Advertisement
ದಿಡುಪೆಯಲ್ಲಿ ಕೃಷಿಕ ಕುಟುಂಬಗಳು ಗದ್ದೆಗೆ ನೀರಿಲ್ಲದೇ ಭತ್ತದ ಕೃಷಿಯನ್ನು ಸ್ವಯಂ ನಾಶ ಮಾಡುತ್ತಿರುವ ಕುರಿತು ಉದಯವಾಣಿ ಫೆ. 23ರಂದು ವರದಿ ಮಾಡಿತ್ತು. ಇದರ ಗಂಭೀರತೆ ಅರಿತ ತಾ.ಪಂ. ಸದಸ್ಯರಾದ ಗೋಪಿನಾಥ ನಾಯಕ್, ಜಯರಾಮ್, ಕೇಶವತಿ,ವಿಜಯ ಗೌಡ, ಶಶಿಧರ್, ಸುಧಾಕರ್, ಸೆಬಾಸ್ಟಿಯನ್, ಜಾಯೆಲ್, ನೆರಿಯ ಪಂಚಾಯತ್ ಅಧ್ಯಕ್ಷ ಮಹಮ್ಮದ್, ಮಾಲಾಡಿ ಪಂಚಾಯತ್ ಅಧ್ಯಕ್ಷ ಬೇಬಿ ಸುವರ್ಣ ಮೊದಲಾದವರು ನಿರ್ಣಯಕ್ಕೆ ಆಗ್ರಹಿಸಿದರು.
ನೀರಿಲ್ಲದೇ ದಿಡುಪೆಯಲ್ಲಿ ಭತ್ತದ ಬೆಳೆ ನಾಶ ಮಾಡುತ್ತಿರುವ ಕುರಿತು ಉದಯವಾಣಿ ವರದಿ ಗಮನಿಸಿದ್ದು, ಅವರಿಗೆ ಪರಿಹಾರ ಪಡೆಯಲು ಅವಕಾಶ ಇದೆ ಎಂದು ತಹಶೀಲ್ದಾರ್ ತಿಪ್ಪೆಸ್ವಾಮಿ ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ. ಬೆಳೆ ನಾಶ ಮಾಡಬೇಡಿ. ಬದಲಾಗಿ ಬೆಳೆ ಬಂದಿಲ್ಲ ಎಂದು ಕೃಷಿ ಇಲಾಖೆ ಗಮನಕ್ಕೆ ತಂದು ಅವರಿಂದ ಸೂಕ್ತ ಮೌಲ್ಯಮಾಪನ ಮಾಡಿಸಿ ಕಂದಾಯ ಇಲಾಖೆಗೆ ನೀಡಿದರೆ ಅದಕ್ಕೆ ಸರಕಾರದಿಂದ ಪರಿಹಾರಧನ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
Related Articles
Advertisement
ಭತ್ತದ ಕೊರತೆ: ಈ ಮಧ್ಯೆ ರಾಜ್ಯದಲ್ಲಿ ಭತ್ತದ ಕೊರತೆ ಉಂಟಾಗಿದೆ. ಕೇರಳದ ಅಕ್ಕಿಮಿಲ್ಲಿನವರು ಒಡಿಶಾ ಹಾಗೂ ಗುಜರಾತ್ ಕಡೆಗೆ ಮುಖ ಮಾಡಿದ್ದರೆ ಕರ್ನಾಟಕದ ಅಕ್ಕಿಮಿಲ್ಲಿನವರು ಒಡಿಶಾ, ಉತ್ತರಪ್ರದೇಶ, ಮಧ್ಯಪ್ರದೇಶಕ್ಕೆ ಜನ ಕಳುಹಿಸಿ ಭತ್ತ ತರಿಸುತ್ತಿದ್ದಾರೆ ಎಂದು ರೈತಬಂಧು ಆಹಾರೋದ್ಯಮ್ ಸಂಸ್ಥೆ ಪಾಲುದಾರ ಶಿವಶಂಕರ ನಾಯಕ್ ಹೇಳಿದ್ದಾರೆ. ಈ ಮಧ್ಯೆ ಅಕ್ಕಿ ಬೆಲೆ ಗಗನಕ್ಕೆ ಏರುತ್ತಿದ್ದು, ಕರ್ನಾಟಕ ಹಾಗೂ ಮಧ್ಯಪ್ರದೇಶ ಸರಕಾರದ ಬಳಿ ಅಕ್ಕಿ, ಭತ್ತದ ದಾಸ್ತಾನೇ ಇಲ್ಲ ಎಂಬ ಆಘಾತಕಾರಿ ಮಾಹಿತಿ ಕೂಡ ಮೂಲಗಳಿಂದ ತಿಳಿದುಬಂದಿದೆ. ಹೀಗೊಂದು ವೇಳೆ ಆಗಿದ್ದಲ್ಲಿ ಅಕ್ಕಿಯ ದರದ ನಿಯಂತ್ರಣ ಕಾಳಸಂತೆಕೋರರಿಂದ ನಡೆಯುವ ಸಂಭವವಿದೆ. ಸರಕಾರದ ಬಳಿ ದಾಸ್ತಾನಿಲ್ಲದೇ ನಿಯಂತ್ರಣವೂ ಕಷ್ಟ.
ಬಂಗೇರ ಆಗ್ರಹ ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ ಅವರು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಬೆಳ್ತಂಗಡಿಯನ್ನು ಬರಪೀಡಿತ ಘೋಷಣೆಗೆ ಪತ್ರ ಬರೆದಿದ್ದೇನೆ. ಸರಕಾರ ಸ್ಪಂದಿಸಿಲ್ಲ. ಈಗ ಪತ್ರಿಕಾ ವರದಿ ತುಣುಕು, ತಾ.ಪಂ. ನಿರ್ಣಯ ಸಹಿತ ಇನ್ನೊಮ್ಮೆ ಸರಕಾರಕ್ಕೆ ಪತ್ರ ಬರೆದು ಬರಪೀಡಿತ ಘೋಷಣೆಗೆ ಆಗ್ರಹಿಸುತ್ತೇನೆ. ರೈತರು ಆತಂಕಕ್ಕೆ ಒಳಗಾಗಬೇಡಿ. ಬೆಳೆ ನಾಶ ಮಾಡಬೇಡಿ. ತಹಶೀಲ್ದಾರ್ ಮೂಲಕ ಪರಿಹಾರ ಪಡೆಯಿರಿ ಎಂದಿದ್ದಾರೆ.