Advertisement

ಬೆಳ್ತಂಗಡಿ ಕ್ಷೇತ್ರ: ಖರ್ಚು-ವೆಚ್ಚಗಳ ಚುನಾವಣ ವೀಕ್ಷಕರ ಭೇಟಿ; ಪರಿಶೀಲನೆ

10:43 AM Apr 04, 2019 | Team Udayavani |

ಬೆಳ್ತಂಗಡಿ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿರುವ ಬೆಳ್ತಂಗಡಿ ಕ್ಷೇತ್ರದ ಚುನಾವಣ ಕಚೇರಿಗೆ ಬುಧವಾರ ಖರ್ಚು-ವೆಚ್ಚಗಳ ಚುನಾವಣ ವೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಕೀಯ ಪಕ್ಷಗಳು ನಡೆಸುವ ಖರ್ಚು-ವೆಚ್ಚಗಳ ಮೇಲೆ ನಿಗಾ ಇಡುವ ಸಲುವಾಗಿ ಚುನಾವಣ ಆಯೋಗದಿಂದ ನೀಯೋಜಿಸಲ್ಪಟ್ಟಿರುವ ಖರ್ಚು- ವೆಚ್ಚಗಳ ಚುನಾವಣ ವೀಕ್ಷಕ ಸುದಿಪ್ತಾ ಗುಹಾ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾರ್ಯ ನಿರ್ವಹಣೆ ಕುರಿತು ಮೆಚ್ಚುಗೆ ವಕ್ತಪಡಿಸಿದರು. ಎಫ್‌ಎಸ್‌ಟಿ, ಎಸ್‌ಎಸ್‌ಟಿ, ವಿಎಸ್‌ಟಿ, ವಿವಿಟಿಗಳ ಜತೆ ಮಾತುಕತೆ ನಡೆಸಿದರು. ಕಚೇರಿಯಲ್ಲಿ ಖರ್ಚು-ವೆಚ್ಚಗಳ ಕುರಿತು ಹೇಗೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ತಾಲೂಕಿನ ಚಾರ್ಮಾಡಿ ಚೆಕ್‌ಫೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಬೆಳ್ತಂಗಡಿ ಸಹಾಯಕ ಚುನಾವಣಾಧಿಕಾರಿ ಎಚ್‌.ಆರ್‌. ನಾಯಕ್‌, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್‌ ಬಿ., ಎಆರ್‌ಒ ಸಹಾಯಕ ಸುಭಾಸ್‌ ಜಾಧವ್‌ ಮೊದಲಾದ ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.

Advertisement

ಜಿಲ್ಲಾಧಿಕಾರಿಯಿದ ಅನುಮತಿ
ಪಕ್ಷಗಳಿಗೆ ಹೆಚ್ಚಿನ ವಾಹನಗಳಿಗೆ ಪರವಾನಿಗೆ ಪಡೆಯುವುದಕ್ಕೆ ಅವಕಾಶ ವಿದ್ದರೂ ಅಭ್ಯರ್ಥಿಯ ಖರ್ಚು-ವೆಚ್ಚಗಳು 70 ಲಕ್ಷ ರೂ.ಗಳಿಗಿಂತ ಒಳಗಿರಬೇಕಾದ ಕಾರಣ ಹೆಚ್ಚಿನ ವಾಹನದ ಅನುಮತಿ ಪಡೆಯುತ್ತಿಲ್ಲ. ಜತೆಗೆ ನಮಗೆ ತಾಲೂಕಿನ ಒಳಗಡೆ ಮಾತ್ರ ಪರವಾನಿಗೆ ನೀಡುವುದಕ್ಕೆ ಅವಕಾಶವಿದ್ದು, ರೇಟ್‌ ಲಿಸ್ಟ್‌ ನೋಡಿ ಅದರ ಖರ್ಚನ್ನು ಹಾಕಲಾಗುತ್ತದೆ. ಜಿಲ್ಲೆಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಎಆರ್‌ಒ ಎಚ್‌.ಆರ್‌. ನಾಯಕ್‌ ತಿಳಿಸಿದ್ದಾರೆ.
ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ.
ಚುನಾವಣ ಸಿಬಂದಿಗೆ ಎ. 9ರಂದು ಎರಡನೇ ಹಂತದ ತರಬೇತಿ ನಡೆಯಲಿದೆ. ಜಿಲ್ಲಾಧಿಕಾರಿಯಿಂದ ಆದೇಶ ಬಂದ ಬಳಿಕ ಇವಿಎಂ ಯಂತ್ರಗಳ ಜೋಡಣ ಕಾರ್ಯ ನಡೆಯಲಿದೆ ಎಂದು ಎಆರ್‌ಒ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಒಂದು ಪ್ರಕರಣ ದಾಖಲು
ಚುನಾವಣ ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಬುಧವಾರದವರೆಗೆ ಬೆಳ್ತಂಗಡಿ ಕ್ಷೇತ್ರದಲ್ಲಿ ಈವರೆಗೆ ಕೇವಲ ಒಂದು ಪ್ರಕರಣ ಮಾತ್ರ ದಾಖಲಾಗಿದ್ದು, ರಾಜಕೀಯ ಪಕ್ಷಗಳು ಶಿಸ್ತಿನ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ತಾಲೂಕಿನಲ್ಲಿ ರಾಜಕೀಯ ಪಕ್ಷಗಳಿಗೆ ಒಟ್ಟು ಈವರೆಗೆ  6 ವಾಹನಗಳಿಗೆ ಮಾತ್ರ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next