Advertisement

ಶಾಶ್ವತ ಪುನರ್ವಸತಿಗೆ ರಾಜ್ಯದಲ್ಲೇ ಮೊದಲ ಹೆಜ್ಜೆ: ಪೂಂಜಾ

11:07 PM Sep 24, 2019 | mahesh |

ಬೆಳ್ತಂಗಡಿ: ತಾಲೂಕಿನಲ್ಲಿ ನೆರೆಯಿಂದ ವಸತಿ ಕಳೆದುಕೊಂಡವರಿಗೆ ಶಾಶ್ವತ ಮನೆ ನಿರ್ಮಿಸಲು ಸರಕಾರ ಬದ್ಧ. ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ಕಾನೂನು ಸಡಿಲಗೊಳಿಸಿ ರಾಜ್ಯದಲ್ಲೇ ಮೊದಲ ಬಾರಿಗೆ ಇಲ್ಲಿ ಕಾಮಗಾರಿಗೆ ಮುಂಗಡ ನೀಡಲಾಗುತ್ತಿದೆ ಎಂದು ಶಾಸಕ ಹರೀಶ್‌ ಪೂಂಜಾ ತಿಳಿಸಿದರು.

Advertisement

ಸಂತೆಕಟ್ಟೆ ಸಮೀಪದ ಮಂಜುನಾಥ ಕಲಾಭವನದಲ್ಲಿ ಮಂಗಳವಾರ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮ- 2019ರಡಿ ಮನೆ ಮಂಜೂರಾದವರಿಗೆ ಕಾಮಗಾರಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ನೆರೆಯಿಂದ 170 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. 257 ಮನೆಗಳ ಪುನರ್ವಸತಿ ಕಾಮಗಾರಿಗೆ ಮುಂದಡಿ ಇಡಲಾಗಿದೆ. ಮನೆ ನಿರ್ಮಾಣಕ್ಕೆ ಆರಂಭದಲ್ಲಿ 1 ಲಕ್ಷ ರೂ. ಬಿಡುಗಡೆ ಮಾಡಿದ್ದು, ಬಳಿಕ ಒಟ್ಟು 5 ಲಕ್ಷ ರೂ. ನೀಡಲಾಗುತ್ತದೆ ಎಂದರು.

ಉದ್ಯಮಿಗಳಿಂದ ನೆರವು
ಕೊಳಂಬೆ ಮತ್ತು ಇತರ ಕಡೆ ಉದ್ಯಮಿಗಳಾದ ರಾಜೇಶ್‌ ಪೈ ಮತ್ತು ಮೋಹನ್‌ ಉಜಿರೆ ತಂಡವು ಸಂತ್ರಸ್ತರ ನೆರವಿಗೆ ಅಭೂತಪೂರ್ವವಾಗಿ ಸ್ಪಂದಿಸಿದೆ ಮನೆ ನಿರ್ಮಾಣಕ್ಕೂ ನೆರವು ಪಡೆಯಲಾಗುವುದು ಎಂದರು.

ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸೆಬಾಸ್ಟಿಯನ್‌, ಜಿ.ಪಂ. ಸದಸ್ಯರಾದ ಸೌಮ್ಯಲತಾ ಜಯಂತ್‌ ಗೌಡ, ನಮಿತಾ, ತಾ.ಪಂ. ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಜಯರಾಮ್‌, ಗಣೇಶ್‌ ಆಚಾರ್ಯ ಮತ್ತು ನೆರೆ ಸಂತ್ರಸ್ತ 17 ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು. ಪಿಡಿಒಗಳು ಸಂತ್ರಸ್ತರ ಮಾಹಿತಿ ನೀಡಿದರು. ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಇ. ಜಯರಾಮ್‌ ಸ್ವಾಗತಿಸಿ, ತಾ.ಪಂ. ಸಂಯೋಜಕ ಜಯನಂದ್‌ ಲಾೖಲ ವಂದಿಸಿದರು. ಉಜಿರೆ ಪಿಡಿಒ ಪ್ರಕಾಶ್‌ ಶೆಟ್ಟಿ ನೊಚ್ಚ ನಿರೂಪಿಸಿದರು.

