Advertisement

ಬೆಳ್ತಂಗಡಿಯಲ್ಲಿ  ಮೊದಲು ನಿಗದಿತ ಸ್ಥಳವೇ ಅಂತಿಮ

04:41 AM Dec 29, 2018 | Team Udayavani |

ಬೆಳ್ತಂಗಡಿ : ಕಳೆದ ಅವಧಿಯ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮೊದಲು ನಿಗದಿ ಪಡಿಸಲಾದ ಬಸ್‌ ನಿಲ್ದಾಣದ ಬಳಿಯ ಸ್ಥಳವನ್ನೇ  ಅಂತಿಮಗೊಳಿಸಲಾಗಿದೆ.

Advertisement

ಈ ಸ್ಥಳದ ಪಕ್ಕದಲ್ಲಿ ಶೌಚಾಲಯವಿದೆ ಎಂದು ಸಾರ್ವಜನಿಕರು ಆಕ್ಷೇಪವೆತ್ತಿದ್ದು, ಆದರೆ ನಗರದಲ್ಲಿ ಬೇರೆ ಸ್ಥಳ ಲಭ್ಯವಾಗದೇ ಇರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿಯವರು ಅದೇ ಸ್ಥಳವನ್ನು ನಿಗದಿಪಡಿಸಿದ್ದಾರೆ. ಮುಂದೆ ನಿಗದಿಯಂತೆ ಕ್ಯಾಂಟೀನ್‌ ಕಾಮಗಾರಿ ನಡೆದರೆ ಶೀಘ್ರದಲ್ಲಿ ಬೆಳ್ತಂಗಡಿಯ ಜನತೆಯೂ ಇಂದಿರಾ ಕ್ಯಾಂಟೀನ್‌ ಆಹಾರದ ರುಚಿಯನ್ನು ಸವಿಯಬಹುದಾಗಿದೆ.

ಈಗಾಗಲೇ ಮಂಗಳೂರು ನಗರ ಸಹಿತ ತಾ|ನಲ್ಲಿ 6 ಕ್ಯಾಂಟೀನ್‌ಗಳು ಕಾರ್ಯಾಚರಿಸುತ್ತಿದ್ದು, ಬಿ.ಸಿ. ರೋಡ್‌ನ‌ಲ್ಲಿ 1 ಕ್ಯಾಂಟೀನ್‌ ಕಾರ್ಯಾಚರಿಸುತ್ತಿದೆ. ಪುತ್ತೂರು, ಸುಳ್ಯದಲ್ಲಿ ಕ್ಯಾಂಟೀನ್‌ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಬೆಳ್ತಂಗಡಿಯಲ್ಲೇ ಕೊನೆಯದಾಗಿ ಕ್ಯಾಂಟೀನ್‌ ನಿರ್ಮಾಣದ ಕಾಮಗಾರಿ ಆರಂಭಗೊಳ್ಳಬೇಕಿದೆ.

ಜಿಎ ಶೀಟ್‌ ಗೋಡೆ: ಡಿಸಿ ಸೂಚನೆ
ಶೌಚಾಲಯದ ಪಕ್ಕದಲ್ಲೇ ಕ್ಯಾಂಟೀನ್‌ ನಿರ್ಮಾಣಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕ್ಯಾಂಟೀನ್‌, ಶೌಚಾಲಯ ಕಾಣದಂತೆ ಗೋಡೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯೆ ಜಿಎ ಶೀಟ್‌ ಮೂಲಕ ಅಡ್ಡ ಗೋಡೆ ನಿರ್ಮಾಣವಾಗಲಿದೆ. ಅದಕ್ಕಾಗಿ ಈಗಾಗಲೇ ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ. ಸುಮಾರು 15 ಮೀಟರ್‌ ಉದ್ದ ಹಾಗೂ 5 ಮೀಟರ್‌ ಎತ್ತರಕ್ಕೆ ಶೀಟ್‌ ಮೂಲಕ ಒಂದಕ್ಕೊಂದು ಕಾಣದಂತೆ ಶೀಟ್‌ ಅಡ್ಡವಾಗಲಿದೆ.

