Advertisement

ಬೆಳ್ತಂಗಡಿ: ಆತಂಕ ಹೆಚ್ಚಿಸಿದ ಪಾಸಿಟಿವ್‌ ಪ್ರಕರಣ

11:32 PM Mar 28, 2020 | Sriram |

ಬೆಳ್ತಂಗಡಿ: ತಾಲೂಕಿನಲ್ಲಿ ಮೊದಲ ಕೋವಿಡ್‌ 19  ಪಾಸಿಟಿವ್‌ ಪ್ರಕರಣ ದೃಢವಾಗುತ್ತಲ್ಲೇ ತಾಲೂಕಿನ ಮಂದಿ ತಮ್ಮ ತಮ್ಮ ಗ್ರಾಮಗಳಿಗೆ ದಿಗ್ಬಂಧನ ಹೇರಿಕೊಂಡಿದ್ದಾರೆ.
ಪ್ರಕರಣ ದೃಢಪಟ್ಟ ಸ್ಥಳದ ಸುತ್ತಮುತ್ತ ಬ್ಯಾರಿಕೇಡ್‌ ಹಾಕಿ ರಸ್ತೆ ಬಂದ್‌ ಮಾಡಿದ್ದು, ಶಾಸಕ ಹರೀಶ್‌ ಪೂಂಜ ಸಹಿತ, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಆರೋಗ್ಯಾಧಿಕಾರಿ ಡಾ| ಕಲಾಮಧು ಸಹಿತ ತಾಲೂಕು ಆಡಳಿತ ಭೇಟಿ ನೀಡಿ ಪರಿಶೀಲಿಸಿದೆ.

Advertisement

ಜಿಲ್ಲೆ ಸಂಪೂರ್ಣ ಬಂದ್‌ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದಲೇ ಹಾಲು, ಔಷಧ ಸಹಿತ ಯಾವುದೇ ಅಂಗಡಿ ಮುಂಗಟ್ಟು ತೆರಯಲಿಲ್ಲ. ವಾಹನಗಳು ರಸ್ತೆಗಿಳಿಯಲಿಲ್ಲ. ತಾಲೂಕಿನಲ್ಲಿ ಈ ವರೆಗೆ 200ಕ್ಕೂ ಅಧಿಕ ಹೋಂ ಕ್ವಾರಂಟೈನರ್‌ಗಳಲ್ಲಿ ಮೊದಲ ಪ್ರಕರಣ ದೃಢವಾಗುತ್ತಲ್ಲೇ ತಾಲೂಕಿನ ಮಂದಿ ಗೊಂದಲಕ್ಕೆ ಒಳಗಾಗಿದ್ದಾರೆ. ಇಳಂತಿಲ ರಸ್ತೆಗೆ ಸ್ಥಳೀಯರು ಮಣ್ಣು ರಾಶಿ ಹಾಕಿ ಬಂದ್‌ ಮಾಡಿದ್ದಾರೆ.

ವಿವಿಧೆಡೆ ಓಡಾಡಿದ ಸೋಂಕಿತ
ಕರಾಯದಲ್ಲಿ ಶುಕ್ರವಾರ ಸೋಂಕು ದೃಢಪಟ್ಟಿರುವ ವ್ಯಕ್ತಿ ತನ್ನ ಊರಿನಲ್ಲಿ ಅಕ್ಕ ಪಕ್ಕದಮನೆ, ಮಸೀದಿಗಳಿಗೆ ಭೇಟಿ ನೀಡಿದ್ದೂ ಮಾತ್ರವಲ್ಲದೆ ಉಜಿರೆ ಬೆಳ್ತಂಗಡಿ ಪಟ್ಟಣದ ಮೆಡಿಕಲ್‌ ಶಾಪ್‌ ಸಹಿತ ಕಂಡ ಕಂಡಲ್ಲೆಲ್ಲ ಓಡಾಡಿದ್ದಾರೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.

52 ಮೆಡಿಕಲ್‌ ಶಾಪ್‌ ಬಂದ್‌!
ತಾಲೂಕಿನಲ್ಲಿ ಔಷಧ ಹಾಲು ಮಾರಾಟ ಮಾಡಲು ಅವಕಾಶವಿದ್ದರೂ ಕೋವಿಡ್‌ 19 ಆತಂಕ ಎಲ್ಲರನ್ನೂ ಮನೆಯಲ್ಲೆ ಇರುವಂತೆ ಮಾಡಿದೆ. ಕೆಎಂಎಫ್‌ನಿಂದಲೂ ಸರಬರಾಜು ಆಗದೇ ಇರುವುದರಿಂದ ಹಾಲು, ಮೊಸರು ವಿತರಣೆಯಾಗಿಲ್ಲ.

ಮತ್ತೂಂದೆಡೆ ಬೆಳ್ತಂಗಡಿ ತಾಲೂಕಿನ 52 ಔಷಧ ಮಳಿಗೆಗಳನ್ನು ಬಂದ್‌ ಮಾಡುವಂತೆ ಔಷಧ ವ್ಯಾಪಾರಸ್ಥರ ಸಂಘ ತೀರ್ಮಾನ ಕೈಗೊಂಡು ಬಂದ್‌ ಮಾಡಿದವು. ಮತ್ತೂಂದೆಡೆ ತಾಲೂಕಿನ 66ಕ್ಕೂ ಅಧಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಶನಿವಾರ ಬೆಳಗ್ಗೆ ಹಾಲು ಸಂಗ್ರಹಿಸಿದ್ದು, ಸಂಜೆ ಹಾಲು ಸಂಗ್ರಹಿಸದಂತೆ ಮೇಲಧಿಕಾರಿಗಳಿಂದ ಸೂಚನೆ ಬಂದಿದೆ.
ರವಿವಾರದಿಂದ ಎರಡು ಹೊತ್ತಿನ ಹಾಲು ಸಂಗ್ರಹ ರದ್ದುಗೊಳಿಸಲಿವೆ.

Advertisement

ಪತ್ರಿಕಾ ವಿತರಣೆಗೆ ಅಡ್ಡಿ
ಮುಂಜಾನೆ ಉಜಿರೆಯಲ್ಲಿ ದಿನ ಪತ್ರಿಕೆ ವಿತರಣೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಪರಿಣಾಮ ಸುಮಾರು 1,200 ರಷ್ಟು ಪತ್ರಿಕೆಗಳು ವಿತರಣೆಯಾಗಿಲ್ಲ. ಈ ಕುರಿತು ವೃತ್ತ ನಿರೀಕ್ಷಕರ ಗಮನಕ್ಕೆ ತರಲಾಗಿದ್ದು, ರವಿವಾರದಿಂದ ಪತ್ರಿಕೆ, ಹಾಲು ವಿತರಣೆಗೆ ಅಡ್ಡಿಪಡಿಸದಂತೆ ಪೊಲೀಸ್‌ ಸಿಬಂದಿಗೆ ಸೂಚನೆ ನೀಡುವುದಾಗಿ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ., ಎಸ್‌.ಐ. ನಂದಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next