Advertisement

ಸೋಮಾವತಿ ಬತ್ತಿದರೆ 11 ವಾರ್ಡ್‌ಗಳಿಗೆ ಕೊಳವೆಬಾವಿಗಳಿಂದಲೇ ನೀರು

10:11 AM Mar 21, 2020 | mahesh |

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಬೇಸಗೆಯ ಕಾವು ಹೆಚ್ಚಾಗಿರುವುದರಿಂದ ನೀರಿನ ಮಟ್ಟ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಇತ್ತ ನದಿಯಲ್ಲಿ ಒಳಹರಿವು ಕ್ಷೀಣಿಸಿದ್ದು, ಅಂತರ್ಜಲ ಮಟ್ಟವೂ ಕುಗ್ಗುತ್ತಿದೆ. ಇವೆಲ್ಲವನ್ನೂ ಪರಿಗಣಿಸಿ ಕಲ್ಲಗುಡ್ಡೆಯಲ್ಲಿ 5 ಲಕ್ಷ ಲೀ. ಸಾರ್ಮರ್ಥ್ಯದ ಓವರ್‌ ಹೆಡ್‌ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿಟ್ಟು, ಬಳಿಕ ಪ್ರತಿ ವಾರ್ಡ್‌ನ ಟ್ಯಾಂಕ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

Advertisement

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ.

ಬೆಳ್ತಂಗಡಿ: ಬೆಳ್ತಂಗಡಿ ಪ.ಪಂ. ವ್ಯಾಪ್ತಿಯ 11 ವಾರ್ಡ್‌ಗಳಿಗೆ ಪ್ರತಿವರ್ಷ ಸೋಮಾವತಿ ನದಿಗೆ ಸಾಂಪ್ರದಾಯಿಕ ಒಡ್ಡು ನಿರ್ಮಾಣ ಮಾಡಿ ಬೇಸಗೆ ಬೇಗೆ ನೀಗಿಸಲಾಗುತ್ತಿತ್ತು. ಆರಂಭದಲ್ಲಿ ಜನಸಂಖ್ಯೆ ಕಡಿಮೆ ಇದ್ದು, ನೀರು ಹೇರಳವಾಗಿ ಸಾಲುತ್ತಿತ್ತು. ಕ್ರಮೇಣ ಜನಸಂಖ್ಯೆ ದ್ವಿಗುಣವಾಗುತ್ತಲೇ ವಾರ್ಡ್‌ಗಳಲ್ಲಿ ಕೊಳವೆಬಾವಿ ಕೊರೆಯುವ ಮೂಲಕ ದಾಹ ನೀಗಿಸುವಲ್ಲಿ ಪ.ಪಂ. ಅನುದಾನ ಸದ್ಬಕೆ ಮಾಡಲಾಗಿದೆ.

ವರ್ಷದಿಂದ ವರ್ಷಕ್ಕೆ ನೂರಕ್ಕೂ ಹೆಚ್ಚು ನಳ್ಳಿನೀರಿನ ಸಂಪರ್ಕಗಳು ಹೆಚ್ಚಾಗು ತ್ತಿರುವುದರಿಂದ ಸೋಮಾವತಿ ನದಿಗೆ ನಿರ್ಮಿಸುತ್ತಿದ್ದ ಸಾಂಪ್ರದಾಯಿಕ ಕಟ್ಟದಲ್ಲಿ ಸಂಗ್ರಹವಾಗುತ್ತಿದ್ದ ನೀರಿನ ಸಂಪನ್ಮೂಲ ಜೂನ್‌ ಆರಂಭದವರೆಗೆ ತಲುಪುವಲ್ಲಿ ಅಡ್ಡಿಯಾಗುತ್ತಿತ್ತು. ನಗರಕ್ಕೆ ಪ್ರತಿನಿತ್ಯ 1.05 ಎಂ.ಎಲ್‌.ಡಿ. ಅಂದೆ 7 ಲಕ್ಷ ಲೀ. ನೀರಿನ ಆವಶ್ಯಕತೆಯಿದೆ. ನದಿಯಿಂದ 0.6 ಎಂಎಲ್‌ಡಿ ಪಡೆದು ಉಳಿದ 0.45 ಎಂಎಲ್‌ಡಿ ನೀರು 15 ಕೊಳವೆಬಾವಿಗಳಿಂದ ಪಡೆಯಲಾಗುತ್ತಿದೆ.

