Advertisement
ಇತ್ತೀಚೆಗೆ ತಾಲೂಕನ್ನು ಕಾಡಿದ ಭಾರೀ ಪ್ರವಾಹದ ಕಾರಣದಿಂದ ಪಶ್ಚಿಮಘಟ್ಟದ ಮಡಿಲಲ್ಲೇ ಇರುವ ಬಂಜಾರು ಮಲೆ ಎಂಬ ಪ್ರದೇಶದ ಸಂಪರ್ಕ ಹೊರಜಗತ್ತಿನೊಂದಿಗೆ ಸಂಪೂರ್ಣ ಕಡಿತಗೊಂಡಿದೆ. ಆ ಭಾಗದಲ್ಲಿ ಹಲವಾರು ಕುಟುಂಬಗಳಿದ್ದು ಇಲ್ಲಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದು ಬಿದ್ದಿರುವ ಕಾರಣ ಕಳೆದ ಕೆಲವು ದಿನಗಳಿಂದ ಈ ಭಾಗಕ್ಕೆ ಸಂಪರ್ಕ ಅಸಾಧ್ಯವಾಗಿತ್ತು. ಆದರೆ ಇದೀಗ ಮುರಿದ ಸೇತುವೆಯ ಸ್ಥಳದಲ್ಲಿ ತಾತ್ಕಾಲಿಕ ಸಂಪರ್ಕ ಸೇತುವೆಯನ್ನು ನಿರ್ಮಿಸಲಾಗಿದ್ದು ಇದರ ಮೂಲಕ ಆ ಭಾಗಕ್ಕೆ ಅಗತ್ಯವಿರುವ ಸಾಮಾಗ್ರಿಗಳನ್ನು ಪೂರೈಲಾಗುತ್ತಿದೆ.
ಸೇತುವೆ ಭಾಗದವರೆಗೆ ಸಾಮಾಗ್ರಿಗಳನ್ನು ಟೆಂಪೋ ಮೂಲಕ ಸಾಗಿಸಲಾಯಿತಾದರೂರೂ, ಅಲ್ಲಿಂದ ಮುಂದೆ ಟೆಂಪೋ ಸಾಗದಿರುವ ಕಾರಣ ತಾತ್ಕಾಲಿಕ ಕಾಲು ಸಂಕದ ಮೂಲಕ ಈ ಎಲ್ಲಾ ಸಾಮಾಗ್ರಿಗಳನ್ನು ತಲೆಯಲ್ಲಿ ಹೊತ್ತೊಯ್ಯುವುದು ಅನಿವಾರ್ಯವಾಗಿತ್ತು. ಹೀಗಾಗಿ ಸ್ಥಳೀಯರ ಜತೆ ತಹಶೀಲ್ದಾರ್ ಕೂಡ ಆಹಾರ ಸಾಮಾಗ್ರಿಗಳನ್ನು ಸಾಗಿಸುವುದಕ್ಕೆ ನೆರವಾಗಿದ್ದಾರೆ. ಜತೆಗೆ ತಹಶೀಲ್ದಾರ್ ಅವರಿಗೆ ಅವರ ವಾಹನ ಚಾಲಕ ಸಂತೋಷ್ ಕೂಡ ಸಾಥ್ ನೀಡಿ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾದರು.