ಬೆಳ್ತಂಗಡಿ: ರಸ್ತೆ ದುರಸ್ತಿ ವಿಚಾರದಲ್ಲಿ ಸಂಬಂಧಿಕರೇ ಕತ್ತಿ, ದೊಣ್ಣೆಯಿಂದ ಹೊಡೆದಾಡಿಕೊಂಡು 7 ಮಂದಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರವಿವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ದೇರ್ಲಕ್ಕಿ ಸಮೀಪದ ಭೀಮಂಡೆಯಲ್ಲಿ 32 ವರ್ಷಗಳಿಂದ ರಸ್ತೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಾಗದ ತಕರಾರು ಇದ್ದು ಜೂ. 4ರಂದು ಬೆಳಗ್ಗೆ ಓಬಯ್ಯ ಗೌಡ (60), ಅವರ ತಮ್ಮಂದಿರಾದ ಕೃಷ್ಣಪ್ಪ ಗೌಡ (50), ಕೇಶವ ಗೌಡ (47) ಹಾಗೂ ಕೃಷ್ಣಪ್ಪ ಅವರ ಪತ್ನಿ ಭವಾನಿ (40) ಅವರು ಮನೆಗೆ ಹೋಗುವ ರಸ್ತೆಗೆ ಪಿಕಪ್‌ನಲ್ಲಿ ಚರಳು ತಂದು ಹಾಕಿ ದುರಸ್ತಿ ಮಾಡಲು ತೆರಳಿದ್ದರು.
ಈ ಸಂದರ್ಭ ಅವರ ಸಂಬಂಧಿಕರಾದ ಪೂವಪ್ಪ ಗೌಡ (70) ಅವರ ಪತ್ನಿ ಲಲಿತಾ (65) ಹಾಗೂ ಅವರ ಮಗ ವಿಜಯ ಗೌಡ (38) ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಲಲಿತಾ ಕಡೆಯವರು ಕತ್ತಿ, ದೊಣ್ಣೆ, ಹಾರೆ, ಕಲ್ಲುಗಳಿಂದ ಹಲ್ಲೆ ಮಾಡಿದರು ಎನ್ನಲಾಗಿದೆ. ಈ ವೇಳೆ ಎರಡು ತಂಡದ ನಡುವೆ ಹೊಡೆದಾಟ ನಡೆಯಿತು.
ಕೃಷ್ಣಪ್ಪ ಅವರ ಕೈಗೆ, ಸೊಂಟಕ್ಕೆ, ಓಬಯ್ಯ ಅವರಿಗೆ ತಲೆಗೆ, ಕೈ ಮತ್ತು ಬೆನ್ನಿಗೆ ಗಾಯಗಳಾಗಿವೆ. ಕೇಶವ ಅವರ ತಲೆಗೆ, ಭವಾನಿ ಅವರ ತಲೆ ಹಾಗೂ ಕೈಗೆ ಗಾಯಗಳಾಗಿದೆ.
Related Articles
ಇನ್ನೊಂದು ತಂಡದ ಪೂವಪ್ಪ ಗೌಡ (75) ಲಲಿತಾ (65) ವಿಜಯ ಗೌಡ (38) ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎರಡೂ ತಂಡದ ಏಳು ಮಂದಿ ಗಾಯಗೊಂಡವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಎರಡೂ ಕಡೆಯ ವರು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.