ಸಾಂಪ್ರದಾಯಿಕ ಕಟ್ಟದಲ್ಲಿ ಬಹುಬೇಗನೆ ನೀರು ಆವಿಯಾಗುತ್ತಿದ್ದುದನ್ನು ಮನಗಂಡು 2018-19ರಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಸಣ್ಣನೀರಾವರಿ ಇಲಾಖೆ ಯಿಂದ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಪರಿಣಾಮ ಈ ವರ್ಷ ನೀರು ಪೂರೈಕೆಗೆ ಸ್ವಲ್ಪಮಟ್ಟಿನ ಆಧಾರವಾದರೂ ಪ್ರಸಕ್ತ ಬೇಸಗೆಯ ಕಾವು ಹೆಚ್ಚಾಗಿರುವುದರಿಂದ ನೀರಿನ ಮಟ್ಟ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಇತ್ತ ನದಿಯಲ್ಲಿ ಒಳಹರಿವು ಕ್ಷೀಣಿಸಿದ್ದು, ಅಂತರ್ಜಲ ಮಟ್ಟವೂ ಕುಗ್ಗುತ್ತಿದೆ. ಇವೆಲ್ಲ ವನ್ನೂ ಪರಿಗಣಿಸಿ ಕಲ್ಲಗುಡ್ಡೆಯಲ್ಲಿ 5 ಲಕ್ಷ ಲೀ. ಸಾರ್ಮರ್ಥ್ಯದ ಓವರ್‌ ಹೆಡ್‌ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿಟ್ಟು, ಬಳಿಕ ಪ್ರತಿ ವಾರ್ಡ್‌ನ ಟ್ಯಾಂಕ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

Advertisement

ಅನುದಾನ ಸದ್ಬಳಕೆ
ಪ.ಪಂ. ವ್ಯಾಪ್ತಿಯ ಪೈಪ್‌ಲೈನ್‌ ಕಾಮಗಾರಿ ಸಹಿತ ಬೋರ್‌ವೆಲ್‌ ಕೊರೆ ಯಲು ಜಿಲ್ಲಾಧಿಕಾರಿ ಅವರ ಟಾಸ್ಕ್ಫೊರ್ಸ್‌ ನಡಿ, ಬರ ಪರಿಹಾರ ನಿಧಿಯಿಂದ ಆಡಳಿತಾಧಿಕಾರಿ ತಹಶೀಲ್ದಾರ್‌ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಪ.ಪಂ. ನಿಧಿಯಿಂದ ತುರ್ತು ಅನುದಾನವನ್ನು ಮೀಸಲಿರಿಸಲಾಗುತ್ತದೆ.

11 ನೀರಿನ ಟ್ಯಾಂಕ್‌
ಪ.ಪಂ. ವ್ಯಾಪ್ತಿಯಲ್ಲಿ ಕಲ್ಲಗುಡ್ಡೆಯಲ್ಲಿ 1 ಲಕ್ಷ ಲೀ. ಮತ್ತು 5 ಲಕ್ಷ ಲೀ. ಸಾಮರ್ಥ್ಯದ ಎರಡು ಟ್ಯಾಂಕ್‌, ಹಳೆಕೋಟೆ-1.75 ಲಕ್ಷ ಲೀ., ಕೋಟ್ಲಗುಡ್ಡೆ-2.30 ಲಕ್ಷ ಲೀ., ಜೂನಿಯರ್‌ ಕಾಲೇಜು-2 ಲಕ್ಷ ಲೀ., ಕೆಲ್ಲಗುತ್ತು-1 ಲಕ್ಷ ಲೀ., ರೆಂಕೆದಗುತ್ತು-1 ಲಕ್ಷ ಲೀ., ಹುಣ್ಸೆಕಟ್ಟೆ -1 ಲಕ್ಷ ಲೀ., ಸುದೆಮುಗೇರು-50 ಸಾವಿರ ಲೀ., ಸಂಜಯನಗರ-2.30 ಲಕ್ಷ ಲೀ., ಗುಂಪಲಾಜೆ-25 ಸಾವಿರ ಲೀ. ಸಾಮರ್ಥ್ಯದ ನೀರಿನ ಓವರ್‌ಹೆಡ್‌ ಟ್ಯಾಂಕ್‌ಗಳಿವೆ.

ಈಗಾಗಲೇ ಹುಣ್ಸೆಕಟ್ಟೆ ವಾರ್ಡ್‌ನಲ್ಲಿ ನೀರಿನ ಅಭಾವ ಉಂಟಾಗುತ್ತಿದೆ. ನೀರಿನಲ್ಲಿ ಕ್ಲೋರಿನ್‌ ಅಂಶ ಹೆಚ್ಚಾಗಿರುವುದರಿಂದ ಕುಡಿಯಲು ಕಷ್ಟ ವಾಗುತ್ತಿದೆ. ಹಲವು ವರ್ಷಗಳಿಂದಲೂ ಈ ಕುರಿತು ದೂರುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಎರಡು ವರ್ಷಗಳಿಗೊಮ್ಮೆ ಪ.ಪಂ. ನಿಂದ ಓವರ್‌ಹೆಡ್‌ ಟ್ಯಾಂಕ್‌ ಸ್ವತ್ಛಗೊಳಿಸಲಾಗುತ್ತಿದೆ.

