Advertisement

ತಾತ್ಕಾಲಿಕ ಕಟ್ಟ ನಿರ್ಮಿಸಿದರೂ ಮಳೆಗೆ ಕೊಚ್ಚಿ ಹೋಗುವ ಭೀತಿ

10:00 AM Sep 21, 2018 | Team Udayavani |

ಬೆಳ್ತಂಗಡಿ: ಬೆಳ್ತಂಗಡಿಯ ಜನತೆ ಕುಡಿಯುವುದಕ್ಕಾಗಿ ನಗರದ ಹತ್ತಿರದಲ್ಲಿ ಹರಿಯುತ್ತಿರುವ ಸೋಮಾವತಿ ನದಿಯ ನೀರನ್ನೇ ಆಶ್ರಯಿಸಿದ್ದು, ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಇಲ್ಲಿನ ಪ.ಪಂ. ತಾತ್ಕಾಲಿಕ ಕಟ್ಟ ನಿರ್ಮಿಸಿ ನಗರಕ್ಕೆ ನೀರು ನೀಡುತ್ತದೆ.

Advertisement

ಆದರೆ ಪ್ರಸ್ತುತ ಏಕಾಏಕಿ ನದಿ ನೀರು ಕಡಿಮೆಯಾಗಿದ್ದು, ಕಟ್ಟ ನಿರ್ಮಿಸಲೂ ಆತಂಕದ ಸ್ಥಿತಿ ಇದೆ. ಮತ್ತೆ ಮಳೆ ಬಂದು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಕಟ್ಟ ನೀರು ಪಾಲಾಗುತ್ತದೆ. ಹೀಗಾಗಿ ನೀರು ಕಡಿಮೆಯಾದರೂ ಮಳೆಗಾಲ ಮುಗಿಯದೆ ಕಟ್ಟ ಹಾಕುವಂತಿಲ್ಲ.!

ನದಿಯಲ್ಲಿ ಜಾಕ್‌ವೆಲ್‌ ನಿರ್ಮಿಸಿ ಪಂ. ಕುಡಿಯುವ ನೀರನ್ನು ಪೂರೈಕೆ ಮಾಡುತ್ತದೆ. ನೀರು ಕಡಿಮೆಯಾಗುತ್ತಾ ಬಂದಂತೆ ಸುಮಾರು 1.05 ಲಕ್ಷ ರೂ. ಖರ್ಚು ಮಾಡಿ ತಾತ್ಕಾಲಿಕ ಕಟ್ಟ ನಿರ್ಮಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಕಟ್ಟ ನಿರ್ಮಿಸುವ ಸ್ಥಿತಿ ಬರುತ್ತದೆ. ಆದರೆ ಕಳೆದ ವರ್ಷ ಕೊನೆಯ ಅವಧಿಯಲ್ಲಿ ಹೆಚ್ಚು ಮಳೆಯಾದ ಪರಿಣಾಮ ಫೆಬ್ರವರಿಯಲ್ಲಿ ಕಟ್ಟ ಹಾಕಲಾಗಿತ್ತು.

ಆದರೆ ಸದ್ಯ ನದಿಯಲ್ಲಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದು, ಅವಧಿಗಿಂತ ಮೊದಲೇ ಕಟ್ಟ ಹಾಕಬೇಕಾದ ಸ್ಥಿತಿ ಇದೆ. ಆದರೆ ನೀರು ಕಡಿಮೆಯಾಯಿತೆಂದು ಕಟ್ಟ ಹಾಕಿದರೆ ಮಳೆಗೆ ಅದು ನಾಶವಾಗುವ ಭೀತಿ ಇದೆ. ಮಳೆ ಆರಂಭಗೊಂಡರೆ ಕಳೆದ ವರ್ಷ ದಂತೆ ಕಟ್ಟ ವಿಳಂಬವಾಗಿ ಹಾಕಿದರೂ ತೊಂದರೆಯಾಗದು.

