Advertisement

ಬೆಳ್ತಂಗಡಿ : ಬಿಕೋ ಎನ್ನುತ್ತಿದೆ ಶತಾಯುಷಿ ತಾಲೂಕು ಕಟ್ಟಡ

11:25 AM Apr 04, 2018 | |

ಬೆಳ್ತಂಗಡಿ: ಬಹುರೂಪಗಳಲ್ಲಿ ಬೆಳ್ತಂಗಡಿ ತಾಲೂಕಿನ ಜನರಿಗೆ ಉಪಯೋಗವಾಗುತ್ತಿದ್ದ ಶತಮಾನದ ತಾ| ಕಚೇರಿ ಕಟ್ಟಡ ಈಗ ಬಿಕೋ ಎನ್ನುತ್ತಿದೆ. 1918ರಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ವಿವಿಧ ಇಲಾಖೆಗಳನ್ನು ಮಿನಿ ವಿಧಾನಸೌಧ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಹಳೆ ಕಟ್ಟಡದ ಕತೆ ಮುಂದೇನು ಎಂಬ ಪ್ರಶ್ನೆ ಮೂಡಿದೆ.

Advertisement

1904ರಿಂದ ಬೆಳ್ತಂಗಡಿ ಉಪ ತಾಲೂಕಾಗಿ ಕಾರ್ಯಚಟುವಟಿಕೆ ಆರಂಭ ಆಗಿರುವುದು ಕಡತಗಳಲ್ಲಿ ತಿಳಿದು ಬರುತ್ತದೆ. ತಾಲೂಕಿನ ಕಡತಗಳಲ್ಲಿ 1904ರಲ್ಲಿ ಉಪ ತಾಲೂಕಿನ ಉಲ್ಲೇಖ ವಿದ್ದು, ಬೆಳ್ತಂಗಡಿಯಲ್ಲಿಯೇ ಈ ಕಡತಗಳು ಲಭಿಸಿವೆ. ಈ ವೇಳೆ ಸರ್ವೆ ನಡೆಸಿದ ಉಲ್ಲೇಖಗಳೂ ಕಡತಗಳಲ್ಲಿವೆ.

ಉಪ್ಪಿನಂಗಡಿ ತಾಲೂಕು
ಬ್ರಿಟೀಷರ ಕಾಲದಲ್ಲಿ ಪ್ರಮುಖ ಆಡಳಿತ ನಿರ್ವ ಹಣ ಕೇಂದ್ರವಾಗಿದ್ದ ಉಪ್ಪಿನಂಗಡಿ ತಾ| ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸರಕು ಸಾಗಾಟ ಕೇಂದ್ರವಾಗಿದ್ದ ಮಂಗಳೂರಿನಿಂದ ದೋಣಿ ಮೂಲಕ ಉಪ್ಪುನ್ನು ಇತರೆಡೆಗೆ ಸಾಗಿಸಲಾಗುತ್ತಿತ್ತು. ಅದೇ ರೀತಿ ಭತ್ತವನ್ನು ಮಂಗಳೂರಿಗೆ ಸಾಗಿಸಲಾ ಗುತ್ತಿತ್ತು. ಆದ್ದರಿಂದ ಉಪ್ಪಿ ನಂಗಡಿಗೆ ತುಳುವಿನಲ್ಲಿ ಉಬಾರ್‌ (ಉಪ್ಪು, ಬಾರ್‌) ಹೆಸರು ಬಂತು ಎಂಬ ಅಭಿಪ್ರಾಯವಿದೆ.

ಈ ವೇಳೆ ಮಂಗಳೂರು – ಪುತ್ತೂರು – ಮೈಸೂರು ಹೆದ್ದಾರಿಯಿದ್ದು, ಆಡಳಿತವನ್ನು ಸಮಗ್ರವಾಗಿ ನಿರ್ವಹಿಸಲು ತಾ| ಕೇಂದ್ರವಾಗಿ ಪುತ್ತೂರನ್ನು ಮಾಡಲಾಯಿತು. ಉಪ್ಪಿನಂಗಡಿಯಲ್ಲಿ ನೆರೆ ಬಂದು ಮಲೇರಿಯ ವ್ಯಾಪಿಸಿ, ನಿರ್ವಹಣೆ ಕಾರಣಕ್ಕಾಗಿ ತಾಲೂಕು ಕೇಂದ್ರವನ್ನು ಬದಲಾಯಿಸಲಾಗಿತ್ತು.

