Advertisement

Belthangady:ಗಣೇಶ ಹಬ್ಬದಂದು ಪ್ರಚೋದನಾಕಾರಿ ಭಾಷಣ; ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ದೂರು

11:54 PM Sep 12, 2024 | Team Udayavani |

ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಮಹೇಶ್‌ ಶೆಟ್ಟಿ ತಿಮರೊಡಿ ಅವರು ಸೆ. 8ರಂದು ಉಜಿರೆಯಲ್ಲಿ ನಡೆದ ಸಾರ್ವಜನಿಕ ಗಣೇಶ ಚತುರ್ಥಿ ಹಬ್ಬದ ಸಭೆಯಲ್ಲಿ ಹಿಂದೂ ಮತ್ತು ಜೈನ ಧರ್ಮಗಳ ನಡುವೆ ವೈಮನಸ್ಸು ಉಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಸೆ. 12ರಂದು ಜೈನ ಸಮುದಾಯ ದೂರು ನೀಡಿದೆ.

Advertisement

ಉಜಿರೆ ಮಹೇಶ್‌ ಶೆಟ್ಟಿ ತಿಮರೋಡಿ (55) ಅವರು ಸಾರ್ವಜನಿಕ ಸಂಸ್ಥೆಗಳ ವಿರುದ್ಧ ಅವಹೇಳನ ಮಾಡಿ ಅವಾಚ್ಯ ಮತ್ತು ಕೀಳು ಶಬ್ದಗಳನ್ನು ಬಳಸಿದ್ದಾರೆ. ಯೂಟ್ಯೂಬ್‌ ಚಾನೆಲ್‌ಗ‌ಳಲ್ಲಿ ಇದರ ವೀಡಿಯೋಗಳು ಪ್ರಸಾರಗೊಂಡಿದ್ದು, ಆದುದರಿಂದ ಅವರ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. ಧಾರ್ಮಿಕ ಸಮಾರಂಭದಲ್ಲಿ ಜೈನ ಸಮುದಾಯಕ್ಕೆ ಬೆದರಿಕೆ ಹಾಕಿ ಟೀಕೆ ಮಾಡಿದ್ದಲ್ಲದೆ ಜಾತಿ ಮತ್ತು ಧಾರ್ಮಿಕ ಸಾಮರಸ್ಯ ಭಂಗ ಮಾಡುವ ಉದ್ದೇಶದಿಂದ ಅವಹೇಳನಕಾರಿ ಭಾಷ‌ಣ ಮಾಡಿದ್ದಾರೆ.

ಜೈನ ಮತ್ತು ಹಿಂದೂ ಧರ್ಮ/ಸಮುದಾಯಗಳ ನಡುವೆ ಹಿಂಸಾತ್ಮಕ ಘಟನೆಗಳನ್ನು ಉಂಟುಮಾಡಲು ಮತ್ತು ಜನರು ದಂಗೆ ಏಳುವಂತೆ ಆರೋಪಿತನು ಪ್ರಯತ್ನಿಸಿದ್ದು, ಈ ಮೂಲಕ ಜೈನ ವರ್ಗದ ಜನರ ಮತ್ತು ಜೈನ ಸಮುದಾಯಗಳ ಸಂಸ್ಥೆಗಳ ಮೇಲಿನ ಗೌರವವನ್ನು ಕುಗ್ಗಿಸಲು ಮತ್ತು ಅವಹೇಳನವನ್ನು ಉಂಟು ಮಾಡಲು ಪ್ರಯತ್ನಿಸಿದ್ದಾರೆ ಎಂದು ಪೆನ್‌ಡ್ರೈವ್‌ ಇತರ ದಾಖಲೆ ಸಹಿತ ಠಾಣೆಗೆ ದೂರು ನೀಡಲಾಗಿದೆ. ಆರೋಪಿ ವಿರುದ್ಧ ತ್ವರಿತವಾಗಿ ತನಿಖೆ ನಡೆಸಿ ಸಾರ್ವಜನಿಕ ಶಾಂತಿ ಮತ್ತು ನ್ಯಾಯಕ್ಕಾಗಿ ಅಗತ್ಯವಾದ ಕಾನೂನು ಕ್ರಮ ಜರುಗಿಸಿ ಎಂದು ಜೈನ ಸಮುದಾಯದಿಂದ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.