Advertisement

‘ಮದ್ಯ ಮುಕ್ತ ಸಂಕಲ್ಪದಿಂದ ನೆಮ್ಮದಿ’

02:46 PM Apr 03, 2019 | Naveen |

ಬೆಳ್ತಂಗಡಿ : ದೃಢ ಸಂಕಲ್ಪದೊಂದಿಗೆ ವ್ಯಸನ ಮುಕ್ತರಾಗಿ ಸಾರ್ಥಕ ಜೀವನ ಕಂಡುಕೊಂಡಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿಯೊಂದಿಗೆ ಸಮಾಜ ಗೌರವ ಸಂಪಾದಿಸಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಮಂಗಳವಾರ ಮದ್ಯ ವ್ಯಸನ ಮುಕ್ತರು ಮತ್ತು ಅವರ ಕುಟುಂಬದವರ ಶತದಿನೋತ್ಸವ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮನೋವಿಕೃತಿ, ರಾಕ್ಷಸಿ ಪ್ರವೃತ್ತಿಯನ್ನು ಬೆಳೆಸುವ ಮದ್ಯ ವ್ಯಸನದಿಂದ ಕುಟುಂಬ ನೆಮ್ಮದಿ ಕಳೆದುಕೊಳ್ಳುತ್ತದೆ. ಕುಟುಂಬದ ನೆಮ್ಮದಿಗಾಗಿ ಮದ್ಯವರ್ಜನ ಮಾಡುವ ಶಪಥ ತೊಡಬೇಕು ಎಂದು ಹೇಳಿದರು. ನೂರು ದಿನಗಳ ಕಾಲ ಶಿಬಿರದಲ್ಲಿ ಪಟ್ಟ ಕಷ್ಟಕ್ಕಿಂತ ಬಳಿಕ ಸಂಪಾದಿಸುವ ಗೌರವ ಜೀವನಪೂರ್ತಿ ನೆಲೆಸುತ್ತದೆ. ಇದನ್ನರಿತು ದೃಢ ಸಂಕಲ್ಪ ತೊಟ್ಟು ಮನುಷ್ಯರಂತೆ ಕುಟುಂಬದೊಂದಿಗೆ ಪ್ರೀತಿ ಪಾತ್ರರಾಗಿ ಬದುಕು ನಡೆಸಿ ಎಂದು ಶಿಬಿರಾರ್ಥಿಗಳಿಗೆ ಹೇಳಿದರು.

ಮಂಡ್ಯದ ಶ್ರೀಲಕ್ಷ್ಮೀ, ಕಡೂರಿನ ಶಿವಮೂರ್ತಿ ವ್ಯಸನ ಮುಕ್ತರಾದ ಬಳಿಕ ಕುಟುಂಬದಲ್ಲಾದ ಪರಿವರ್ತನೆ, ಶಾಂತಿ, ನೆಮ್ಮದಿ ಜೀವನ ನಡೆಸುತ್ತಿರುವ ಕುರಿತು ತಮ್ಮ ಅನುಭವ ಹಂಚಿಕೊಂಡರು.

ಹೊನ್ನಾವರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್‌ ಶೇಟ್‌, ರಾಯಭಾಗ್‌ನ ಶ್ರೀ ಶೆಲ್‌, ಹಿರಿಯೂರಿನ ಭಾಗ್ಯಲಕ್ಷ್ಮೀ, ಮುದ್ದೂರಿನ ಕರಣ, ಬಾದಾಮಿಯ ಡಾ| ಎಂ.ವೈ. ಕಿತ್ತಾಳೆ, ಮಹೇಶ್‌ ಅರಸಿಕೆರೆ, ರಮೇಶ್‌, ಚನ್ನಪ್ಪ, ಸತೀಶ್‌ ಗೌಡ, ಮೇಲ್ವಿಚಾರಕರು, ಯೋಜನಾಧಿಕಾರಿಗಳು, ಆರೋಗ್ಯ ಸಹಾಯಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

ಎರಡು ಸಾವಿರ ಮಂದಿ ವ್ಯಸನ ಮುಕ್ತರು ಮತ್ತು ಕುಟುಂಬಸ್ಥರು ಸಮಾವೇಶದಲ್ಲಿ ಭಾಗವಹಿಸಿದರು. ಶಿಬಿರಾರ್ಥಿಗಳಿಗೆ ನವಜೀವನ ಬ್ಯಾಜ್‌ ವಿತರಿಸಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್‌ ಪಾಯಿಸ್‌ ಸ್ವಾಗತಿಸಿದರು. ಯೋಜನಾಧಿಕಾರಿ ತಿಮ್ಮಯ ನಾಯ್ಕ ವಂದಿಸಿದರು. ಉತ್ತಮ ಸಾಧನೆ ಮಾಡಿದ ನವಜೀವನ ಸದಸ್ಯರಾದ ಮಂಡ್ಯ ನಾಗಮಂಗಲದ ಕೃಷಾಚಾರ್ಯ, ದಾವಣಗೆರೆಯ ಎಲ್‌. ಎಚ್‌. ಉಮೇಶ್‌, ಮಂಡ್ಯದ ಎ.ಆರ್‌. ಆನಂದ್‌, ಬೆಳಗಾವಿ ಅಥಣಿಯ ಭೀಮಪ್ಪ ಮರ್ಯಾಣಿ, ಚನ್ನರಾಯಪಟ್ಟಣದ ಯೋಗಾನಂದ ಅವರಿಗೆ ಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಡಾ| ಹೆಗ್ಗಡೆಯವರು ಗೌರವಿಸಿದರು.

ಆಯುಷ್ಯ, ಆರೋಗ್ಯ ವೃದ್ಧಿ
ಕಠಿನ ವ್ರತ-ನಿಯಮಗಳ ಪಾಲನೆಯೊಂದಿಗೆ ಆರೋಗ್ಯಪೂರ್ಣ ಜೀವನ ನಡೆಸಬೇಕು. ವ್ಯಸನ ಮುಕ್ತರಲ್ಲಿ ಆದ ಪರಿವರ್ತನೆಯಿಂದಾಗಿ ಆಯುಷ್ಯ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಸಂಸಾರದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ, ಗೌರವ ಹೆಚ್ಚಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಮಹಿಳೆಯರು ಪತಿಯನ್ನು ಪ್ರೀತಿ- ವಿಶ್ವಾಸ, ಗೌರವದಿಂದ ನೋಡಿಕೊಳ್ಳಬೇಕು.
ಡಾ| ಡಿ.ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಧರ್ಮಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next