Advertisement

Belthangady ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷ

11:11 PM Dec 03, 2023 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಬಣಕಲ್‌ ಘಾಟಿಯ 3ನೇ ತಿರುವಿನಲ್ಲಿ ಒಂಟಿ ಸಲಗವೊಂದು ರವಿವಾರ ಸಂಜೆ ವಾಹನ ಸವಾರರಿಗೆ ಪ್ರತ್ಯಕ್ಷವಾಗಿದ್ದರಿಂದ ಸವಾರರು ಭಯಭೀತರಾದ ಘಟನೆ ನಡೆದಿದೆ.

Advertisement

ಘಾಟಿಯ 3ನೇ ತಿರುವಿನಲ್ಲಿ ಸಂಜೆ ಒಂಟಿ ಸಲಗವೊಂದು ರಸ್ತೆಗೆ ದಾಟಲು ಮುಂದಾಗಿದೆ. ಇದರಿಂದ ಘಾಟ್‌ ರಸ್ತೆಯಲ್ಲಿ ವಾಹನಗಳು ಸರತಿ ಸಾಲುಗಟ್ಟಿ ನಿಂತಿದ್ದವು. ಒಂಟಿ ಸಲಗವು ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲೇ ಇದ್ದು ಅನಂತರ ತಿರುವಿನಲ್ಲಿ ಅರಣ್ಯಕ್ಕೆ ಸಾಗಿದ್ದು ವಾಹನ ಸವಾರರು ಕಾಡಾನೆಯ ವೀಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ಆದರೆ ವಾಹನ ಸವಾರರಿಗೆ ಯಾವುದೇ ತೊಂದರೆ ಉಂಟು ಮಾಡಿಲ್ಲ. ಪ್ರತಿ ಬಾರಿ ಚಾರ್ಮಾಡಿ ರಸ್ತೆಯಲ್ಲಿ ಈ ಆನೆ ಆಗಾಗ ಕಂಡುಬರುತ್ತಿರುವುದರಿಂದ ವಾಹನ ಸವಾರರು, ದ್ವಿಚಕ್ರ ಸವಾರರು ಒಂಟಿ ಸಲಗದ ಭೀತಿಯಲ್ಲೇ ಸಾಗಬೇಕಿದೆ. ತಿರುವು ರಸ್ತೆಯಲ್ಲಿ ವಾಹನ ಸವಾರರು ಸಾಗುವುದೇ ಅಪಾಯಕರವಾಗಿದ್ದು, ಈ ಮಧ್ಯೆ ಕಾಡಾನೆಗಳು ಎದುರಾದರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಮುನ್ನೆಚ್ಚರಿಕೆಯಾಗಿ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಘಾಟ್‌ ರಸ್ತೆ ಇಕ್ಕೆಲಗಳಲ್ಲಿ ತಡೆಬೇಲಿ ರಚಿಸಿದರೆ ಮುಂದೆ ಸಂಭವನೀಯ ಜೀವ ಹಾನಿ ತಪ್ಪಿಸಬಹುದಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೂರು ಬಾರಿ ಸಿಕ್ಕ ಒಂಟಿ ಸಲಗ
ಕಳೆದ ನ.27ರಂದು ನೆರಿಯದಲ್ಲಿ ಒಂಟಿಸಲಗವೊಂದು ಕಾರಿನ ಮೇಲೆ ದಾಳಿ ಮಾಡಿ ಮೂವರಿಗೆ ಗಾಯಗೊಳಿಸಿತ್ತು. ಇದಾದ ಬೆನ್ನಲ್ಲೆ ನ.29ರಂದು ಒಂಟಿ ಸಲಗ ಶಿಶಿಲ ಪೇಟೆಯಲ್ಲಿ ಶಿರಾಡಿ ಕಡೆ ಸಂಚರಿಸುತ್ತಿರುವಾಗ ವಾಹನ ಸವಾರರಿಗೆ ಎದುರಾಗಿತ್ತು. ಇದೀಗ ವಾರಗಳ ಅಂತರದಲ್ಲಿ ಮೂರನೇ ಬಾರಿ ಒಂಟಿ ಸಲಗ ಪ್ರತ್ಯೇಕ ಮೂರು ಕಡೆಗಳಲ್ಲಿ ಕಾಣಸಿಕ್ಕಿ ಸವಾರರನ್ನು ಭಯದಲ್ಲಿ ಸಂಚರಿಸುವಂತೆ ಮಾಡಿದೆ.

ಐತ್ತೂರಿನಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ
ಕಡಬ: ಕಡಬ ತಾಲೂಕಿನ ಬಹುತೇಕ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿದೆ. ಆನೆ ಹಾವಳಿಯಿಂದ ಕಂಗಾಲಾಗಿರುವ ಐತ್ತೂರು ಗ್ರಾಮದಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷವಾಗಿ ಗ್ರಾಮಸ್ಥರ ನಿದ್ದೆಗೆಡಿಸಿದೆ.
ಗ್ರಾಮದ ಕುದ್ರಡ್ಕ ಸಮೀಪ ಕೃಷಿಕರ ತೋಟವೊಂದರಲ್ಲಿ ಕಾಡಾನೆ ಸಂಚರಿಸುತ್ತಿರುವುದು ಕಂಡುಬಂದಿದೆ.

Advertisement

ಕಳೆದ ಕೆಲವು ತಿಂಗಳುಗಳ ಹಿಂದೆ ತಾಲೂಕಿನ ರೆಂಜಿಲಾಡಿಯಲ್ಲಿ ಕಾಡಾನೆ ಇಬ್ಬರನ್ನು ಕೊಂದು ಹಾಕಿತ್ತು. ಅದಕ್ಕೂ ಮೊದಲು ಶಿರಾಡಿಯಲ್ಲಿ ಒಬ್ಬ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದರು. ಐತ್ತೂರು ಗ್ರಾಮದಲ್ಲೂ ಕಾಡಾನೆ ತುಳಿದು ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೆ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದರು.

ಕಾಡಾನೆ ನಿಯಂತ್ರಣಗೊಳಿಸುವಂತೆ ಕಡಬದಲ್ಲಿ ಪ್ರತಿಭಟನೆಗಳು ನಡೆದಿತ್ತು. ಸರಕಾರ ಕ್ರಮ ಜರುಗಿಸುವಂತೆ ಆಗ್ರಹ ಕೇಳಿ ಬಂದಿತ್ತು. ಆದರೆ ಆನೆಗಳ ಹಾವಳಿ ಮುಂದುವರಿದಿದ್ದು, ಅರಣ್ಯದಂಚಿನ ಭಾಗದ ಗ್ರಾಮಗಳಲ್ಲಿ ಕಾಡಾನೆಗಳು ಕೃಷಿ ತೋಟಕ್ಕೆ ನುಗ್ಗಿ ಕೃಷಿ ನಾಶಕ್ಕೆ ಕಾರಣವಾಗುತ್ತಿದೆ. ಪರಿಸರದ ಜನರು ಆತಂಕದಲ್ಲೇ ಬದುಕುವಂತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next