ಉಪ ತಾ|ನಲ್ಲಿ 186 ಗ್ರಾಮ
ಬೆಳ್ತಂಗಡಿ ಉಪತಾಲೂಕಿನಲ್ಲಿ ಸುಮಾರು 186 ಗ್ರಾಮಗಳು ಇದ್ದವು. 1924 – 25ರ ಸುಮಾರಿಗೆ ಪುತ್ತೂರು ತಾ| ಅಸ್ತಿತ್ವಕ್ಕೆ ಬಂದಿದೆ. ಆಗಲೂ ಬೆಳ್ತಂಗಡಿ ಉಪ ತಾಲೂಕಾಗಿಯೇ ಕಾರ್ಯ ನಿರ್ವಹಿಸುತಿತ್ತು.

Advertisement

ದೋಣಿ ಮೂಲಕ ಸಂಪರ್ಕ
ಬೆಳ್ತಂಗಡಿ ಉಪ ತಾಲೂಕಾಗಿದ್ದು, ಬೆಳ್ತಂಗಡಿ ಸಂಪರ್ಕಿಸಲು ದೋಣಿಯನ್ನು ಬಳಸಲಾಗುತ್ತಿತ್ತು. ಆರಂಭದಲ್ಲಿ ಕುಮಾರಧಾರ ನದಿಗೆ ಸೇತುವೆಯಿದ್ದುದರಿಂದ ವಸ್ತುಗಳನ್ನು ರಸ್ತೆ ಮೂಲಕ ಸಾಗಿಸಬೇಕಿದ್ದಲ್ಲಿ ಬಂಟ್ವಾಳ ಮೂಲಕ ಬೆಳ್ತಂಗಡಿಗೆ ಆಗಮಿಸಬೇಕಾಗಿತ್ತು. ಸುಮಾರು 1960ರ ವೇಳೆಗೆ ಉಪ್ಪಿನಂಗಡಿ – ಬೆಳ್ತಂಗಡಿ ಸಂಪರ್ಕ ಸೇತುವೆ ನಿರ್ಮಾಣವಾಗಿದೆ.

ತಾಲೂಕಾಗಿ ಘೋಷಣೆ
ಬೆಳ್ತಂಗಡಿಯನ್ನು 1954ಕ್ಕೆ ತಾಲೂಕಾಗಿ ಘೋಷಣೆ ಮಾಡಲಾಯಿತು. ಬಳಿಕ ನವೀಕರಣ ಕಾರ್ಯ ನಡೆಸಿ ಕಚೇರಿ ಬಳಕೆಗೆ ಬೇಕಾದಂತೆ ಕಟ್ಟಡವನ್ನು ಬದಲಾಯಿಸಲಾಗಿದೆ.ತಾ| ಕಚೇರಿ ಕಟ್ಟಡವನ್ನು ಕಂದಾಯ ಇಲಾಖೆ ನಿರ್ವಹಣೆ ಮಾಡುತ್ತಿದೆ.

ಉಪನೋಂದಣಾಧಿಕಾರಿ ಕಚೇರಿ ನೆಲಸಮ
ತಾ| ಕಚೇರಿ ಸಮೀಪದಲ್ಲೇ ಇದ್ದ ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ 1876ರಿಂದ ಕಾರ್ಯನಿರ್ವಹಿಸುತ್ತಿತ್ತು. ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಉದ್ದೇಶದಿಂದ ಈ ಕಚೇರಿಯನ್ನು ನೆಲಸಮ ಮಾಡಲಾಗಿತ್ತು. ತಾ| ಕಟ್ಟಡದಲ್ಲಿ ಸದ್ಯ ಉಪ ಖಜಾನೆ, ಬಳಿಯ ಕಟ್ಟಡದಲ್ಲಿ ಭೂಮಿ ಕೇಂದ್ರ ಕಾರ್ಯಾಚರಿಸುತ್ತಿವೆ.

