Advertisement

Belthangady ಪಾದಯಾತ್ರಿಗಳ ಪ್ರೀತಿ ನಿಷ್ಕಲ್ಮಷ: ಡಾ| ಹೆಗ್ಗಡೆ

11:33 PM Dec 08, 2023 | Team Udayavani |

ಬೆಳ್ತಂಗಡಿ: ಹೃದಯ ಪರಿವರ್ತನೆಯಾಗದ ವಿನಃ ಬೇರಾವ ಪರಿವರ್ತನೆ ಅಸಾಧ್ಯ. ತಾನು ಉತ್ತಮನೆನಿಸಲು ಮತ್ತೊಬ್ಬರನ್ನು ಕೆಟ್ಟವರಾಗಿಸಬೇಡಿ. ಸತ್ಕಾರ್ಯಗಳಿಗೆ ಸಾವಿರ ದಾರಿಗಳಿವೆ. ದೀಪೋತ್ಸವದ ಪರ್ವಕಾಲದಲ್ಲಿ ಜ್ಯೋತಿಗಳಂತೆ ಪಾದಯಾತ್ರಿಗಳು ಕ್ಷೇತ್ರಕ್ಕೆ ಆಗಮಿಸಿ ನಿಷ್ಕಲ್ಮಷ ಪ್ರೀತಿ ತೋರಿದ್ದೀರಿ, ನನ್ನ ಕಾಯವಿಲ್ಲದಿದ್ದರೂ ನಿಮ್ಮ ಪ್ರೀತಿ ನನ್ನೊಂದಿಗೆ ಉಳಿಯಲಿದೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಭಾವುಕ ನುಡಿಗಳನ್ನಾಡಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭ ಶುಕ್ರವಾರ ಶಿವನಾಮ ಸ್ಮರಣೆಯೊಂದಿಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಸಹಸ್ರಾರು ಭಕ್ತರನ್ನು ಅಭಿನಂದಿಸಿ ಅವರು ಮಾತನಾಡಿದರು.

ಉತ್ತಮ ಚಿಂತನೆ, ವಿಚಾರಗಳು ಬಂದಾಗ ವ್ಯಕ್ತಿತ್ವ ಪೂರ್ಣವಾಗುತ್ತದೆ. ಸತ್ಕಾರ್ಯಗಳಿಂದ ಲೋಕಕಲ್ಯಾಣದ ಜತೆಗೆ ಆಯುಸ್ಸು ವೃದ್ಧಿಯಾಗುತ್ತದೆ. ಹಾಗಾಗಿ ಕ್ಷೇತ್ರದಿಂದ ದೆವರು ನನಗೆ ನೀಡಿದ ಸತ್ಕಾರ್ಯದ ಅವಕಾಶವನ್ನೂ ನಾನು ಸದುಪಯೋಗಪಡಿಸಿದೆ. ಹಾಗಾಗಿ ಬೆಳ್ತಂಗಡಿ ಸಹಿತ ನಾಡಿನೆಲ್ಲೆಡೆ ಕ್ಷೇತ್ರದಿಂದ ಪರಿವರ್ತನೆಯಾಗಿದೆ. ಪಾದಯಾತ್ರೆ ಮೂಲಕ ಎಲ್ಲರೂ ನಿಮ್ಮ ಪ್ರೀತಿ-ವಿಶ್ವಾಸ, ಗೌರವ, ಭಕ್ತಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿರುವಿರಿ. ಇದರಿಂದ ನನ್ನಲ್ಲಿ ತೃಪ್ತಿ, ಸಂತೋಷ ಮತ್ತು ಧನ್ಯತಾಭಾವ ಮೂಡಿಬಂದಿದೆ ಎಂದರು.

ಪಾದಯಾತ್ರಿಗಳ ಭೀಷ್ಮ ಪ್ರತಿಜ್ಞೆ
ಪಾದಯಾತ್ರಿಗಳೆಲ್ಲ ಸಂಘಟನೆ ಮೂಲಕ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಗಾಗಿ ತಾವೆಲ್ಲರೂ ಧರ್ಮದೊಂದಿಗೆ, ಧರ್ಮಸ್ಥಳದ ಜತೆ ಹಾಗೂ ಧರ್ಮಾಧಿಕಾರಿ ಡಾ| ಹೆಗ್ಗಡೆಯವರ ಜತೆ ಸದಾ ಇದ್ದೇವೆ ಎಂದು ಸಾಮೂಹಿಕವಾಗಿ ದೃಢಸಂಕಲ್ಪದೊಂದಿಗೆ ಭೀಷ್ಮ ಪ್ರತಿಜ್ಞೆ ಮಾಡಿದರು.

ಹೇಮಾವತಿ ವೀ. ಹೆಗ್ಗಡೆಯವರು, ಶರತ್‌ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌ ವೇದಿಕೆಯಲ್ಲಿದ್ದರು. ಶ್ರದ್ಧಾ ಅಮಿತ್‌, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ನಿಶ್ಚಲ್‌ ಕುಮಾರ್‌, ಸೋನಿಯ ವರ್ಮ, ಪೂರನ್‌ ವರ್ಮ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್‌. ಸತೀಶ್ಚಂದ್ರ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Advertisement

ಹಿರಿಯ ನ್ಯಾಯವಾದಿ ಬಿ.ಕೆ. ಧನಂಜಯ ರಾವ್‌ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ವಂದಿಸಿದರು. ಶ್ರೀನಿವಾಸ ರಾವ್‌ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ಯೋಜನೆಯಿಂದ ಸಶಕ್ತೀಕರಣ
ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ ಪರಿವರ್ತನೆ ಜತೆಗೆ ಸಶಕ್ತೀಕರಣವಾಗಿದೆ. ಸಂಸದರ ನಿಧಿಯಿಂದ ತನಗೆ ಮಂಜೂರಾದ 2.50 ಕೋಟಿ ರೂ. ಅನುದಾನವನ್ನು ಬೀದರ್‌ ಜಿಲ್ಲೆಗೆ ನೀಡಲಾಗಿದೆ. ಅಲ್ಲಿ ದಿನವೊಂದಕ್ಕೆ 18 ಸಾವಿರ ಲೀಟರ್‌ ಇದ್ದ ಹಾಲಿನ ಉತ್ಪಾದನೆ 48 ಸಾವಿರ ಲೀಟರ್‌ಗೆ ತಲುಪಿದೆ. ಮೂರೇ ತಿಂಗಳಲ್ಲಿ ಲಕ್ಷ ಲೀಟರ್‌ ತಲುಪುವ ಮೂಲಕ ಕ್ಷೀರ ಕ್ರಾಂತಿಯಾಗಲಿದೆ ಎಂದು ಡಾ| ಹೆಗ್ಗಡೆ ತಿಳಿಸಿದರು.

ಇಂದು ಕೆರೆಕಟ್ಟೆ ಉತ್ಸವ
ಶುಕ್ರವಾರ ಹೊಸಕಟ್ಟೆ ಉತ್ಸವ ನೆರವೇರಿತು. ಡಿ. 9ರ ಬುಧವಾರ ಕೆರೆಕಟ್ಟೆ ಉತ್ಸವ ನೆರವೇರಲಿದೆ. ಬುಧವಾರ ಸಂಜೆ 6ರಿಂದ 10ರ ವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ನೃತ್ಯ ಸಿಂಚನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next