ಸಮಗ್ರ ಕುಡಿಯುವ ನೀರಿನ ಯೋಜನೆ
ಬೆಳ್ತಂಗಡಿ ನಗರಕ್ಕೆ ನೀರು ಪೂರೈಸುವ ದೃಷ್ಟಿಯಿಂದ ಸೋಮಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯಿಂದ 1.15 ಕೋ.ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಕರ್ನಾಟಕ ಅರ್ಬನ್‌ ವಾಟರ್‌ ಸಪ್ಲೈ ಆ್ಯಂಡ್‌ ಡ್ರೈನೇಜ್‌ ಬೋರ್ಡ್‌, (ಕೆಯುಡಬ್ಲ್ಯುಎಸ್‌) ಯೋಜನೆಯಡಿ 13 ಕೋ. ರೂ. ಅನುದಾನದಲ್ಲಿ 2016-17ರಲ್ಲಿ ಕಲ್ಲಗುಡ್ಡೆಯಲ್ಲಿ 5 ಲಕ್ಷ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌, ಸಂಜಯನಗರ ಕೋರ್ಟ್‌ ಆವರಣದಲ್ಲಿ 2.30 ಲಕ್ಷ ಲೀ. ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಲಾಗಿದೆ. ಜತೆಗೆ ಎಲ್ಲ ಇತರ ಓವರ್‌ಹೆಡ್‌ ಟ್ಯಾಂಕ್‌ಗಳಿಗೂ ಸಂಪರ್ಕ ಪೈಪ್‌ ಲೈನ್‌ ಕಾಮಗಾರಿ, ವಿದ್ಯುತ್‌ ಸಂಪರ್ಕ, ಜಾಕ್‌ವೆಲ್‌ ಸಂಪೂರ್ಣ ಕಾಮಗಾರಿ ನಡೆಸಲಾಗಿದೆ.

ಸಮಸ್ಯೆ ಬಾರದು
ಪ.ಪಂ. ವ್ಯಾಪ್ತಿಯಲ್ಲಿ ನಳ್ಳಿನೀರು ಸಂಪರ್ಕ ಹೊಂದಿರುವ ಮನೆಮಂದಿ ನೀರಿನ ಮಹತ್ವ ಅರಿತು ಉಪಯೋಗಿಸಿದರೆ ಕುಡಿಯುವ ಬೇಸಗೆಯಲ್ಲಿ ನೀರಿಗೆ ಸಂಕಷ್ಟ ತಪ್ಪಲಿದೆ. ಈಗಾಗಲೇ ಬೆಳ್ತಂಗಡಿ ಹೊಳೆಯಲ್ಲಿ ಮತ್ತು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. 15 ಕೊಳೆವೆಬಾವಿಗಳ ಆಶ್ರಯ ಪಡೆಯಲಾಗಿದ್ದು, ಬೇಸಗೆಯಲ್ಲಿ ಯಾವುದೇ ಸಮಸ್ಯೆ ಬಾರದು.
-ಎಂ.ಎಚ್‌. ಸುಧಾಕರ್‌, ಪ.ಪಂ. ಮುಖ್ಯಾಧಿಕಾರಿ

6 ತಾಸು ನೀರು ಪೂರೈಕೆ
ನಗರದಲ್ಲಿ ಈಗಾಗಲೇ ದಿನಕ್ಕೆ 6 ತಾಸು ನೀರು ಪೂರೈಸುತ್ತಿದ್ದು, ಅನಿವಾರ್ಯ ಬಂದಲ್ಲಿ ನೀರು ಸರಬರಾಜು ಸಮಯವನ್ನು ಅನಿವಾ ರ್ಯವಾಗಿ ಕಡಿತ ಗೊಳಿ ಸಬೇಕಾಗುತ್ತದೆ. ನಳ್ಳಿ ನೀರನ್ನು ಗೃಹ ಬಳಕೆಗೆ ಮಾತ್ರ ಉಪಯೋಗಿಸುವುದು. ಕಟ್ಟಡ ಕಾಮಗಾರಿಗಳಿಗೆ, ಹೂ ತೋಟ, ತೆಂಗಿನ ಗಿಡಗಳಿಗೆ, ವಾಹನಗಳನ್ನು ತೊಳೆಯಲು ಉಪಯೋಗಿಸಿದಲ್ಲಿ ನೀರಿನ ಸಂಪರ್ಕವನ್ನು ಶಾಶ್ವತವಾಗಿ ಕಡಿತಗೊಳಿಸಬೇಕಾಗುತ್ತದೆ.
-ಮಹಾವೀರ ಆರಿಗ, ಪ.ಪಂ. ಎಂಜಿನಿಯರ್‌

  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next