Advertisement

Belthangady: ಉಕ್ಕಿ ಹರಿದ ನದಿಗಳು: ದಿಡುಪೆ ಮಲ್ಲ ಸಮೀಪ ಕುಸಿದ ಗುಡ್ಡ

12:05 AM Jul 19, 2024 | Team Udayavani |

ಬೆಳ್ತಂಗಡಿ: ದಿನವಿಡಿ ಗುರುವಾರ ಸುರಿದ ಮಳೆಗೆ ನೇತ್ರಾವತಿ, ಮೃತ್ಯುಂಜಯ, ಕಪಿಲ, ಸೋಮಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿದ ಪರಿಣಾಮ ಶಿಶಿಲ ದೇವಸ್ಥಾನ ಆವರಣಕ್ಕೆ ನೀರು ನುಗ್ಗಿದೆ. ದಿಡುಪೆ ಮಲ್ಲ ಸಮೀಪ ರಸ್ತೆಗೆ ಗುಡ್ಡ ಕುಸಿದು ಸಂಪರ್ಕ ಕಡಿತಗೊಂಡ ಘಟನೆ ನಡೆದಿದೆ.

Advertisement

ಮಲವಂತಿಗೆ ಗ್ರಾಮದ ದಿಡುಪೆ ಸಮೀಪದ ಮಲ್ಲ-ಪರಂಬೇರು ರಸ್ತೆಗೆ ಗುಡ್ಡ ಕುಸಿದು ಬಿದ್ದ ಘಟನೆ ಗುರುವಾರ ನಡೆದಿದೆ. ಸುಮಾರು 20 ಮನೆಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಸ್ಥಳೀಯರು ಸೇರಿ ರಾತ್ರಿವರೆಗೂ ಶ್ರಮಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

ದಿಡುಪೆ ಗಣೇಶ ನಗರದ ನಿವಾಸಿಗಳು ಮಳೆಗೆ ಭಯಭೀತರಾಗಿದ್ದಾರೆ. ತಾಲೂಕು ಆಡಳಿತದಿಂದ ಇಲ್ಲಿ ಗಂಜಿ ಕೇಂದ್ರ ತೆರೆದಿದ್ದರೂ ಅಪಾಯದಂಚಿನ ಮನೆಗಳ ಮಂದಿಯನ್ನು ಸ್ಥಳಾಂತರಿ ಸುವ ಕೆಲಸವಾಗಿಲ್ಲ. ಈ ಪ್ರದೇಶದ ಮನೆಮಂದಿಯನ್ನು ತಾಲೂಕು ಆಡಳಿತ ಇನ್ನೂ ಸಂಪರ್ಕಿಲ್ಲ ಎಂದು ಸ್ಥಳೀಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮೆಸ್ಕಾಂ ನಿರ್ಲಕ್ಷ್ಯ
ಮಲ್ಲದಲ್ಲಿ ಗುಡ್ಡ ಕುಸಿದ ಸ್ಥಳದಲ್ಲೇ ಎಚ್‌.ಟಿ. ಲೈನ್‌ ಹಾದು ಹೋಗಿದ್ದು, ವಿದ್ಯುತ್‌ ಕಂಬದಿಂದ ತಂತಿ ಬೇರ್ಪಟ್ಟು ರಸ್ತೆಯ ಮಧ್ಯ ಭಾಗದಲ್ಲೇ ನೇತಾಡುತ್ತಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಸ್ಥಳೀಯರು 10 ದಿನಗಳಿಂದ ಕಕ್ಕಿಂಜೆ-ಮುಂಡಾಜೆ ವಿಭಾಗದ ಜೆಇಗೆ ಕರೆಮಾಡಿದರೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.

ಉಕ್ಕಿ ಹರಿದ ಶಿಶಿಲ ಕಪಿಲ ನದಿ
ಮೂಡಿಗೆರೆ ಬೈರಾಪುರ ಘಾಟಿ ಸುತ್ತಮುತ್ತ ಉತ್ತಮ ಮಳೆ ಸುರಿದ ಪರಿಣಾಮ ಕಪಿಲ ನದಿಯಲ್ಲಿ ಮಧ್ಯಾಹ್ನದ ಬಳಿಕ ನದಿ ಪ್ರವಾಹದ ರೂಪ ಪಡೆದಿದ್ದು, ಸಂಜೆ ವೇಳೆ ಉಕ್ಕಿ ಹರಿದ ಪರಿಣಾಮ ಇತಿಹಾಸ ಪ್ರಸಿದ್ಧ ಮತ್ಯತೀರ್ಥ ಖ್ಯಾತಿಯ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಅಂಗಳಕ್ಕೆ ನೀರು ನುಗ್ಗಿದೆ. ಪರಿಸರದಲ್ಲಿ ಅನೇಕ ಮನೆಗಳಿದ್ದು, ಅಲ್ಲಿನ ನಿವಾಸಿಗಳು ಆತಂಕಿತರಾಗಿದ್ದಾರೆ. ಎರಡು ವರ್ಷಗಳ ಬಳಿಕ ತಾಲೂಕಿನ ನದಿಗಳು ಈ ಮಟ್ಟಿದಲ್ಲಿ ಉಕ್ಕಿ ಹರಿದಿದೆ.

Advertisement

ಮುಂಡಾಜೆಯಲ್ಲಿ ತೋಟಗಳಿಗೆ ನೀರು ನುಗ್ಗಿತ್ತು. ಚಾರ್ಮಾಡಿ ಫರ್ಲಾನಿ ಸಹಿತ ಹತ್ತಿರದ ಕಿಂಡಿ ಅಣೆಕಟ್ಟುಗಳು ಜಲಾವೃತವಾದವು. ಮಳೆ ತೀವ್ರತೆಗೆ ಕಿಂಡಿ ಅಣೆಕಟ್ಟುಗಳಲ್ಲಿ ವಿಪರೀತ ಮರದ ತ್ಯಾಜ್ಯಗಳು ಬಂದು ಸೇರಿವೆ. ಸಂಜೆಯವರೆಗೆ ಮಳೆ ನೀರು ಏರಿದ್ದರಿಂದ ಮುಂಡಾಜೆ ಸಮೀಪ ನದಿ ಬದಿಯ ಗದ್ದೆಗಳಿಗೆ ನೀರು ನುಗ್ಗಿದೆ. ಗುರುವಾರ ಬೆಳ್ತಂಗಡಿ ತಾಲೂಕಿನಲ್ಲಿ 100 ಮಿ.ಮೀ. ಮಳೆಯಾಗಿರುವ ವರದಿ ತಿಳಿದುಬಂದಿದೆ.

ಚಾರ್ಮಾಡಿಯಲ್ಲಿ ದಟ್ಟಣೆ
ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿದ ಸುದ್ದಿ ತಿಳಿದ ವಾಹನ ಸವಾರರು ಬೆಳ್ತಂಗಡಿ ಚಾರ್ಮಾಡಿ ಮಾರ್ಗವಾಗಿ ಸಂಚರಿಸುತ್ತಿದ್ದು, ವಾಹನ ದಟ್ಟಣೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next