1.05 ಎಂಎಲ್‌ಡಿ ಬೇಡಿಕೆ
ಬೆಳ್ತಂಗಡಿ ನಗರಕ್ಕೆ ಪ್ರತಿನಿತ್ಯ ಸುಮಾರು 1.05 ಎಂಎಲ್‌ಡಿ ನೀರಿನ ಬೇಡಿಕೆ ಇದೆ. 0.6 ಎಂಎಲ್‌ಡಿ ನೀರನ್ನು ನದಿಯಿಂದ ಪಡೆಯಲಾಗುತ್ತಿದ್ದು, 0.45 ಎಂಎಲ್‌ಡಿ ನೀರನ್ನು 9 ಕೊಳವೆಬಾವಿಗಳಿಂದ ಪಡೆಯಲಾಗುತ್ತದೆ. ಪ.ಪಂ. ವ್ಯಾಪ್ತಿ ಯಲ್ಲಿ ಒಟ್ಟು 1,415 ನೀರಿನ ಕನೆಕ್ಷನ್‌ಗಳಿವೆ. ನದಿಯಲ್ಲಿ ನೀರಿದ್ದರೆ ನಗರಕ್ಕೆ ನೀರಿನ ತೊಂದರೆಯಾಗದು. ಅಂದರೆ ಬೆಳ್ತಂಗಡಿಯಲ್ಲಿ ಈವರೆಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿಲ್ಲ ಎಂದು ಅಧಿಕಾರಿ ಹೇಳುತ್ತಾರೆ. ಒಂದು ವೇಳೆ ಕೊಳವೆಬಾವಿಗಳಲ್ಲಿ ನೀರಿ ಬತ್ತಿದರೂ ಅಲ್ಲಲ್ಲಿ ನಿರ್ಮಿಸಲಾಗಿರುವ ಓವರ್‌ ಹೆಡ್‌ ಟ್ಯಾಂಕ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಕಳೆದ ವರ್ಷ ಸುಮಾರು 13 ಕೋ.ರೂ.ಗಳ ಕುಡಿಯುವ ನೀರಿನ ಯೋಜನೆಯನ್ನು ಅಂದಿನ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಅದರಲ್ಲಿ ಕಲ್ಲಗುಡ್ಡೆಯಲ್ಲಿ 5 ಲಕ್ಷ ಲೀ. ಸಾಮರ್ಥ್ಯದ ಮಾಸ್ಟರ್‌ಟ್ಯಾಂಕ್‌, ಟ್ರೀಟ್‌ ಮೆಂಟ್‌ ಪ್ಲ್ರಾಂಟ್‌, ಜ್ಯಾಕ್‌ವೆಲ್‌ ಹಾಗೂ 2 ಓವರ್‌ಹೆಡ್‌ ಟ್ಯಾಂಕ್‌ಗಳು ನಿರ್ಮಾಣಗೊಂಡಿದ್ದವು.

Advertisement

ಚೆಕ್‌ಡ್ಯಾಮ್‌ ನಿರ್ಮಾಣ
ಪ.ಪಂ. ಪ್ರತಿವರ್ಷ ತಾತ್ಕಾಲಿಕ ಕಟ್ಟ ನಿರ್ಮಿಸುವುದಕ್ಕೆ 1.05 ಲಕ್ಷ ರೂ. ಖರ್ಚು ಮಾಡುತ್ತದೆ. ಹೀಗಾಗಿ ಅದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವುದು ಅನಿವಾರ್ಯವಾಗಿದೆ. ನಗರ ಪ್ರದೇಶಕ್ಕೆ ನೀರು ಪೂರೈಕೆ ಮಾಡುವುದಕ್ಕೆ ಚೆಕ್‌ಡ್ಯಾಮ್‌ ನಿರ್ಮಿಸುವುದಕ್ಕಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ 80 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಅದನ್ನು ಸಣ್ಣ ನೀರಾವರಿ ಇಲಾಖೆಯವರೇ ನಿರ್ಮಿಸಲಿದ್ದಾರೆ.

ಆತಂಕ ಸೃಷ್ಟಿ
ಸದ್ಯಕ್ಕೆ ನೀರು ಕಡಿಮೆಯಾದರೂ ಕಟ್ಟ ನಿರ್ಮಿಸುವಂತಿಲ್ಲ. ಮತ್ತೆ ನದಿಯಲ್ಲಿ ನೀರು ಹೆಚ್ಚಾದರೆ ಅದು ಕೊಚ್ಚಿಕೊಂಡು ಹೋಗುತ್ತದೆ. ನಗರಕ್ಕೆ ಈ ತನಕ ನೀರಿನ ಸಮಸ್ಯೆಯಾಗಿಲ್ಲ. ಆದರೆ ಈ ಬಾರಿ ನದಿಯಲ್ಲಿ ನೀರು ಕಡಿಮೆಯಿದ್ದು, ಆತಂಕ ಸೃಷ್ಟಿಸಿದೆ. ನದಿಯಲ್ಲಿ ನೀರಿದ್ದರೆ ಕೊಳವೆಬಾವಿಗಳು ಬತ್ತಿದರೂ ಯಾವುದೇ ಸಮಸ್ಯೆಯಾಗದ ವ್ಯವಸ್ಥೆ ಇದೆ. ಹೀಗಾಗಿ ಜನತೆ ನೀರಿನ ಮಿತ ಬಳಕೆಗೆ ಒತ್ತು ನೀಡಬೇಕು.
ಮಹಾವೀರ ಆರಿಗ
  ಕಿರಿಯ ಎಂಜಿನಿಯರ್‌, ಪ.ಪಂ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next