಜತೆಗೆ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಹಸ್ತಾಂತರಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.
ತುಳು ಸಂಸ್ಕೃತಿ ಉಳಿಯಲಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ತುಳು ಸಂಸ್ಕೃತಿ ಉಳಿದಾಗಲೇ ಭಾಷೆಯ ಉಳಿವು ಸಾಧ್ಯವಾಗುತ್ತದೆ. ಡಾ| ವೀರೇಂದ್ರ ಹೆಗ್ಗಡೆ ಅವರು ವಿಶ್ವ ತುಳು ಸಮ್ಮೇಳನದ ಮೂಲಕ ತುಳುವಿಗೆ ಹೆಚ್ಚಿನ ಮಹತ್ವ ಒದಗಿಸಿಕೊಟ್ಟಿದ್ದು, ಸಂವಿಧಾನದ 8ನೇ ಪರಿಚ್ಛೇಧಕ್ಕೆ ತುಳು ಭಾಷೆಯ ಸೇರ್ಪಡೆ ವಿಚಾರ ಇನ್ನಷ್ಟು ಬಲಗೊಳ್ಳಬೇಕಿದೆ ಎಂದರು.