ಬೆಳ್ತಂಗಡಿ : ಬೆಳ್ತಂಗಡಿ ನಗರ ಪಂಚಾಯತ್‌ಗೆ ಸರಕಾರದಿಂದ 4.45 ಕೋ.ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.
ಅವರು ರವಿವಾರ ಇಲ್ಲಿನ ನ.ಪಂ. ಸಮೀಪ ನ.ಪಂ. ವತಿಯಿಂದ 2016-17ನೇ ಸಾಲಿನ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ 8.5 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು. ಸೋಮಾವತಿ ನದಿಗೆ ಕಿಂಡಿ ಅಣೆಕಟ್ಟು ರಚನೆಗೆ 85 ಲಕ್ಷ ರೂ., ಸೋಮಾವತಿ ನದಿಗೆ ತಡೆಗೋಡೆ ರಚನೆಗೆ 60 ಲಕ್ಷ ರೂ., ನ.ಪಂ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 3 ಕೋ.ರೂ. ಮಂಜೂರಾಗಿದೆ ಎಂದರು.
ವಿದ್ಯಾರ್ಥಿ ವೇತನವನ್ನು ಸದುಪಯೋಗಪಡಿಸಿಕೊಳ್ಳಿ, ವಿದ್ಯಾರ್ಥಿ ಜೀವನ ಸುಗಮವಾಗಿದ್ದರೆ ನಾವು ಜೀವನ ಪರ್ಯಂತ ಸುಖದಿಂದಿರಲು ಸಾಧ್ಯ. ಹೆತ್ತವರು ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಬೇಕು. ಕಲಿಯುವ ವಯಸ್ಸಿನಲ್ಲಿ ದುಡಿಯಲು ಕಳುಹಿಸಬಾರದು. ಮಕ್ಕಳು ಕಲಿತರೆ ಹೆತ್ತವರಿಗೆ ಅದೇ ದೊಡ್ಡ ಸಂಪತ್ತು ಎಂದರು.
ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅಧ್ಯಕ್ಷತೆ ವಹಿಸಿ, 10ನೇ ತರಗತಿಯ 10 ವಿದ್ಯಾರ್ಥಿಗಳಿಗೆ ತಲಾ 2,000 ರೂ.ಗಳಂತೆ 20 ಸಾವಿರ ರೂ., ಪಿಯುಸಿಯ 26 ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂ.ಗಳಂತೆ 78,000 ರೂ., ಪದವಿಯ 11 ವಿದ್ಯಾರ್ಥಿಗಳಿಗೆ ತಲಾ 4,000 ರೂ.ಗಳಂತೆ 44 ,000 ರೂ., ವೃತ್ತಿ ಶಿಕ್ಷಣದ 11 ವಿದ್ಯಾರ್ಥಿಗಳಿಗೆ ತಲಾ 4,000 ರೂ.ಗಳಂತೆ 44,000 ರೂ., ಸ್ನಾತಕೋತ್ತರದ ಒಬ್ಬ ವಿದ್ಯಾರ್ಥಿಗೆ 6 ಸಾವಿರ ರೂ.ಯನ್ನು ಶೇ.24.1ರ ಯೋಜನೆಯಡಿ ನೀಡಲಾಗಿದೆ. ಶೇ.7.25ರ ಯೋಜನೆಯಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಒಟ್ಟು 4.06 ಲಕ್ಷ ರೂ. ನೀಡಲಾಗಿದೆ. ಶೇ. 3ರ ಯೋಜನೆಯಡಿ 42 ಮಂದಿಗೆ ತಲಾ 6,000 ರೂ.ಗಳಂತೆ 2.52 ಲಕ್ಷ ರೂ. ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಕೆ. ವಸಂತ ಬಂಗೇರ ಅವರನ್ನು ಸಮ್ಮಾನಿಸಲಾಯಿತು.
ಉಪಾಧ್ಯಕ್ಷ ಡಿ. ಜಗದೀಶ್, ಸ್ಥಾಯೀ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಸದಸ್ಯರಾದ ಮಮತಾ ವಿ. ಶೆಟ್ಟಿ, ನಳಿನಿ ವಿಶ್ವನಾಥ್, ಲಲಿತಾ , ಕವಿತಾ, ಮುಸ್ತರ್‌ಜಾನ್ ಮೆಹಬೂಬ್, ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್ ಉಪಸ್ಥಿತರಿದ್ದರು. ಮಾಜಿ ಸದಸ್ಯ ಮೆಹಬೂಬ್ ಕಾರ್ಯಕ್ರಮ ನಿರ್ವಹಿಸಿದರು.