ಬೇರೆ ಸ್ಥಳ ವೀಕ್ಷಣೆ
ಕ್ಯಾಂಟೀನ್‌ ನಿರ್ಮಾಣಕ್ಕೆ ಗುರುತಿಸಲಾದ ಆರಂಭದ ಸ್ಥಳಕ್ಕೆ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ವಿ.ಪ. ಸದಸ್ಯ ಹರೀಶ್‌ಕುಮಾರ್‌, ಹಿಂದಿನ ತಹಶೀಲ್ದಾರ್‌ ಮದನ್‌ಮೋಹನ್‌ ಸಿ. ನೇತೃತ್ವದಲ್ಲಿ ಬೇರೆ ಸ್ಥಳ ಪರಿಶೀಲನೆಯಾಗಿತ್ತು. ಆದರೆ ಅಂದು ಯಾವುದೇ ಸ್ಥಳ ನಿಗದಿಯಾಗಿರಲಿಲ್ಲ.

Advertisement

ಮಾರ್ಕಿಂಗ್‌ ಪೂರ್ಣ
ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ರಾಜ್ಯವ್ಯಾಪಿ ಒಂದೇ ಖಾಸಗಿ ಸಂಸ್ಥೆಗೆ ಟೆಂಡರ್‌ ಆಗಿರುವುದರಿಂದ ನಿಗದಿಪಡಿಸಿದ 60×60 ಅಡಿ ನಿವೇಶನದಲ್ಲೇ ಕ್ಯಾಂಟೀನ್‌ ನಿರ್ಮಾಣವಾಗಲಿದೆ. ಅದಕ್ಕಿಂತ ಕಡಿಮೆ ಸ್ಥಳದಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಸಂಸ್ಥೆಯ ಅಧಿಕಾರಿಗಳು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಬೆಳ್ತಂಗಡಿ ನಗರದಲ್ಲಿ ಅಷ್ಟು ವಿಸ್ತೀರ್ಣವಾದ ಬೇರೆ ಸ್ಥಳ ಲಭ್ಯವಾಗದೇ ಇರುವುದರಿಂದ ಆರಂಭದಲ್ಲಿ ಗುರುತಿಸಲಾದ ಸ್ಥಳವನ್ನೇ ದ.ಕ. ಜಿಲ್ಲಾಧಿಕಾರಿ ಅಂತಿಮಗೊಳಿಸಿದ್ದಾರೆ. ಈಗಾಗಲೇ ನಿರ್ಮಾಣ ಸಂಸ್ಥೆಯವರು ಕಾಮಗಾರಿ ಆರಂಭಕ್ಕೆ ಮಾರ್ಕಿಂಗ್‌ ಕಾರ್ಯವನ್ನು ಪೂರ್ತಿಗೊಳಿಸಿದ್ದಾರೆ.

ಆರಂಭದ ಸ್ಥಳ ಅಂತಿಮ
ಆರಂಭದಲ್ಲಿ ಗುರುತಿಸಿದ್ದ ಬಸ್‌ನಿಲ್ದಾಣದ ಬಳಿ ಸ್ಥಳವನ್ನೇ ಅಂತಿಮಗೊಳಿಸಲಾಗಿದೆ. ಬೇರೆ ಯಾವುದೇ ಖಾಲಿ ಸ್ಥಳ ನಗರದಲ್ಲಿ ಲಭ್ಯವಿಲ್ಲ. ಇಲ್ಲದೇ ಇದ್ದಲ್ಲಿ ಕ್ಯಾಂಟೀನನ್ನೇ ರದ್ದುಗೊಳಿಸಬೇಕಾಗುತ್ತದೆ. ಮಾರ್ಕಿಂಗ್‌ ನಡೆಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಿ ಪೂರ್ತಿಗೊಳಿಸಲಾಗುವುದು.
ಪ್ರಸನ್ನ ವಿ.,
ಯೋಜನ ನಿರ್ದೇಶಕರು, ದ.ಕ. ಜಿಲ್ಲೆ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next