Advertisement

ಬೆಳ್ತಂಗಡಿ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ?

04:47 PM Dec 02, 2017 | |

ಬೆಳ್ತಂಗಡಿ: ಮುಂದಿನ ಚುನಾವಣೆಯಲ್ಲಿ ರಾಜ್ಯ ಮಟ್ಟದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ತಾಲೂಕಿನಲ್ಲಿ ಅಂಥದೊಂದು ಸಾಧ್ಯತೆ ಕಂಡುಬಂದಿದೆ.

Advertisement

ಇದಕ್ಕೆ ಪುಷ್ಟಿ ನೀಡುವಂತೆ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷತೆ ಜೆಡಿಎಸ್‌ ಪಾಲಾಗಲಿದೆ. ಕಾಂಗ್ರೆಸ್‌ ಬೆಂಬಲಿತ ಬ್ಯಾಂಕ್‌ ಅಧ್ಯಕ್ಷರು ಬಹುಮತ ಇದ್ದರೂ ರಾಜೀನಾಮೆ ನೀಡಿ ಜೆಡಿಎಸ್‌ಗೆ ಅವಕಾಶ ನೀಡುವ ಗಳಿಗೆ ಬಂದಿದೆ. ಈ ಮೈತ್ರಿ ಲಕ್ಷಣ ಮುಂದಿನ ಚುನಾವಣೆಗೂ ಅನ್ವಯವಾಗು ತ್ತದೋ ಎಂಬ ಬಗ್ಗೆ ಪಕ್ಷದ ಮುಖಂಡರು ಪ್ರತಿಕ್ರಿಯಿಸುತ್ತಿಲ್ಲ.

ಪಿಎಲ್‌ಡಿ ಬ್ಯಾಂಕಿನಲ್ಲಿ ಒಟ್ಟು 13 ನಿರ್ದೇಶಕ ಸ್ಥಾನಗಳಿವೆ. 1 ನಾಮನಿರ್ದೇಶಿತ ನಿರ್ದೇಶಕರಿದ್ದಾರೆ. ಕಾಂಗ್ರೆಸ್‌ 7 ಸ್ಥಾನಗಳನ್ನು ಹೊಂದಿದ್ದು, ಜೆಡಿಎಸ್‌ 2 ಸ್ಥಾನ ಗಳಿಸಿದೆ. ನಾಲ್ಕು ಸ್ಥಾನ ಬಿಜೆಪಿಯದ್ದು. ಅಧ್ಯಕ್ಷ ಗಾದಿಗೆ ಚುನಾವಣೆ ನಡೆದಾಗ ಕಾಂಗ್ರೆಸ್‌ ಹಾಗೂ ಬಿಜೆಪಿ ಸ್ಪರ್ಧಿಸಿತ್ತು. ಕಾಂಗ್ರೆಸ್‌ಗೆ 9 ಮತ್ತು ಬಿಜೆಪಿಗೆ 3 ಮತಗಳು ಸಿಕ್ಕಿದ್ದವು. ಒಂದು ಕುಲಗೆಟ್ಟ ಮತ ವಾಗಿತ್ತು. ಬಹುಮತ ಹೊಂದಿದ್ದ ಕಾಂಗ್ರೆಸ್‌ಗೆ ಜೆಡಿಎಸ್‌ನ ಇಬ್ಬರ ಬೆಂಬಲ ಅನಾಯಾಸವಾಗಿ ಸಿಕ್ಕಿತ್ತು. ಹಾಗೆಂದು ಈ ಸಂದರ್ಭದಲ್ಲಿ ಜೆಡಿಎಸ್‌ ಜತೆ ಅಧಿಕಾರ ಹಂಚಿಕೆ ಕುರಿತು ಮಾತುಕತೆ ನಡೆದಿರಲಿಲ್ಲ ಎನ್ನಲಾಗಿದೆ. 