ಬಂಧೀಖಾನೆಯಾಗಿದ್ದ ಕಟ್ಟಡ 
ಬೆಳ್ತಂಗಡಿ ಉಪ ತಾಲೂಕಾಗಿದ್ದ ಸಂದರ್ಭ ಈ ಕಟ್ಟಡ ಸಬ್‌ಜೈಲಾಗಿತ್ತು. ಕಟ್ಟಡದಲ್ಲಿ ಕೈದಿಗಳನ್ನು ಕೂಡಿ ಹಾಕಲು ಬಂಧೀಖಾನೆಯನ್ನೂ ನಿರ್ಮಿಸಲಾಗಿತ್ತು. ಡೆಪ್ಯುಟಿ ತಹಶೀಲ್ದಾರ್‌ ಉಪ ತಾಲೂಕಿನ ಕಾರ್ಯಚಟುವಟಿಕೆ ನಿಯಂತ್ರಿಸುವ ಜವಾಬ್ದಾರಿ ಹೊತ್ತಿದ್ದರು.

ಸಬ್‌ಕೋರ್ಟ್‌
ಕಚೇರಿ ಸಬ್‌ಕೋರ್ಟ್‌ ಆಗಿದ್ದು, ಪುತ್ತೂರು ಸಬ್‌ ಡಿವಿಜನಲ್‌ ಮೆಜಿಸ್ಟ್ರೇಟ್‌ ಆಗಿ ಕಾರ್ಯನಿರ್ವಹಿಸುತ್ತಿತ್ತು. ಕಚೇರಿಯೊಳಗಿನ ಕಟಕಟೆ ತಾಲೂಕು ರಚನೆ ಬಳಿಕವೂ ಇತ್ತು. ಕಟ್ಟಡ ನವೀಕರಣ ವೇಳೆ ಇದನ್ನು ತೆಗೆದು ಸಭಾಂಗಣ ಮಾಡಲಾಗಿದೆ.

ಗರಿಷ್ಠ ಭದ್ರತೆ
ಕಟ್ಟಡದಲ್ಲಿ ಬಂಧೀಖಾನೆ ಇದ್ದುದರಿಂದ, ಗರಿಷ್ಠ ಭದ್ರತೆ ನೀಡಲಾಗಿತ್ತು. ಗೋಡೆಯನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿತ್ತು. ಕಬ್ಬಿಣದ ಸೆಲ್‌ಗ‌ಳೂ ಇದ್ದವು. ಕಟ್ಟಡದಲ್ಲಿ ಉಪಖಜಾನೆಯಿದ್ದು, ಕಬ್ಬಿಣದ ರ್ಯಾಕ್‌ ಗಳಿವೆ. ಕಾಂಕ್ರೀಟ್‌ ಕಾಮಗಾರಿ ನಡೆಸಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ವಿಭಿನ್ನ ಲಾಕಿಂಗ್‌ ವಿನ್ಯಾಸ
ತಾ| ಕಚೇರಿ ಉಪ ಖಜಾನೆಯಲ್ಲಿ ಈಗಲೂ ಸೆಲ್‌ಗ‌ಳಿವೆ. ಬ್ರಿಟೀಷರ ಕಾಲದ ಲಾಕಿಂಗ್‌ ವಿನ್ಯಾಸ ಹೊಂದಿದ್ದು, ಸುತ್ತ ಕಬ್ಬಿಣದ ಪಟ್ಟಿಗಳನ್ನು ಹೊಂದಿವೆ. ಗೋಡೆ ಕೊರೆದು ಪ್ರತ್ಯೇಕವಾಗಿ ಬೀಗ ಹಾಕಲು ಸ್ಥಳಾವಕಾಶ ಇಡಲಾಗಿದೆ.

ಖಾಸಗಿ ಕಟ್ಟಡದಲ್ಲಿರುವ ಇಲಾಖೆಗಳು ಬರಲಿ
ಮಿನಿ ವಿಧಾನಸೌಧ ನಿರ್ಮಾಣವಾಗಿದ್ದರೂ ರೆಕಾರ್ಡ್‌ ರೂಂ ನಿರ್ವಹಿಸಲು ಸ್ಥಳಾವಕಾಶದ ಕೊರತೆ ಎದುರಾಗಲಿದೆ. ಈಗಾಗಲೇ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳಿಗೆ ತಾಲೂಕು ಕಚೇರಿ ಕಟ್ಟಡ ನೀಡಬೇಕಿದೆ.
– ವೈ.ಪಿ. ಶೆಣೈ
ನಿವೃತ್ತ ಸರಕಾರಿ ಉದ್ಯೋಗಿ

ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next