ಮಕ್ಕಿ ಮಂದಿ ಸ್ಥಳಾಂತರ ಚಿಂತನೆ
ಮಿತ್ತಬಾಗಿಲು ಗ್ರಾಮದ ಮಕ್ಕಿ ಪ್ರದೇಶದ ನಿವಾಸಿಗಳ ಭೂಮಿ ಕಂದಾಯ ಇಲಾಖೆಗೆ ಸೇರಿದ್ದು, ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಸೂಕ್ತ ಪರಿಹಾರ ನೀಡಿ ಅವರನ್ನು ಸ್ಥಳಾಂತರಿಸುವ ಚಿಂತನೆ ಇದೆ. ಗಣೇಶ ನಗರದ 32 ಕುಟುಂಬಗಳನ್ನೂ ಸ್ಥಳಾಂತರಿಸಿ ಬದಲಿ ನಿವೇಶನ ಮತ್ತು ಮನೆ ಮಂಜೂರಾತಿಗೆ ಪ್ರಯತ್ನಿಸಲಾಗುತ್ತಿದೆ. ಹಾನಿಗೊಳಗಾದ ಹೊಳೆ ಬದಿಯ ಕೆಲವು ಮನೆಗಳು ಮತ್ತು ಜಮೀನುಗಳವರು ಪಟ್ಟಿಯಲ್ಲಿ ಹೆಸರು ತಪ್ಪಿಹೋಗಿದ್ದರೆ ತನ್ನ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಶಾಸಕರು ತಿಳಿಸಿದರು.

Advertisement

ಪ್ರಮಾಣ ಪತ್ರ ಪಡೆದವರು
ಬಂದಾರು, ಚಾರ್ಮಾಡಿ, ಬೆಳಾಲು, ಧರ್ಮಸ್ಥಳ, ಇಂದಬೆಟ್ಟು, ಕಡಿರುದ್ಯಾವರ, ಕಳೆಂಜ, ಲಾೖಲ, ಮಲವಂತಿಗೆ, ಮಿತ್ತಬಾಗಿಲು, ಮುಂಡಾಜೆ, ನಡ, ನಾವೂರ, ನೆರಿಯ, ಕಲ್ಮಂಜ (ನಿಡಿಗಲ್‌), ಪಟ್ರಮೆ ಮತ್ತು ಪುದುವೆಟ್ಟು ಗ್ರಾಮಗಳಲ್ಲಿ ಒಟ್ಟು 257 ಮನೆಗಳು ಹಾನಿಗೀಡಾಗಿದ್ದು, 250 ಮಂದಿಗೆ ಆದೇಶಪತ್ರ ನೀಡಲಾಯಿತು. ಇದರಲ್ಲಿ ಸಂಪೂರ್ಣ ಹಾನಿಯ 170, ಗಂಭೀರ ಹಾನಿಯ 54, ಭಾಗಶಃ ಹಾನಿಯ 33 ಮನೆಗಳು ಸೇರಿವೆ.

ಮನೆ ನಿರ್ಮಾಣಕ್ಕೆ ಕಾಳಜಿ ರಿಲೀಫ್‌ ಫಂಡ್‌ ವಿನಿಯೋಗ ಬೆಳ್ತಂಗಡಿ ಕಾಳಜಿ ರಿಲೀಫ್ ಫಂಡ್‌ಗೆ ದಾನಿಗಳು ಮತ್ತು ಉದ್ಯಮಿಗಳು ನೀಡಿದ ಆರ್ಥಿಕ ಸಹಾಯವನ್ನು ಮನೆ ನಿರ್ಮಾಣಕ್ಕಾಗಿ ಸಂಪೂರ್ಣ ವಿನಿಯೋಗಿಸಲಾಗುವುದು ಎಂದು ಶಾಸಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next