Advertisement

ಬೆಳ್ತಂಗಡಿ: ಅರಣ್ಯವಾಸಿಗಳ ಸ್ವಾವಲಂಬಿ ಜೀವನ

01:09 AM Jun 23, 2020 | Sriram |

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಭಿವೃದ್ಧಿ ವೇಗ ಪಡೆಯುವಲ್ಲಿ ವನ್ಯಜೀವಿ, ಅರಣ್ಯ ಇಲಾಖೆ ಅಡ್ಡಿಪಡಿಸುತ್ತಾ ಬಂದಿದ್ದರೂ ಮಳೆಗಾಲದಲ್ಲಿ ತುಂಬಿ ಹರಿಯುವ ತೊರೆಗೆ ಸರಕಾರದ ಅನುದಾನವನ್ನು ಕಾಯದೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಮೂಲಕ ನಾವೂರು ಗ್ರಾಮಸ್ಥರು ಸ್ವಾವಲಂಬಿಗಳಾಗಿದ್ದಾರೆ.

Advertisement

ನಾವೂರು ಗ್ರಾಮದ ಹಲವಾರು ಪ್ರದೇಶಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿದ್ದು,ಸ್ವಾತಂತ್ರ್ಯ ಲಭಿಸಿ 73 ವರ್ಷಗಳಾದರೂ ರಸ್ತೆ, ವಿದ್ಯುತ್‌ ಸಹಿತ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.

ಆದಿವಾಸಿಗಳ ಅಭಿವೃದ್ಧಿಗಾಗಿಯೇ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅರಣ್ಯ ಹಕ್ಕು ಕಾಯ್ದೆ 2006 ಇದ್ದರೂ ಅನುಷ್ಠಾನ ಮಾಡದೆ ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿವೆ.

ನಾವೂರು ಗ್ರಾಮದ ಪುಲಿತ್ತಡಿ, ಅಲ್ಯ, ಮುತ್ತಾಜೆ, ಎರ್ಮೆಲೆ ಪ್ರದೇಶದಲ್ಲಿ ಸುಮಾರು 15 ಮಲೆಕುಡಿಯ ಕುಟುಂಬಗಳು ವಾಸವಾಗಿದ್ದು, ಈ ಕುಟುಂಬಗಳು ದಿನನಿತ್ಯದ ಕೆಲಸಗಳಿಗೆ ಕುದ್ಕೋಳಿಯಲ್ಲಿರುವ ತೊರೆಯನ್ನು ದಾಟಿ ಬರಬೇಕಾಗಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ತೊರೆಯನ್ನು ದಾಟುವುದು ಅಸಾಧ್ಯ. ತೊರೆಯನ್ನು ದಾಟಲು ಪ್ರಯತ್ನಿಸಿದ ಕೆಲವರು ನೀರಿನಲ್ಲಿ ಕೊಚ್ಚಿಹೋದ ನಿದರ್ಶನಗಳಿವೆ.

ಶಾಲಾ ಕಾಲೇಜು ವಿದ್ಯಾರ್ಥಿಗಳು, ನಿತ್ಯದ ಕೆಲಸ, ಹಾಲು ಉತ್ಪಾದಕರ ಸಂಘಕ್ಕೆ ಹೋಗುವವರು ಈ ತೊರೆಯನ್ನು ದಾಟಿಯೇ ತೆರಳಬೇಕು. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಸ್ಥಳೀಯ 10, 15 ಮಂದಿ ಯುವಕರು ಸ್ವಂತ ಪರಿಶ್ರಮದಿಂದ ತೊರೆಗೆ ತಾತ್ಕಾಲಿಕ ಮರದ ಸೇತುವೆ ನಿರ್ಮಿಸಿದ್ದಾರೆ.

Advertisement

ಭರವಸೆಯಾಗಿ ಉಳಿದ ತಾ.ಪಂ. ಅನುದಾನ
ನಾವೂರಿನ ಪುಲಿತ್ತಡಿಗೆ ಸಾಗುವ ತೊರೆಗೆ ಪ್ರತಿ ವರ್ಷ ಸ್ಥಳೀಯರೇ ತಾತ್ಕಾಲಿಕ ಸಂಪರ್ಕ ನಿರ್ಮಿಸುತ್ತಿದ್ದಾರೆ. ಕಳೆದ ವರ್ಷ ತಾ.ಪಂ. ಇಒ ಕೆ.ಇ.ಜಯರಾಮ್‌ ಸಹಿತ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿದ್ದರು. ಸಂಬಂಧಪಟ್ಟ ಅರಣ್ಯ ವಿಭಾಗ ಅನುಮತಿ ನೀಡಿದ್ದಲ್ಲಿ ಪ್ರತಿ ವರ್ಷ ಸೇತುವೆ ನಿರ್ವಹಣೆಗೆ ತಾ.ಪಂ. ನಿಧಿಯಲ್ಲಿ ಅನುದಾನ ನೀಡು ವುದಾಗಿ ಇ.ಒ. ಭರವಸೆ ನೀಡಿ ದ್ದರು. ಆದರೆ ಅರಣ್ಯ ಇಲಾಖೆ ಸಿಬಂದಿ ವರ್ಷ ಕಳೆದರೂ ಅನುಮತಿ ನೀಡದ್ದರಿಂದ ಸ್ಥಳೀಯರೇ ನಿರ್ವಹಣೆ ಕಾರ್ಯ ನಡೆಸುತ್ತಿದ್ದಾರೆ.

 ಕಾನೂನು ಹೋರಾಟಕ್ಕೆ ತೀರ್ಮಾನ
ಅರಣ್ಯ ಹಕ್ಕು ಕಾಯ್ದೆಯಡಿ ಮೂಲಸೌಕರ್ಯಗಳನ್ನು ಒದಗಿಸಲು ಅವಕಾಶವಿದ್ದರೂ ಅಧಿಕಾರಿಗಳು ಆಸಕ್ತರಾಗಿಲ್ಲ. ಇಷ್ಟು ವರ್ಷ ಹೇಗೋ ಸಹಿಸಿಕೊಂಡಿದ್ದೇವೆ. ಇನ್ನು ಮುಂದೆ ಮೂಲಸೌಕರ್ಯ ಕಲ್ಪಿಸಲು ನಿರ್ಲಕ್ಷ್ಯತೋರಿದ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ.
 - ಜಯಾನಂದ ಪಿಲಿಕಲ,
ಪ್ರ. ಕಾರ್ಯದರ್ಶಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ,ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next