ಬೆಳ್ತಂಗಡಿ: ಆರ್ಥಿಕವಾಗಿ ಹಿಂದುಳಿದವರು ಹಾಗೂ ರೈತರ ಪ್ರಗತಿಯೇ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ ಚಿಂತನೆ ಯಾಗಿದ್ದು, ಅದರಂತೆ ಬೆಳ್ತಂಗಡಿ ಕ್ಷೇತ್ರದಲ್ಲಿ ಅರ್ಹ ರೈತರಿಗೆ ಅಕ್ರಮ-ಸಕ್ರಮ ಭೂಮಿ, ನಿವೇಶನ ರಹಿತರಿಗೆ 94ಸಿ, ಸಿಸಿ ಯೋಜನೆ ಮೂಲಕ ನಿವೇಶನ ನೀಡುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶನಿವಾರ ಇಲ್ಲಿನ ಮಿನಿ ವಿಧಾನಸೌಧದ ಆವರಣದಲ್ಲಿ ತಾ| ಆಡಳಿತದ ವತಿಯಿಂದ ಆಯೋಜನೆ ಗೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಚ್ಛ ಭಾರತ, ಬೆೇಟಿ ಬಚಾವೊ ಬೇಟಿ ಪಡಾವೊ ಮೊದಲಾದ ಯೋಜನೆಗಳ ಮೂಲಕ ಪ್ರಧಾನಿ ರಾಷ್ಟ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಅದರ ಅನುಷ್ಠಾನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ತಿಳಿಸಿದರು.
ಗೇರುಕಟ್ಟೆ ಪ.ಪೂ. ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಉಪನ್ಯಾಸ ನೀಡಿ, ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರಧರ್ಮ ಪಾಲಿಸಬೇಕಾದ ನಿಟ್ಟಿನಲ್ಲಿ ದೇಶದ ಸಂವಿಧಾನ ಜಾರಿಯಾಗಿದ್ದು, ಗಣರಾಜ್ಯ ದಿನವನ್ನು ನಾವು ಮನೆ-ಮನಗಳಲ್ಲಿ ಸಂಭ್ರಮಿಸ ಬೇಕಿದೆ. ಭಾರತ ಗ್ರಾಮದಲ್ಲಿದೆ, ಭಾರತ ಬಡವರ ಮನೆಯಲ್ಲಿದೆ ಎಂಬುದು ಅಂಬೇಡ್ಕರ್ ಚಿಂತನೆಯಾಗಿದ್ದು, ದೇಶದ ಏಕತೆಗೆ ನಾವು ಶ್ರಮಿಸಬೇಕಿದೆ ಎಂದರು.
ನಿವೃತ್ತ ಸೈನಿಕ ಎಂ.ಆರ್.ಜೈನ್, ಜಿ.ಪಂ.ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ತಾ.ಪಂ. ಸದಸ್ಯರು, ನ.ಪಂ. ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಣ ಸಂಯೋಜಕ ಸುಭಾಸ್ ಜಾಧವ್ ಅವರು ವಿವಿಧ ಸ್ಪರ್ಧೆಗಳ ವಿಜೇತರ ವಿವರ ನೀಡಿದರು. ವೇಣೂರು ಐಟಿಐನ ಜಾಕೋಬ್ ಅವರಿಗೆ ವಿಶೇಷ ಗೌರವ ನೀಡಲಾಯಿತು. ರಾಷ್ಟ್ರಮಟ್ಟದ ವಾಲಿಬಾಲ್‌ನಲ್ಲಿ ಭಾಗವಹಿಸಿದ ಬಂದಾರು ಹಿ.ಪ್ರಾ. ಶಾಲೆ ಹಾಗೂ ಮುಂಡಾಜೆ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಆಮಂತ್ರಣ ನೀಡಿಲ್ಲ
ಜಿ.ಪಂ. ಸದಸ್ಯರು ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕುಳಿತುಕೊಳ್ಳಬೇಕಿದ್ದರೂ ಸದಸ್ಯ ಕೊರಗಪ್ಪ ನಾಯ್ಕ ಅವರು ಅಧಿಕಾರಿಗಳು ತನಗೆ ಆಮಂತ್ರಣ ನೀಡಿಲ್ಲ ಎಂದು ವೇದಿಕೆ ಹತ್ತಲಿಲ್ಲ. ಅಧಿಕಾರಿಗಳು ಬಂದು ಕರೆದರೂ ಅವರು ನಿರಾಕರಿಸಿದರು.
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್ ಬಿ. ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ವಂದಿಸಿದರು. ಶಿಕ್ಷಕ ದೇವುದಾಸ್ ನಾಯಕ್ ನಿರ್ವಹಿಸಿದರು. ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಪ್ರಾಮಾಣಿಕ ಪ್ರಯತ್ನ
ಧ್ವಜಾರೋಹಣಗೈದು ಸಂದೇಶ ನೀಡಿದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು, ಸರಕಾರದ ಯಾವುದೇ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕಿದ್ದು, ಅದನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.