Advertisement

ಬೆಳ್ತಂಗಡಿ: ಮತದಾನ ಜಾಗೃತಿಗೆ ಅಧಿಕಾರಿಗಳಿಂದ ಸಕಲ ಸಿದ್ಧತೆ

10:30 AM Apr 06, 2018 | Team Udayavani |

ಬೆಳ್ತಂಗಡಿ: ವಿಧಾನಸಭಾ ಚುನಾವಣೆ ಪ್ರಕ್ರಿಯೆ ತಾಲೂಕಿನಲ್ಲಿ ಚುರುಕಾಗಿದೆ. ಮತದಾನದ ಜಾಗೃತಿ ಮೂಡಿಸಲು, ಗರಿಷ್ಠ ಪ್ರಮಾಣದಲ್ಲಿ ಮತದಾನ ನಡೆಯುವಂತಾಗಲು ಅಧಿಕಾರಿಗಳು ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ಮತದಾನ ಮಾಡುವಂತೆ ಮತದಾರರಿಗೆ ಪ್ರೇರೇಪಣೆ ನೀಡಲು ಸ್ವೀಪ್‌ ಸಮಿತಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.

Advertisement

ಸ್ವೀಪ್‌ ಸಮಿತಿ ‘ಮತದಾನ ಮಾಡಿದವನೇ ಮಹಾಶೂರ!’ ಎಂಬ ಪಂಚಿಂಗ್‌ ಸಾಲಿನ ಮೂಲಕ ಮತದಾರರನ್ನು ಸೆಳೆಯುತ್ತಿದೆ. ಜತೆಗೆ ‘ನಿಮ್ಮ ಮತ ನಿಮ್ಮ ಭವಿಷ್ಯ’, ‘ಪ್ರಜಾಪ್ರಭುತ್ವ ನಮ್ಮಿಂದ ಮತದಾನ ಹೆಮ್ಮೆಯಿಂದ’, ‘ಮತ ಚಲಾವಣೆ ನಿಮ್ಮ ಹಕ್ಕು ತಪ್ಪದೇ ಮತ ಚಲಾ ಯಿಸಿ’ ಎಂಬ ಘೋಷವಾಕ್ಯಗಳೊಂದಿಗೆ ಜನರನ್ನೂ ಉತ್ತೇಜಿಸುತ್ತಿದೆ.

ಗ್ರಾಮ ಲೆಕ್ಕಿಗರಿಗೆ ತರಬೇತಿ ನೀಡುವ ಕಾರ್ಯ ಎ. 9ರಂದು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆಯಲಿದೆ. ಸ್ವೀಪ್‌ ಸಮಿತಿ ಅಧಿಕಾರಿಗಳು ಮತದಾನ ಪ್ರಕ್ರಿಯೆ, ಮತಯಂತ್ರಗಳು ಹಾಗೂ ಮತದಾನ ಮಾಡಿದ ದೃಢೀಕರಣ ಮಾಡಿಕೊಳ್ಳುವ ವಿಧಾನದ ಬಗ್ಗೆ ತರಬೇತಿ ನೀಡಲಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ
ತಾಲೂಕಿನಲ್ಲಿ ಚುನಾವಣಾ ಪ್ರಕ್ರಿಯೆ ಚುರುಕುಗೊಂಡಿದ್ದು, ತಾಲೂಕು ಚುನಾವಣಾಧಿಕಾರಿ ಎಚ್‌.ಆರ್‌. ನಾಯ್ಕ, ತಹಶೀಲ್ದಾರ್‌ ತಮ್ಮಣ್ಣ ಚಿನ್ನಪ್ಪ ಹಾಸಿ ಮೊದಲಾದವರು ನಾರಾವಿ ಹಾಗೂ ಚಾರ್ಮಾಡಿ ಚೆಕ್‌ಪೋಸ್ಟ್‌ಗಳಿಗೆ ತೆರಳಿ ಪರೀಶೀಲನೆ ನಡೆಸುತ್ತಿದ್ದಾರೆ.

ತಾ.ಪಂ.ನಲ್ಲಿ ಸಭೆ
ತಾಲೂಕು ಪಂಚಾಯತ್‌ನಲ್ಲಿ ಎ. 4 ರಂದು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸಿಬಂದಿ ಜತೆ ಚುನಾವಣಾಧಿಕಾರಿ ಸಭೆ ನಡೆಸಿದರು. ಸಭೆಯಲ್ಲಿ ಚುನಾವಣಾ ಅಕ್ರಮಗಳ ತಡೆ, ವಿಡಿಯೋ ಚಿತ್ರೀಕರಣ, ಸಭೆ ಸಮಾರಂಭಗಳಿಗೆ ಅನುಮತಿ ನೀಡುವುದು, ಅಕ್ರಮ ಕಂಡಬಂದಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಸಲಹೆ-ಸೂಚನೆ ನೀಡಿದರು.

Advertisement

ಅನುಮತಿಗೆ ಅಲೆದಾಡಬೇಕಿಲ್ಲ
ಒಂದೇ ಸೂರಿನಡಿ ಎಲ್ಲ ಇಲಾಖೆಗಳ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮೊದಲು ರಾಜಕಿಯೇತರ ಕಾರ್ಯಕ್ರಮಗಳಿಗೆ ಪೊಲೀಸ್‌ ಇಲಾಖೆ, ಗ್ರಾ.ಪಂ., ನಗರ ಪಂಚಾಯತ್‌ ಅನುಮತಿಯನ್ನು ಪ್ರತ್ಯೇಕವಾಗಿ ಪಡೆಯಬೇಕಿತ್ತು. ಇದೀಗ ಅನುಮತಿ ನೀಡುವ ವಿಭಾಗದಲ್ಲಿ ಅರ್ಜಿ ಪಡೆದು, ಸೂಕ್ತ ದಾಖಲೆ, ಮಾಹಿತಿಗಳೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕಿದೆ. ಎರಡು ದಿನಗಳ ಬಳಿಕ ಸಭೆ ಸಮಾರಂಭಗಳಿಗೆ ಅನುಮತಿ ದೊರೆಯಲಿದೆ. ಅನುಮತಿಗಾಗಿ ಕಚೇರಿಗಳಿಗೆ ಅಲೆದಾಡಬೇಕಾದ ಪ್ರಮೇಯ ತಪ್ಪಲಿದೆ.

ಮತದಾನ ಬಹಿಷ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ 
ಚುನಾವಣೆ ಬಹಿಷ್ಕಾರ ಮಾಡುವುದರಿಂದ ಯಾವುದೇ ಲಾಭವಿಲ್ಲ. ಮತದಾನ ಬಹಿಷ್ಕರಿಸಿದರೆ ದೇಶದ ಜನತೆಗೆ ಸಂವಿಧಾನ ನೀಡಿರುವ ಸೌಲಭ್ಯಗಳ ದುರುಪಯೋಗವಾಗದಂತೆ ಆಗಲಿದೆ. ಆದ್ದರಿಂದ ಸೂಕ್ತ ಅಭ್ಯರ್ಥಿಯನ್ನು ಆಯ್ಕೆಯನ್ನು ಮತದಾನ ಮಾಡುವ ಮೂಲಕ ಚುನಾಯಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು.
ಎಚ್‌.ಆರ್‌. ನಾಯ್ಕ,
ಚುನಾವಣಾಧಿಕಾರಿ

ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next