ಎಂಎಲ್‌ಎ ಅಭ್ಯರ್ಥಿಗೆ ಸ್ಥಾನ
ಜೆಡಿಎಸ್‌ನ ಎಂಎಲ್‌ಎ ಅಭ್ಯರ್ಥಿಯಾಗಿ ಹೊರ ಹೊಮ್ಮಿರುವ ಪ್ರವೀಣ್‌ ಚಂದ್ರ ಜೈನ್‌ ಅವರಿಗೆ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ದಕ್ಕಲಿದೆ ಎಂಬ ಮಾಹಿತಿ ಇದೆ. ಇವರನ್ನು ಹಾಗೂ ಜಗನ್ನಾಥ ಗೌಡರನ್ನು ಅಭ್ಯರ್ಥಿಯಾಗಿ ಪರಿಗಣಿಸಲು ತಾಲೂಕಿನಿಂದ ಪಕ್ಷದ ವರಿಷ್ಠರಿಗೆ ಶಿಫಾರಸು ಕಳುಹಿಸಲಾಗಿದೆ.

ಪ್ರವೀಣ್‌ಚಂದ್ರ ಈ ಹಿಂದೆ ವಿಧಾನಪರಿಷತ್‌ ಚುನಾವಣೆಗೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎದುರುಜೆಡಿಎಸ್‌ ಸ್ಪರ್ಧಿಸಲಿದೆ ಎಂಬ ಸುಳಿವು ನೀಡಲಾಗಿತ್ತು. ಹಾಗಿದ್ದರೂ ಪ್ರತಿಪಕ್ಷದ ಅಭ್ಯರ್ಥಿಗೆ ಮಣೆ ಹಾಕುವ ಪಕ್ಷದ ನಾಯಕರ ನಡೆ ಕಾರ್ಯಕರ್ತರಲ್ಲಿ ಸಣ್ಣ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Advertisement

ಮೂಲಗಳ ಪ್ರಕಾರ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಈಶ್ವರ ಭಟ್‌ ಎಂ. ಸೋಮವಾರ ರಾಜೀನಾಮೆ ನೀಡುವರು. ಬಳಿಕ ಪ್ರವೀಣ್‌ಚಂದ್ರ ಅಧ್ಯಕ್ಷರಾಗುವರು. ಈ ಬಗ್ಗೆ ಚರ್ಚಿಸಲು ಶನಿವಾರ ಶಾಸಕರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಪ್ರತಿಪಕ್ಷದವರಿಗೆ ಹುದ್ದೆ ಬಿಟ್ಟುಕೊಡಲು ಶಾಸಕರು ಒಪ್ಪುತ್ತಾರೆಯೇ ಎನ್ನುವುದು ಅಲ್ಲಿ ಖಚಿತವಾಗಲಿದೆ. ಏಕೆಂದರೆ ಕಾಂಗ್ರೆಸ್‌ನಿಂದ ಹಾಲಿ ಶಾಸಕರೇ ಹುರಿಯಾಳು ಎಂದು ಘೋಷಿಸಲಾಗಿದೆ.

ಒಂದು ಸ್ಥಾನ ಖೋತಾ
ಕಾಂಗ್ರೆಸ್‌ ಮೂಲಕ ಆಯ್ಕೆಯಾದ ನಿರ್ದೇಶಕರೊಬ್ಬರ ನಿರ್ದೇಶಕತ್ವ ರದ್ದಾಗಿದೆ ಎನ್ನಲಾಗಿದ್ದು, ಕಾಂಗ್ರೆಸ್‌ ಬಲ ಕುಂದಲಿದೆ. ನಿರ್ದೇಶಕರೇ ಸುಸ್ತಿದಾರರಾಗಿದ್ದಾರೆನ್ನಲಾಗಿದ್ದು, ಇದೇ ನಿರ್ದೇಶಕ ಸ್ಥಾನಕ್ಕೂ ಕುತ್ತು ತಂದಿತು ಎನ್ನಲಾಗಿದೆ.

ನನಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಜೆಡಿಎಸ್‌ ಕಾಂಗ್ರೆಸ್‌ ಹೊಂದಾಣಿಕೆ ಕುರಿತು ಯಾವುದೇ ಮಾತುಕತೆ ನನ್ನ ಉಪಸ್ಥಿತಿಯಲ್ಲಿ ನಡೆದಿಲ್ಲ.
ಕೆ. ಹರೀಶ್‌ ಕುಮಾರ್‌,
ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next